ಗೋಣಿಕೊಪ್ಪಲು: ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಗುತ್ತಿರುವ ಬಸವೇಶ್ವರ ಬಡಾವಣೆಗೆ ವಸತಿ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಗ್ರಾ.ಪಂ. ಮುಂದಾಗುತ್ತಿಲ್ಲ ಎಂದು ಬುಡಕಟ್ಟು ಕಾರ್ಮಿಕರ ಸಂಘ ಮತ್ತು ಬಸವೇಶ್ವರ ಬಡಾವಣೆ ನಿವಾಸಿಗಳು ಹಾತೂರು ಗ್ರಾ.ಪಂ. ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು.
ಕಳೆದ ಎರಡು ದಿನಗಳಿಂದ ಬುಡಕಟ್ಟು ಕಾರ್ಮಿಕ ಸಂಘದ ಸಂಚಾಲಕ ವೈ.ಬಿ. ಗಪ್ಪು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹಕ್ಕೆ ಬಡಾವಣೆ ನಿವಾಸಿಗಳು ಮುಂದಾದರು.
ಹಾತೂರು ಗ್ರಾ.ಪಂ. ಪಂಚಾಯಿತಿ ಅಧಿಕಾರಿ ಬಡಾವಣೆಯ ಮುಂದುವರಿಕೆ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದ ಇವರು ಹಕ್ಕು ಪತ್ರ ನೀಡಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಆಭಿವೃದ್ದಿ ಕಾರ್ಯಗಳು ನಡೆದಿರುವುದಿಲ್ಲ. ಹೀಗಾಗೀ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ವೈ.ಬಿ. ಗಪ್ಪು ತಿಳಿಸಿದರು.
ಗ್ರಾ.ಪಂ. ಆವರಣದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಪ್ರತಿಭಟನಾ ಸ್ಥಳಕ್ಕೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತಕ್ಷಣವೇ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ, ತಾಲ್ಲೂಕು ಐ.ಟಿ.ಡಿ.ಪಿ. ಅಧಿಕಾರಿ ಮತ್ತು ಗ್ರಾ.ಪಂ ಉಪಾಧ್ಯಕ್ಷರಿಗೆ ದೂರವಾಣಿ ಕರೆಮಾಡಿ ಸ್ಥಳಕ್ಕೆ ತಕ್ಷಣವೇ ಬರುವಂತೆ ತಿಳಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸವೇಶ್ವರ ಬಡಾವಣೆಯ ಮನೆಗಳು ಹಾಗೂ ಶೌಚಾಲಯ, ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳವಂತೆ ಸೂಚಿಸಿದರು.
ತದನಂತರ ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿದ ಸಿ.ಕೆ. ಬೋಪಣ್ಣ ಅವರು ಮುಂದಿನ ಹತ್ತು ದಿನದ ಒಳಗೆ ಗುರುತಿಸಿದ ಸ್ಥಳವನ್ನು ಸಮತಟ್ಟು ಮಾಡಿ ಹಕ್ಕು ಪತ್ರದಲ್ಲಿ ನೀಡಿರುವ ಸಂಖ್ಯೆಗೆ ಅನುಗುಣವಾಗಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಿರುವ ಪೂರಕೆ ವ್ಯವಸ್ಥೆ ಮಾಡುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು. ಐ.ಟಿ.ಡಿ.ಪಿ. ಇಲಾಖೆಯಲ್ಲಿ ಹೀಗಾಗಲೇ ರಸ್ತೆ ನಿರ್ಮಾಣಕ್ಕೆ ಬೇಕಾದ ಅನುಧಾನ ಇದೆ. ಮನೆಗಳ ನಿರ್ಮಾಣದ ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು.
ಹಂತ ಹಂತವಾಗಿ ಮೂಲಭೂತ ವ್ಯವಸ್ಥೆಗಳನ್ನು ಸಮರ್ಪಕವಾಗಿ ನೀಡಲಾಗುವುದು. ಹೀಗಾಗಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟು ಅಧಿಕಾರಿ ಹಾಗೂ ಜನಪ್ರತಿನಿಧಿಗಳಲ್ಲಿ ವಿಶ್ವಾಸವಿಡುವಂತೆ ಪ್ರತಿಭಟನಾಗಾರರ ಮನವೊಲಿಸಿದರು. ಇದಕ್ಕೆ ಪ್ರತಿಭಟನಾಗಾರರು ಆದಷ್ಟು ಬೇಗ ಮಳೆಗಾಲ ಪ್ರಾರಂಭಕ್ಕೂ ಮೊದಲು ಮನೆ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮೇಲೆ ವಿಶ್ವಾಸವಿಟ್ಟು ಧರಣಿ ಸತ್ಯಾಗ್ರಹವನ್ನು ಹಿಂಪಡೆಯುತ್ತಿದ್ದೇವೆ ಎಂದು ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನಾಗಾರರನ್ನು ಉದ್ದೇಶಿಸಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಮಾತನಾಡಿ ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ. ನಮ್ಮ ಅವಧಿಯಲ್ಲಿ ಶೀಘ್ರಗತಿಯಲ್ಲಿ ಬಡಾವಣೆಯ ಚಟುವಟಿಕೆಗಳು ನಡೆಯುತ್ತಿದೆ. ಪ್ರತಿಭಟಿಸುವ ಮೂಲಕ ಯಾವುದೇ ಅಭಿವೃದ್ದಿ ಸಾಧ್ಯವಾಗುವುದಿಲ್ಲ. ಕಾನೂನು ನಿಯಮಗಳಂತೆ ಪ್ರಗತಿ ಹಂತವನ್ನು ಮುಟ್ಟಬೇಕು. ಹೀಗಾಗಿ ಪ್ರತಿಭಟನೆಯನ್ನು ಕೈಬಿಡುವಂತೆ ಪ್ರತಿಭಟನಾಗಾರರ ಮನವೊಲಿಸಿದರು.