ಹಾಸನ: ಒಂಟಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯನ್ನು ಥಳಿಸಿ ಮಾಂಗಲ್ಯ ಸರ ಮತ್ತು ಮೊಬೈಲ್ ದೋಚಿದ್ದ ಐವರು ಆರೋಪಿ, ಮನೆ ಕಳವು ಮಾಡಿದ್ದ ಒಬ್ಬನನ್ನು ಪೊಲೀಸರು ಬಂಧಿಸಿ 7.11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹಾಸನ ತಾಲೂಕು ಸಾಲಗಾಮೆ ಹೋಬಳಿ ಯಲ್ಲಗೊಂಡನಹಳ್ಳಿ ಗ್ರಾಮದಲ್ಲಿ ಫೆ.11ರಂದು ಸಂಜೆ 7.30ರ ಸಮಯದಲ್ಲಿ ಒಂಟಿ ಮನೆಗೆ ನುಗ್ಗಿ ಮಾಲಿಕರಾದ ಶಾರದಮ್ಮ ಅವರನ್ನು ಥಳಿಸಿ ಅವರ ಕೊರಳಲ್ಲಿದ್ದ 33 ಗ್ರಾಂ ಚಿನ್ನದ ಮಾಂಗಲ್ಯ ಸರ, ಮೊಬೈಲ್ ಅನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಹಾಸನ ಗ್ರಾಮಾಂತರ ಪೊಲೀಸರ ವಿಶೇಷ ತಂಡವು ಮಾಹಿತಿ ಸಂಗ್ರಹಿಸಿದಾಗ ಶಾರದಮ್ಮ ಅವರ ಪತಿ ಪ್ರತಿದಿನ ಸಂಜೆ ಸಂಜೆ 7 ಗಂಟೆಗೆ ಡೇರಿಗೆ ಹಾಲು ಕೊಡಲು ಹೋಗುತ್ತಾರೆ. ಆ ಸಮಯದಲ್ಲಿ ಶಾರದಮ್ಮ ಅವರು ಮನೆಯಲ್ಲಿ ಒಂಟಿಯಾಗಿರುತ್ತಾರೆ ಎಂದು ಅದೇ ಗ್ರಾಮದ ದಿಲ್ಲಿಗೌಡ(53) ಎಂಬಾತ ಹಣದ ಆಸೆಗಾಗಿ ನೀಡಿದ ಮಾಹಿತಿ ಮೇರೆಗೆ ಹಾಸನ ಸಮೀಪದ ಬೂವನಹಳ್ಳಿಯ ಭಾರತಿ ಕಾμ ಕ್ಯೂರಿಂಗ್ ಎದುರು ವಾಸಿಯಾದ ಶಶಿ (24), ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನಿವಾಸಿ, ಕಾರು ಚಾಲಕ ತಿಪ್ಪೇಸ್ವಾಮಿ (32), ಬಳ್ಳಾರಿ ಜಿಲ್ಲೆ, ಕೂಡ್ಲಗಿ ತಾಲೂಕು, ಖಾನಹೊಸಹಳ್ಳಿಯ ಹಣ್ಣಿನ ವ್ಯಾಪಾರಿ ಭಾಷಾ (25) ಮತ್ತು ಚಿಕ್ಕಮಗಳೂರು ತಾಲೂಕು ಅಂಬಳೆ ಗ್ರಾಮದ ಎ.ಆರ್ .ಧ್ರುವಪ್ರಸಾದ್ (21) ಎಂಬವರು ಶಾರದಮ್ಮ ಅವರ ಮನೆಗೆ ನುಗ್ಗಿ ಮಾಂಗಲ್ಯ ಸರ ಮತ್ತು ಮೊಬೈಲ್ ದೋಚಿದ್ದರು.
ಈ ಕುರಿತು ಎಸ್ಪಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದೆಯೂ ಹಲವು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದರು. ಆ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದು, ಸುಲಿಗೆ ಕೃತ್ಯವನ್ನು ಮುಂದುವರಿಸಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 33 ಗ್ರಾಂ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ್ದ ಒಂದು ಪಲ್ಸರ್ ಬೈಕ್‌ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚಿದ ಇನ್‌ಸ್ಪೆಕ್ಟರ್ ಸುರೇಶ್, ಪಿಎಸ್‌ಐ ಬಸವರಾಜು, ಸಿಬ್ಬಂದಿ ರವಿಕುಮಾರ್, ಕಾಂತರಾಜಪ್ಪ, ಸುಬ್ರಹ್ಮಣ್ಯ, ದೇವರಾಜು , ಗಿರೀಶ್ ಅವರನ್ನು ಶ್ಲಾಘಿಸಿದ್ದಾರೆ.