ಹಾಸನ: ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವನ್ನು ತುರ್ತಾಗಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ ತುರ್ತು ಅವಶ್ಯಕತೆಗಳಾದ ಬಟ್ಟೆ, ಪಾತ್ರೆ ಇತರೆ ಸಾಮಗ್ರಿಗಳನ್ನು ಖರೀದಿಸಲು 3,800 ರೂ. ತಾತ್ಕಾಲಿಕ ಪರಿಹಾರ ಧನದ ಚೆಕ್‌ನ್ನು ಆದಷ್ಟು ಬೇಗ ವಿತರಿಸಬೇಕು. ಸಂತ್ರಸ್ತರಾಗಿರುವ ಕುಟುಂಬಗಳಿಗೆ 60 ದಿನಗಳ ಕಾಲ ಜಿಲ್ಲಾಡಳಿತವೇ ಸೌಲಭ್ಯ ಒದಗಿಸಬೇಕಿದೆ. ಹಾಗಾಗಿ ಪುನರ್ವಸತಿ ಕೆಲಸಗಳನ್ನು ಆದಷ್ಟು ಬೇಗ ಮಾಡಬೇಕು. ನೋಡಲ್ ಅಧಿಕಾರಿಗಳು ತಾಲೂಕುವಾರು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಸೌಲಭ್ಯ ಒದಗಿಸಬೇಕು ಎಂದರು.
ಜಂಟಿ ಸಮೀಕ್ಷೆ ನಡೆಸಿ: ಜಿಲ್ಲಾದ್ಯಂತ ಬೆಳೆ ಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ನಡೆಸಬೇಕು. ಈ ಸಂದರ್ಭದಲ್ಲಿ ಸಂತ್ರಸ್ತ ರೈತರ ಹೆಸರು, ಊರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆ ಸೇರಿದಂತೆ ಬೆಳೆ ಹಾನಿಯಾಗಿರುವ ಪ್ರಮಾಣದ ಕುರಿತು ಮಾಹಿತಿ ಕ್ರೋಢೀಕರಿಸಿ ಪರಿಹಾರದ ನೋಂದಣಿ ಪಟ್ಟಿಯನ್ನು ತಾಲೂಕುವಾರು ಸಿದ್ಧ‌್ದಪಡಿಸಬೇಕು ಎಂದು ನಿರ್ದೇಶಿಸಿದರು.
ಖಾಲಿ ಗೋಶಾಲೆಗಳನ್ನು ಮುಚ್ಚಿ: ಗೋಶಾಲೆಗಳು ಖಾಲಿಯಿದ್ದರೆ ಆ ಕುರಿತಂತೆ ಫೋಟೋ ಮತ್ತು ಅಗತ್ಯ ದಾಖಲೆಗಳನ್ನು ಮಾಡಿ ಖಾಲಿಯಿರುವ ಗೋಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ಸಾರ್ವಜನಿಕರಿಗೆ ತೊಂದರೆಯಾಗ ದಂತೆ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯ ವನ್ನು ಶೀಘ್ರದಲ್ಲೇ ಮಾಡಿ ಮುಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪುನರ್ವಸತಿ ಕಲ್ಪಿಸಿ: ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಪುನಃ ನೆರೆ ಬಂದಾಗ ಬಿದ್ದು ಹೋಗುವಂತಹ ಮನೆಗಳಲ್ಲಿ ವಾಸಿಸದಂತೆ ಜನರಿಗೆ ಎಚ್ಚರಿಕೆ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಸ್ಥಳಗಳಲ್ಲಿ ಪುನರ್ವಸತಿ ಸೌಲಭ್ಯವನ್ನು ನಿರ್ಮಿಸಿ ಸ್ಥಳಾಂತರಕ್ಕೆ ಅವರ ಮನವೊಲಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಮತ್ತಿತರರು ಹಾಜರಿದ್ದರು.