ಚನ್ನರಾಯಪಟ್ಟಣ: ಕಳೆದು ಒಂದು ತಿಂಗಳಲ್ಲಿ ನಾಲ್ಕು ಹತ್ಯೆ, ನಗರ ಠಾಣೆ ಪಿಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸುಮಾರು ಎರಡು ಕಿ.ಮೀ. ಪಟ್ಟಣದಲ್ಲಿ ಸಂಚಾರ ಮಾಡಿ ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದರು.
ಚನ್ನರಾಯಪಟ್ಟಣ ಇತಿಹಾಸದಲ್ಲಿ ಎಸ್ಪಿ ಸಾರ್ವಜನಿಕವಾಗಿ ಯಾರನ್ನು ಭೇಟಿ ಮಾಡಿರಲಿಲ್ಲ, ಇನ್ನು ಪಟ್ಟಣದ ರಸ್ತೆಗಳಲ್ಲಿ ನಡೆದು ಸಾಗಿದ ಇತಿಹಾಸವೇ ಇರಲಿಲ್ಲ ಆದರೆ ಹಾಸನ ಎಸ್ಪಿ ಶ್ರೀನಿವಾಸಗೌಡ ದಿಢೀರ್ ಪಟ್ಟಣಕ್ಕೆ ಭೇಟಿ ನೀಡಿ ಬಾರ್, ರೆಸ್ಟೋರೆಂಟ್, ಟೀ ಅಂಗಡಿ, ಸಿಗರೇಟ್ ಅಡ್ಡ ಸೇರಿದಂತೆ ಹೆಚ್ಚು ಮಂದಿ ಕುಳಿತು ಕಾಲ ಕಳೆಯುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಪೊಲೀಸರಿಗೆ ತಾವು ಮಾಡುತ್ತಿರುವ ತಪ್ಪುಗಳೇನು ಎನ್ನುವುದು ತಿಳಿ ಹೇಳಿದರು.
ಕೆಲ ಬಾರ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ್ದು 18 ವಯೋಮಿತಿಗಿಂತ ಕಡಿಮೆ ವಯಸ್ಸಿನ ಯುವಕರು ಮದ್ಯ ಸೇವನೆ ಮಾಡುತ್ತಿರುವುದು, ಕಾಫಿ, ಟೀ ಅಂಗಡಿಯಲ್ಲಿ ಯುವಕರು ಧೂಮಪಾನ ಮಾಡುವುದನ್ನು ವೀಕ್ಷಿಸಿ ಅವರಿಗೆ ತಿಳಿ ಹೇಳಿದಲ್ಲದೆ ಅಂಗಡಿ ಮಾಲೀಕರಿಗೆ ದಂಡ ಹಾಕುವಂತೆ ಸ್ಥಳೀಯ ಪೊಲೀಸರಿಗೆ ತಾಕಿತ್ತು ಮಾಡಿದರು. ರಸ್ತೆ ಅಗಲವಾಗಿದ್ದರು ಸೂಕ್ತವಾಗಿ ವಾಹನ ನಿಲ್ದಾಣ ನಿರ್ಮಾಣ ಮಾಡಿಲ್ಲ, ಹಲವು ಬೈಕ್ ಗಳು ನಂಬರ್ ಪ್ಲೇಟ್ ಇಲ್ಲದೆ ರಸ್ತೆಗೆ ಇಳಿದಿವೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದಾರೆ, ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅಂಗಡಿ ಮಾಲೀಕರು ಸಾಮಗ್ರಿಗಳನ್ನು ರಸ್ತೆಗೆ ಇಟ್ಟುಕೊಂಡಿದ್ದಾರೆ, ರಾತ್ರಿ ವೇಳೆ ಬಾಗೂರು ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ನೀಡಿಲ್ಲ ಈ ಬಗ್ಗೆ ಪುರಸಭೆಗೆ ಪತ್ರ ಬರೆದು ಎಲ್ಲವನ್ನು ಸುಲಲಿತವಾಗಿ ಮಾಡುವಂತೆ ಆದೇಶಿಸಿದರು.
ಪ್ರತಿವಾರ ಭೇಟಿ: ಒಂದು ದಿವಸಕ್ಕೆ ಸೀಮಿತವಾಗದೆ ಪ್ರತಿ ವಾರ ಚನ್ನರಾಯಪಟ್ಟಣಕ್ಕೆ ಬರುತ್ತೇನೆ ಎಲ್ಲಿ ಯಾರಾದರು ವ್ಯಾಜ್ಯ ಮಾಡಿಕೊಂಡರೆ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ನಾವು ಶೇ.100 ರಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ ಆದರೆ ಸಾರ್ವಜನಿಕರ ಸಹಕಾರ ಇಲ್ಲದೆ ಯಾವುದೂ ಪೂರ್ಣ ಆಗುವುದಿಲ್ಲ ಹಾಗಾಗಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.