Advertisement

ಸಂಚಾರಕ್ಕೆ ತೆರೆದುಕೊಂಡ ಹಟ್ಟಿಕುದ್ರು ಸೇತುವೆ

11:43 AM Sep 19, 2022 | Team Udayavani |

ಬಸ್ರೂರು: ಹಟ್ಟಿಕುದ್ರು ಭಾಗದ ಜನರ ಸುಮಾರು 7 ದಶಕಗಳ ಹಿಂದಿನಿಂದಲೂ ಬೇಡಿಕೆಯಾಗಿದ್ದ ಸೇತುವೆ ಬೇಡಿಕೆ ಕೊನೆಗೂ ಈಡೇರಿದ್ದು, ಈಗ ಸೇತುವೆ ಕಾಮಗಾರಿ ಪೂರ್ಣಗೊಂಡು, ಸಂಚಾರಕ್ಕೂ ತೆರೆದುಕೊಂಡಿದೆ.

Advertisement

ಬಸ್ರೂರು ಮಂಡಿಬಾಗಿನಿಂದ ಹಟ್ಟಿಕುದ್ರುವರೆಗೆ ವಾರಾಹಿ ನೀರಾವರಿ ನಿಗಮದಿಂದ 14.59 ಕೋ.ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ.

320 ಮೀ. ಉದ್ದವಿರುವ ಈ ಸೇತುವೆಗೆ 18 ಪಿಲ್ಲರ್‌ಗಳು ಹಾಗು ಎರಡೂ ತುದಿಗಳಲ್ಲಿ ಎರಡು ಅಪಾರ್ಟ್‌ಮೆಂಟ್‌ ಗಳಿವೆ. ಘನ ವಾಹನ ಸಂಚರಿಸುವಷ್ಟು, ಅಗಲವಾದ ಹಟ್ಟಿಕುದ್ರು ಸೇತುವೆ ಮೇಲೆ ಪ್ರಸ್ತುತ ಜನ ಹಾಗೂ ವಾಹನಗಳು ಸರಾಗವಾಗಿ ಸಂಚರಿಸುತ್ತಿವೆ.

70 ವರ್ಷದ ಬೇಡಿಕೆ

ಸುಮಾರು ಎಪ್ಪತ್ತು ವರ್ಷಗಳ ಹಟ್ಟಿಕುದ್ರು ದ್ವೀಪವಾಸಿಗಳ ಕನಸು ಈಗ ನನಸಾಗಿದೆ. ಆಸ್ಪತ್ರೆ, ಕಾಲೇಜು ಮತ್ತಿತರ ತುರ್ತು ಸಂದರ್ಭಗಳಲ್ಲಿ ಹಟ್ಟಿಕುದ್ರು ನಿವಾಸಿಗಳು ಈಗ ನೇರವಾಗಿ ಕುಂದಾಪುರಕ್ಕೆ ಸಾಗಬಹುದಾಗಿದೆ. ಎರಡು ವರ್ಷಗಳ ಹಿಂದೆ ಮಾಜಿ ಶಾಸಕ, ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆಯವರು ಹಟ್ಟಿಕುದ್ರುವಿನಲ್ಲಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಅಂದಿನ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ ಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ಅನುದಾನ ಮಂಜೂರಾಗಿತ್ತು. ಶಾಲಾ ಕಾಲೇಜಿಗೆ ಸಾಗುವ ವಿದ್ಯಾರ್ಥಿಗಳು ಈಗ ನೇರವಾಗಿ ಬಸ್ರೂರನ್ನು ತಲುಪಬಹುದಾಗಿದೆ. ಹಟ್ಟಿಕುದ್ರು ಕಡೆಯಿಂದ ಸಾಗುವ ರಸ್ತೆ ಅಗಲವಾಗಿದ್ದು, ಬಸ್ರೂರು ಮಂಡಿಕೇರಿಯಲ್ಲಿ ಸಾಗುವ ರಸ್ತೆ ಅಗಲ ಕಿರಿದಾಗಿದ್ದು, ಘನ ವಾಹನ ಸಂಚಾರಕ್ಕೆ ತೊಡಕಾಗಿದೆ.

Advertisement

ಸುದಿನ ವರದಿ

ಹಟ್ಟಿಕುದ್ರು ಸೇತುವೆ ಬೇಡಿಕೆ ಬಗ್ಗೆ, ಕಾಮಗಾರಿ ವಿಳಂಬ, ಸ್ಥಗಿತಗೊಂಡಿದ್ದ ಕುರಿತಂತೆ “ಉದಯವಾಣಿ ಸುದಿನ’ವು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.

ಸಂಕಷ್ಟಕ್ಕೆ ಮುಕ್ತಿ: ಹಟ್ಟಿಕುದ್ರು ಸೇತುವೆಯಾಗಿರುವುದರಿಂದ ನನ್ನಂತಹ ನೂರಾರು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇಷ್ಟು ದಿನಗಳ ಕಷ್ಟಕರವಾದ ದೋಣಿ ಸಂಚಾರದ ಸಂಕಟಕ್ಕೆ ಮುಕ್ತಿ ಸಿಕ್ಕಂತಾಗಿದೆ. – ಆಶಾ ಹಟ್ಟಿಕುದ್ರು, ಕಾಲೇಜು ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next