ಉತ್ತರಪ್ರದೇಶ: ಹತ್ರಾಸ್ ಅತ್ಯಾಚಾರ ಮತ್ತು ಹತ್ಯೆ ಸಂತ್ರಸ್ತೆಯ ಪ್ರಕರಣವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸಿಬಿಐಗೆ ವಹಿಸಿದ ನಂತರವೂ ಇದೀಗ ವಿಶೇಷ ತನಿಖಾ ದಳ (ಎಸ್ ಐಟಿ) ಭಾನುವಾರ ಸಂತ್ರಸ್ತೆಯ ಕುಟುಂಬಸ್ಥರಿಂದ ಹೇಳಿಕೆಗಳನ್ನು ಪಡೆದಿದೆ.
ಹಿರಿಯ ಐಪಿಎಸ್ ಅಧಿಕಾರಿ ಭಗವಾನ್ ಸ್ವರೂಪ್ ಎಸ್ ಐಟಿ ಯ ನೇತೃತ್ವ ವಹಿಸಿದ್ದಾರೆ, ಸಿಬಿಐಗೆ ಪ್ರಕರಣ ವಹಿಸಿದ್ದರೂ ಮತ್ತೆ ಎಸ್ ಐಟಿ ತಂಡ ತನಿಖೆ ನಡೆಸುತ್ತಿರುವುದು ಕುತೂಹಲಕ್ಕೆ ಎಡೆಮಾಡಿದೆ. ಆದಾಗ್ಯೂ ಸಂತ್ರಸ್ತೆಯ ಕುಟುಂಬವು ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕೆಂದು ಆಗ್ರಹಿಸಿದೆ. ಈ ಪ್ರಕರಣ ದೇಶದ ಹಲವೆಡೆ ಆಕ್ರೋಶ ಮತ್ತು ಪ್ರತಿಭಟನೆಗಳನ್ನು ಹುಟ್ಟುಹಾಕಿದೆ.
ಇದೀಗ ಹತ್ರಾಸ್ ಬೂಲ್‌ಗಾರಿ ಗ್ರಾಮದಲ್ಲಿ ಇರುವ ಎಸ್‌ಐಟಿ ತಂಡವು ಸಂಬಂಧಪಟ್ಟ ಜನರೊಂದಿಗೆ ಹೇಳಿಕೆಗಳನ್ನು ಪಡೆಯುತ್ತಿದೆ, ಮಾತ್ರವಲ್ಲದೆ “ಈ ಪ್ರಕರಣದ ಕುರಿತು ಯಾರಾದರೂ ಹೇಳಿಕೆ ನೀಡಲು ಬಯಸಿದರೆ ಅವರಿಗೆ ಮುಕ್ತ ಸ್ವಾಗತವಿದೆ” ಎಂದು ತಿಳಿಸಿದ್ದಾರೆ. ಈ ತಂಡವು ಕಳೆದ ಗುರುವಾರ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಅಪರಾಧ ನಡೆದ ಸ್ಥಳಕ್ಕೂ ಭೇಟಿ ನೀಡಿತ್ತು.
ಇದನ್ನೂ ಓದಿ: ಅತ್ಯಾಚಾರ-ಕೊಲೆ ಖಂಡಿಸಿ ಪ್ರತಿಭಟನೆ : ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ
ಸೆಪ್ಟೆಂಬರ್ 14 ರಂದು ದಲಿತ ಯುವತಿಯ ಮೇಲೆ ನಾಲ್ವರು ಮೇಲ್ಜಾತಿ ಪುರುಷರು ಅತ್ಯಾಚಾರ ಎಸಗಿದ್ದರು. ಮಾತ್ರವಲ್ಲದೆ ತೀವ್ರ ತರವಾದ ಹಲ್ಲೆ ನಡೆಸಿದ್ದರಿಂದ ದೆಹಲಿ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಳು. ಏತನ್ಮಧ್ಯೆ ಉತ್ತರಪ್ರದೇಶ ಪೊಲೀಸರು ಕೂಡ ಸಂತ್ರಸ್ತೆಯ ಕುಟುಂಬಸ್ಥರ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇದರಿಂದ ಉತ್ತರಪ್ರದೇಶ ಪೊಲೀಸರು ಮತ್ತು ಸರ್ಕಾರದ ವಿರುದ್ದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಸೀಟು ಹಂಚಿಕೆಯಲ್ಲಿ 50-50 ಸೂತ್ರ ಅನುಸರಿಸಿದ ಜೆಡಿಯು-ಬಿಜೆಪಿ: ವರದಿ