ರಬಕವಿ–ಬನಹಟ್ಟಿ: ಎಐಎಂಐಎ ಪ್ರಮುಖ ಅಸಾವುದ್ದೀನ್ ಓವೈಸಿ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಸ್ವಾಮೀಜಿ ಮತ್ತು ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸ್ಥಳೀಯ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಧಿಶರು ಸೋಮವಾರ ಮುಕ್ತಗೊಳಿಸಿದ್ದಾರೆ.
2013ರಲ್ಲಿ ತೇರದಾಳದಲ್ಲಿ ನಡೆದ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಲಯ ಸೋಮವಾರ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿತು. ಸಿದ್ಧಲಿಂಗ ಸ್ವಾಮೀಜಿ ಪರ ವಕೀಲರಾದ ಬಿ.ಎನ್. ಸತ್ತಿಕರ ಮತ್ತು ರವೀಂದ್ರ ಕಾಮಗೊಂಡ ವಕಾಲತ್ತು ನಡೆಸಿದ್ದರು.
ಹಿಂದುತ್ವಕ್ಕೆ ಸರ್ಕಾರದ ಸ್ಪಂದನೆ
ಹಿಜಾಬ್ ಮತ್ತು ಆಜಾನ್ ವಿಷಯಗಳಲ್ಲಿ ಹಿಂದೆಂದೂ ಯಾವ ಸರ್ಕಾರಗಳೂ ಮುಸ್ಲಿಂ ವಿರುದ್ಧ ಪಿಸುಗುಟ್ಟಿದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಡೀ ದೇಶಕ್ಕೆ ಒಂದೇ ಕಾನೂನು ಜಾರಿಯಡಿ ಸಂವಿಧಾನವನ್ನು ಗಟ್ಟಿಗೊಳಿಸಲು ಸನ್ನದ್ಧರಾಗಿದ್ದಾರೆ. ಇದರಿಂದ ವಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪ್ರತಿಯೊಂದು ಯೋಜನೆ ಹಾಗು ಅನುಷ್ಠಾನಗಳಿಗೆ ವಿರೋಧ ಮಾಡುತ್ತ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಬೊಮ್ಮಾಯಿ ನೇತೃತ್ವದಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಮಸೀದಿಗಳಿಗೆ ನೋಟಿಸ್ ಜಾರಿ ಮಾಡಿದ್ದು ವಿಶೇಷ. ಇದನ್ನೇ ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳು ಮಾದರಿಯನ್ನಾಗಿಸಿಕೊಂಡಿವೆ. ಮುಸ್ಲಿಂರ ಬೂಟಾಟಿಕೆ ಇನ್ನು ಮುಂದೆ ನಡೆಯದು ಎಂದು ಆಂದೋಲಾ ಶ್ರೀ ಗುಡುಗಿದರು.
ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗುಂಜಗಾಂವಿ, ಯಮನಪ್ಪ ಕೋರಿ, ನಂದು ಗಾಯಕವಾಡ, ಆನಂದ ಜಂಬಗಿಮಠ, ರಾಕೇಶ ಮಠ, ಶಿವು ಗುಂಡಿ, ದುಂಡಯ್ಯ ಕಾಡದೇವರ, ಈಶ್ವರ ಕಾಡದೇವರ ಸೇರಿದಂತೆ ಅನೇಕರಿದ್ದರು.