Advertisement

ಆಂಗ್ಲ ಮಾಧ್ಯಮ ಶಾಲೆಗೆ ಧಿಕ್ಕಾರ!

11:36 AM Jul 13, 2019 | Suhan S |

ಕೊಪ್ಪಳ: ಈಗಾಗಲೇ ಹಲವು ಪ್ರಕಾರದ ಸಾಹಿತ್ಯಗಳು ಸೃಷ್ಟಿಯಾಗಿವೆ. ಆದರೆ ಇಂದಿನ ಜನತೆಗೆ ಸಂಸ್ಕೃತಿ, ಭಾಷೆ ಬಗ್ಗೆ ಅರಿವು ಮೂಡಿಸುವ ಕಾಯಕ ನಡೆಯಬೇಕಿದೆ. ಹಾಗಾಗಿ ನೆಲಮೂಲ ಬಿಂಬಿಸುವ ಸಾಹಿತ್ಯ ಹೊರ ಬರಬೇಕಿದೆ ಎಂದು ಇಳಕಲ್ನ ಜನಪದ ಸಾಹಿತಿ ಡಾ| ಶಂಭು ಬಳಿಗಾರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಗೀತೆಗಳ ಮೂಲಕ ಜನರ ಮನ ಮುಟ್ಟುವ ರೀತಿಯಲ್ಲಿ ವಾಸ್ತವಿಕ ವಿಚಾರಗಳನ್ನು ಅಭಿವ್ಯಕ್ತಪಡಿಸಿದರು.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ಇತಿಹಾಸವನ್ನು ಕನ್ನಡ ಸಾಹಿತ್ಯ ಪರಿಷತ್‌ ಇಂದು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಯೋಧರ ಪುಣ್ಯ ಭೂಮಿ ಗಡಿ ಭಾಗದ ಬನ್ನಿಕೊಪ್ಪ ಗ್ರಾಮದಲ್ಲಿ ಸಮ್ಮೇಳನ ಆಯೋಜನೆ ಮಾಡುವ ಮೂಲಕ ಜನರ ಮನೆ ಮಾತಾಗುತ್ತಿದೆ. ಇದರಿಂದ ಕಸಾಪದ ಕೀರ್ತಿ ಇನ್ನಷ್ಟು ಹೆಚ್ಚುತ್ತಿದೆ ಎಂದರು.

ಕವಿರಾಜ ಮಾರ್ಗದಲ್ಲಿ ಕನ್ನಡಿಗರ ಬಗ್ಗೆ ವರ್ಣಿಸಿದ ಪದಗಳಿಗೆ ಮಿತಿಯಿಲ್ಲ. 10ನೇ ಶತಮಾನದ ಮೊದಲು ಎಲ್ಲ ಭಾಷೆಗಳಿಗೂ ಕನ್ನಡವೇ ಲಿಪಿಯಾಗಿತ್ತು ಎನ್ನುವುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. 10ನೇ ಶತಮಾನದ ನಂತರ ಎಲ್ಲ ಭಾಷೆಗಳು ಬೇರೆ ಬೇರೆ ಲಿಪಿ ಮಾಡಿಕೊಂಡವು. ಆದರೆ ಕನ್ನಡಕ್ಕೆ ಮಾತ್ರ ಗಟ್ಟಿತನದ ನೆಲೆ ಸಿಗದಂತ ಸ್ಥಿತಿಗೆ ಬಂದಿದೆ. ಇತಿಹಾಸ ಪುಟ ಅವಲೋಕಿಸಿದರೆ, ಶಿಕ್ಷಣಕ್ಕಾಗಿ ಬೇರೆಡೆ ತೆರಳಿದಾಗ ಅವಮಾನ ಅನುಭವಿಸಿ ಮತ್ತೆ ಕರ್ನಾಟಕಕ್ಕೆ ಬಂದು ಸೇನಾಪಡೆ ಕಟ್ಟುವ ಮೂಲಕ ತನ್ನ ವೈರಿಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ ಮೈಯೂರ ವರ್ಮ ಕನ್ನಡದ ಮೊದಲ ರಾಜನೆಂದೆನಿಸಿಕೊಳ್ಳುತ್ತಾನೆ. ಕನ್ನಡ ಸಾಮ್ರಾಜ್ಯವನ್ನೇ ಕಟ್ಟುತ್ತಾನೆ. ಆತನು ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದಲೇ ಕನ್ನಡ ಭಾಷೆಗಾಗಿ ಎದ್ದು ನಿಲ್ಲುತ್ತಾನೆ. ಹಾಗೆ ಕನ್ನಡಿಗರು ಸ್ವಾಭಿಮಾನಿಗಳು ಕನ್ನಡ ಭಾಷೆಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಇಂದು ಕಸಾಪ ಕನ್ನಡ ಭಾಷೆ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿದೆ. ಇಂದು ಪರಿಷತ್‌ನ ಉದ್ದೇಶಗಳು ವಿಶಾಲವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಪರೀಕ್ಷೆಯಲ್ಲಿ ಕನ್ನಡ ಅಳವಡಿಕೆಗೆ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲಿ. ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಲಿ ಎಂದು ಒತ್ತಾಯಿಸಿದರು.

Advertisement

ಆಂಗ್ಲ ಮಾಧ್ಯಮಕ್ಕೆ ಧಿಕ್ಕಾರ: ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಾದ ಸರ್ಕಾರವೇ ಮುಂದೆ ನಿಂತು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿ. ಪ್ರಸಕ್ತ ವರ್ಷವೇ ಸಾವಿರ ಶಾಲೆಗಳನ್ನು ತೆರೆದಿದೆ. ಇಂಗ್ಲೀಷ್‌ ಅನ್ನು ಭಾಷೆಯಾಗಿ ಕಲಿಯೋಣ. ಆದರೆ ಮಾಧ್ಯಮವಾಗಿ ಕಲಿಯುವುದು ಬೇಡ. ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ನನ್ನ ಧಿಕ್ಕಾರವಿರಲಿ ಎಂದರಲ್ಲದೇ ನೇರವಾಗಿ ಖಂಡಿಸಿದರು. ಮಕ್ಕಳಿಗೆ ಕನ್ನಡ ಭಾಷೆ ಕಲಿಕೆಯ ಬಗ್ಗೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು. ಮಕ್ಕಳು ಆಂಗ್ಲ ಮಾಧ್ಯಮ ಶಾಲೆ ಬಿಟ್ಟು ಕನ್ನಡ ಮಾಧ್ಯಮ ಶಾಲೆಗೆ ಸೇರುವಂತಾಗಬೇಕು. ಶಿಕ್ಷಕರು ಪಠ್ಯ ವಿಷಯ ಕಲಿಸುವ ಜೊತೆಗೆ ಕನ್ನಡ ಪತ್ರಿಕೆ ಓದುವುದನ್ನು ಕಲಿಸಬೇಕು. ಒಂದು ಪತ್ರಿಕೆ ಓದುವುದರಿಂದ ಸಮಗ್ರ ಮಾಹಿತಿ ಸಿಗುತ್ತದೆ. ಮಕ್ಕಳು ಪತ್ರಿಕೆ ಓದುವ ಹವ್ಯಾಸ ಹೆಚ್ಚಿಸಲಿ ಎಂದರು.

ದಾಸೋಹ, ಕಾಯಕ ಸಂಸ್ಕೃತಿ: ನಮ್ಮ ಶರಣರು ದಾಸೋಹ ಮತ್ತು ಕಾಯಕದ ಸಂಸ್ಕೃತಿಯನ್ನು ನಮಗೆ ಕೊಟ್ಟು ಹೋಗಿದ್ದಾರೆ. ಹಂಚಿಕೊಂಡು ತಿನ್ನಿ ಎಂದಿದ್ದಾರೆ. ಆದರೆ ಇಂದು ಮನುಷ್ಯ ಹರಿದು ತಿನ್ನವ ಸಂಸ್ಕೃತಿಯನ್ನು ಕಲಿತಿದ್ದಾನೆ. ನಮ್ಮ ಜನಪದರು ನಿಜ ಜೀವನದಲ್ಲಿ ಬದುಕಿ ತೋರಿದ್ದಾರೆ. ಅವರಂತೆ ನಾವು ನಡೆಯೋಣ. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಹಾಗೆ ನಾವೆಲ್ಲರೂ ಒಟ್ಟಾಗಿ ಬೆಳೆಯೋಣ. ನಮ್ಮವರಿಗೆ ನೆಲಮೂಲ ಸಂಸ್ಕೃತಿ ಬಿಂಬಿಸುವ ಸಾಹಿತ್ಯ ಸೃಷ್ಟಿಯಾಗಲಿ ಎಂದರು.

ಸಗಣಿಯಿಲ್ಲದೇ ಸಾವಯವ ಹೇಗೆ ಸಾಧ್ಯ: ಮೊದಲೆಲ್ಲ ಮನೆಯಲ್ಲಿ ಹತ್ತಾರು ದನಗಳಿರುತ್ತಿದ್ದವು. ಅದರ ಗೊಬ್ಬರವೇ ನಮ್ಮ ಭೂಮಿಗೆ ಬಳಕೆ ಮಾಡುತ್ತಿದ್ದೆವು. ಆದರೆ ಇಂದು ಮನೆಯಲ್ಲಿ ದನಗಳೇ ಇಲ್ಲ. ಸರ್ಕಾರ ಆಧುನಿಕ ಕೃಷಿ ಎಂದು ಹೇಳುತ್ತಲೇ ಜನರ ಕೈಗೆ ಟ್ರ್ಯಾಕ್ಟರ್‌ ಕೊಟ್ಟಿದೆ. ಈಗ ಮತ್ತೆ ಸಾವಯವ ಕೃಷಿ ಮಾಡಿ ಎಂದೆನ್ನುತ್ತಿದೆ. ಟ್ರ್ಯಾಕ್ಟರ್‌ ಏನಾದ್ರೂ ಸಗಣಿ ಹಾಕುತ್ತಾ? ಮನೆಯಲ್ಲಿ ದನಗಳೇ ಇಲ್ಲ ಇನ್ನೂ ಸಾವಯವ ಕೃಷಿ ಮಾಡುವುದು ಹೇಗೆ ಸಾಧ್ಯ? ಎಲ್ಲರನ್ನು ಕರೆದು ಊಟ ಕೊಡುವ ರೈತನ ಬದುಕು ಸರ್ಕಾರದ ಮುಂದೆ ಕಣ್ಣೀರಿಡುತ್ತಲೇ ಮಂಡಿಯೂರಿ ಕೈ ಚಾಚಿ ಬೇಡುವಂತ ಸ್ಥಿತಿಗೆ ಬಂದಿದ್ದಾನೆ. ರೈತರ ಹೆಸರೇಳಿ ನಡೆಯುವ ಕಂಪನಿಗಳು ಶ್ರೀಮಂತಗೊಂಡಿವೆಯೇ ವಿನಃ ರೈತನ ಪರಿಸ್ಥಿತಿ ಹಾಗೆಯೇ ಇದೆ. ದಾರಿಯಲ್ಲಿ ಹೋಗುವ ವ್ಯಕ್ತಿಯನ್ನು ಕರೆದು ದಾನ ಮಾಡುವ ರೈತನ ಬಾಳು ನಿಜಕ್ಕೂ ಶೋಚನೀಯ. ಸರ್ಕಾರ ಇನ್ನಾದರೂ ರೈತನ ಬದುಕಿಗೆ ಆಸರೆಯಾಗಬೇಕಿದೆ ಎಂದು ಸರ್ಕಾರಕ್ಕೆ ತಿವಿಮಾತನ್ನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಟಿ.ವಿ. ಮಾಗಳದ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಜಿಪಂ ಅಧ್ಯಕ್ಷ ಎಚ್. ವಿಶ್ವನಾಥರಡ್ಡಿ, ಧಾರವಾಡ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಮಂಜುನಾಥ ಡೊಳ್ಳಿನ ಉಮಾದೇವಿ, ಯಂಕಣ್ಣ ಯರಾಶಿ, ಕೆ.ಬಿ. ಬ್ಯಾಳಿ, ಶರಣಪ್ಪ ಬಾಚಲಾಪೂರ, ಮಲ್ಲಿಕಾರ್ಜುನ ಗುಡ್ಲಾನೂರು, ಬಸವರಾಜ ಗಡಾದ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next