Advertisement

ಇಂದಿನಿಂದ ಹಾಸನಾಂಬ ಜಾತ್ರೆ

06:00 AM Nov 01, 2018 | Team Udayavani |

ಹಾಸನ: ಪ್ರತಿ ವರ್ಷ ಆಶ್ವಿ‌ಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯ ಮಿಯ ಮರುದಿನ ಬಾಗಿಲು ಮುಚ್ಚುವ ಸಂಪ್ರದಾಯದಂತೆ ಹಾಸನಾಂಬ ದೇಗುಲದ ಬಾಗಿಲು ಗುರುವಾರ ಮಧ್ಯಾಹ್ನ ತೆರೆಯಲಿದೆ. ನ.1 ರಿಂದ 9ರವರೆಗೆ ಬಾಗಿಲು ತೆರೆದಿರುತ್ತದೆ. ನ.1 ಮತ್ತು ನ.9 ರಂದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇನ್ನುಳಿದ 7 ದಿನಗಳಲ್ಲಿ ದೇವರಿಗೆ ನೈವೇದ್ಯ ಇರಿಸುವ ಸಮಯ ಹೊರ ತುಪಡಿಸಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನ.9ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇಗುಲದ ಆವರಣದಲ್ಲಿ ತಳವಾರ ಸಮುದಾಯದವರು ಸೇರುತ್ತಾರೆ. ಅವರು ಗರ್ಭಗುಡಿಯ ಎದುರು ದೇಗುಲದ
ಆವರಣದಲ್ಲಿ ಬನ್ನಿ ಮುಡಿದ ಬಾಳೆ ಕಂದು ನೆಡುತ್ತಾರೆ. ದೇವಾಲಯದ ಗರ್ಭಗುಡಿಯ ಬಾಗಿಲು ತೆಗೆಯುವ ಶುಭ ಮುಹೂರ್ತ ಆರಂಭವಾಗುವ ಕ್ಷಣದಲ್ಲಿ ತಳವಾರ ಸಮುದಾಯದ ನಂಜರಾಜೇ ಅರಸ್‌ ಅವರು ಬನ್ನಿ ಪತ್ರೆ ಮುಡಿದ ಬಾಳೆಕಂದನ್ನು ಕಡಿದುರುಳಿಸುತ್ತಾರೆ. ತಕ್ಷಣ ಮಂಗಳವಾದ್ಯಗಳ ಘೋಷದೊಂದಿಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುತ್ತದೆ. ಜೊತೆಗೆ, ಜಾತ್ರಾ ಮಹೋತ್ಸವ ಆರಂಭವಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆಯುವುದು ಇಲ್ಲಿನ ವಿಶೇಷ. ಬಾಗಿಲು ಮುಚ್ಚುವಾಗ ಹಚ್ಚಿದ ಹಣತೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಉರಿಯುತ್ತಿರುತ್ತದೆ. ದೇವರಿಗೆ ಮುಡಿಸಿದ್ದ ಹೂವು ಬಾಡದೆ ಹೊಸತಾಗಿರುತ್ತದೆ. ನೈವೇದ್ಯ ಹಳಸದೆ ವರ್ಷ ಪೂರ್ತಿ ಹಸನಾಗಿರುತ್ತದೆ ಎಂಬ ನಂಬಿಕೆ ಭಕ್ತರದು. 1,000 ರೂ.ನ ಟಿಕೆಟ್‌ ಪಡೆದರೆ ದೇವಾಲಯದ ಪ್ರವೇಶ ದ್ವಾರದಲ್ಲಿಯೇ ನೇರ ಹೋಗುವ ವ್ಯವಸ್ಥೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next