Advertisement

ಹುಲ್ಲಿನ ಗುಡಿಸಲಿನಲ್ಲಿ ಆರಂಭವಾದ ಶಾಲೆಗೀಗ 104ರ ಸಂಭ್ರಮ

09:35 PM Nov 17, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕುಂದಾಪುರ: ದಾನಿಯೊಬ್ಬರ ತೋಟದಲ್ಲಿರುವ ಹುಲ್ಲಿನ ಗುಡಿಸಲಲ್ಲಿ ಆರಂಭವಾದ ಹಟ್ಟಿಯಂಗಡಿಯ ಸರಕಾರಿ ಹಿ.ಪ್ರಾ. ಶಾಲೆಗೆ ಈಗ 104ನೇ ವರ್ಷದ ಸಂಭ್ರಮ. 1915ರಲ್ಲಿ ಆರಂಭವಾದ ಈ ಶಾಲೆ ಶತಮಾನ ಕಳೆದರೂ ಕೂಡ ಈಗಲೂ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವುದು ಮಾತ್ರ ವಿಪರ್ಯಾಸ.

ಇತಿಹಾಸ ಪ್ರಸಿದ್ಧ ಸಿದ್ಧಿ ವಿನಾಯಕ, ಲೋಕನಾಥೇಶ್ವರ, ಮಾರಲದೇವಿ, ಜೈನ ಬಸದಿಯಂತಹ ಪ್ರಮುಖ ಧಾರ್ಮಿಕ ಸ್ಥಳಗಳ ನೆಲೆಬೀಡಾಗಿರುವ ಹಟ್ಟಿಯಂಗಡಿ ಎನ್ನುವ ಊರಿನಲ್ಲಿ 1915 ರ ಫೆ. 13ರಂದು ಈ ಶಾಲೆ ಆರಂಭವಾಯಿತು. ಆರಂಭದ ದಿನಗಳಲ್ಲಿ 150ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರಂತೆ. ಶಿವು ಮಾಸ್ಟರ್‌ ಎನ್ನುವವರು ಮೊದಲ ಮುಖ್ಯೋಪಾಧ್ಯಾಯರಾಗಿದ್ದಾರೆ.

52 ಮಕ್ಕಳು
ಹುಲ್ಲಿನ ಗುಡಿಸಲಿನಿಂದ ಮುಂದೆ ಕೆಲ ವರ್ಷಗಳಲ್ಲಿ ಹೆಂಚಿನ ಮಾಡಿನ ಶಾಲೆ ನಿರ್ಮಿಸಿ, ಮುಂದೆ ಸುಮಾರು 50 ವರ್ಷಗಳ ಹಿಂದೆ ಈಗಿರುವ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ, ಅಲ್ಲಿ ಶಾಲಾ ಚಟುವಟಿಕೆ ಆರಂಭಗೊಂಡಿತು. ಈಗ ಸರಕಾರ ನೀಡಿರುವ 50 ಸೆಂಟ್ಸ್‌ ವಿಸ್ತೀರ್ಣದಲ್ಲಿ ಶಾಲಾ ಕಟ್ಟಡವಿದ್ದು, ದಾನಿಯೊಬ್ಬರು ನೀಡಿದ 20 ಸೆಂಟ್ಸ್‌ ಜಾಗದಲ್ಲಿ ಮಕ್ಕಳಿಗೆ ಆಟದ ಮೈದಾನದ ವ್ಯವಸ್ಥೆ ಮಾಡಿಕೊಡಲಾಗಿದೆ. 8 ವರ್ಷಗಳ ಹಿಂದೆ ಈ ಶಾಲೆಯಲ್ಲಿ 100 ಕ್ಕೂ ಮಿಕ್ಕಿ ಮಂದಿ ಮಕ್ಕಳಿದ್ದರೆ, ಪ್ರಸ್ತುತ ಇಲ್ಲಿ 1ರಿಂದ 7ನೇ ತರಗತಿಯವರೆಗೆ 52 ಮಕ್ಕಳು ಕಲಿಯುತ್ತಿದ್ದಾರೆ.

ಸಾಧಕ ವಿದ್ಯಾರ್ಥಿಗಳು
ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿದ್ದ ದಿ| ರಾಮಚಂದ್ರ ಭಟ್‌, ಈಗಿನ ಧರ್ಮದರ್ಶಿ ಬಾಲಚಂದ್ರ ಭಟ್‌, ಇಲ್ಲಿನ ಜೈನ ಬಸದಿಯ ಅರ್ಚಕರಾಗಿದ್ದ ದಿ| ಚಂದ್ರರಾಜ ಅರಸ್‌, ಬ್ಯಾಂಕಿನ ಪ್ರಬಂಧಕರಾಗಿದ್ದ ಹರಿದಾಸ್‌ ಭಂಡಾರಿ, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಪ್ರಬಂಧಕರಾಗಿರುವ ಹಟ್ಟಿಯಂಗಡಿ ಉದಯ ಕುಮಾರ್‌ ಸೇರಿದಂತೆ ಅನೇಕ ಮಂದಿ ವಿದ್ಯಾರ್ಥಿಗಳು ಇಲ್ಲಿ ಕಲಿತು, ಈಗ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಆಚರಣೆಯೇ ಇಲ್ಲ
ಈ ಶಾಲೆ ಆರಂಭವಾಗಿದ್ದರೂ, ಇನ್ನೂ ಶತಮಾನೋತ್ಸವ ಆಚರಣೆಯೇ ಆಗಿಲ್ಲ. 100 ವರ್ಷ ಆದಾಗ ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಊರವರೆಲ್ಲ ಸೇರಿ ಸಮಿತಿ ಎಲ್ಲ ಮಾಡಿ, ಆಚರಣೆಗೆ ಸಿದ್ಧತೆ ಮಾಡಿದರೂ ಅದು ಕೈಗೂಡಿಲ್ಲ. ಆಗ ಹಟ್ಟಿಯಂಗಡಿ, ಹಟ್ಟಿಕುದ್ರು, ಕರ್ಕಿ, ಕನ್ಯಾನ, ಕೂಡ್ಲು, ಸಬ್ಲಾಡಿ, ಗುಡ್ಡೆಯಂಗಡಿ ಪ್ರದೇಶಗಳಿಂದ ಮಕ್ಕಳು ಇಲ್ಲಿಗೆ ಬರುತ್ತಿದ್ದರು. ಈಗ ಹಟ್ಟಿಯಂಗಡಿ,ಕರ್ಕಿ ಕಡೆಯಿಂದ ಮಾತ್ರ ಬರುತ್ತಾರೆ.
ಶಾಲೆಗೆ ಸುವ್ಯವಸ್ಥಿತ ಆಟದ ಮೈದಾನವಿಲ್ಲ, ಸುತ್ತಲೂ ಆವರಣ ಗೋಡೆಯಿಲ್ಲ, ಮುಖ್ಯ ಶಿಕ್ಷಕರು ನಿವೃತ್ತಿಯಾಗಿ ಹಲವು ತಿಂಗಳಾಯಿತು, ತರಗತಿಗೊಬ್ಬರು ಶಿಕ್ಷಕರ ಬೇಡಿಕೆಯ ಜತೆಗೆ ಕುಡಿಯುವ ನೀರಿನ ಘಟಕದ ಅವಶ್ಯಕತೆಯೂ ಇದೆ.

ಹಟ್ಟಿಯಂಗಡಿಯ ಶಾಲೆ ನನ್ನಂತಹ ಅನೇಕ ಮಕ್ಕಳ ಭವಿಷ್ಯ ರೂಪಿಸಿರುವ ಜ್ಞಾನ ದೇಗುಲ. ನಾನೇನಾ ದರೂ ಸಣ್ಣ ಮಟ್ಟದ ಸಾಧನೆ ಮಾಡಿದ್ದರೂ ಕೂಡ ಅದಕ್ಕೆ ಮೊದಲ ಮೆಟ್ಟಿಲಾಗಿದ್ದು ಈ ಶಾಲೆ. ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಪ್ರಸ್ತುತ ಶಾಲಾಭಿವೃದ್ಧಿ ಸಮಿತಿ ಸದಸ್ಯನಾಗಿ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷನಾಗಿದ್ದೇನೆ.
-ಉದಯ ಕುಮಾರ್‌ ಹಟ್ಟಿಯಂಗಡಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಿಇಒ, ಹಳೆ ವಿದ್ಯಾರ್ಥಿ

ಈ ಶಾಲೆಗೆ ನೂರು ವರ್ಷ ಆಗಿದ್ದು, ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಸ್ಮಾರ್ಟ್‌ ಕ್ಲಾಸ್‌, ಲ್ಯಾಪ್‌ಟಾಪ್ , ಸುಣ್ಣ- ಬಣ್ಣ ಬಳಿಯುವ ಜತೆಗೆ ಇಂಗ್ಲಿಷ್‌ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯ ಆಗಬೇಕಿದೆ.
-ಸರಸ್ವತಿ ಎ., ಮುಖ್ಯ ಶಿಕ್ಷಕರು (ಪ್ರಭಾರ)

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next