Advertisement

ಬಿಜೆಪಿಯವರು ಉಚಿತ ಅಕ್ಕಿ ಕೊಟ್ಟಿದ್ದಾರಾ?

09:39 AM Dec 28, 2017 | Team Udayavani |

ಚಿತ್ರದುರ್ಗ/ಚಳ್ಳಕೆರೆ: 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಕೊಚ್ಚಿಕೊಳ್ಳುವ ಬಿಜೆಪಿಯವರು ಯಾವುದಾದರೂ ರಾಜ್ಯದಲ್ಲಿ ಬಡವರಿಗೆ ಉಚಿತ ಅಕ್ಕಿ ಕೊಡುವ ಕಾರ್ಯಕ್ರಮ ರೂಪಿಸಿದ್ದಾರಾ ಎಂಬುದನ್ನು ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಬುಧವಾರ ನಡೆದ “ಸಾಧನಾ ಸಂಭ್ರಮ’ದಲ್ಲಿ ಮಾತನಾಡಿದರು. ಹಸಿವು ಮುಕ್ತ ಕರ್ನಾಟಕ ನಮ್ಮ ಕನಸು. ಹೀಗಾಗಿಯೇ ಉಚಿತ ಅಕ್ಕಿ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಈ ಯೋಜನೆ ಇದೆ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಎರಡೇ ತಿಂಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿ ಬಾರ್‌ ಮಾಡಿಸಿದರು. ಇಬ್ಬರು ರೈತರನ್ನು ಕೊಂದು ಹಾಕಿದವರು. ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಸಾಲ ಮನ್ನಾ ಮಾಡಿಲ್ಲ. ಈಗ ವೀರಾವೇಶದಿಂದ ಸಾಲ ಮನ್ನಾ ಮಾಡದಿದ್ದರೆ ಮುತ್ತಿಗೆ ಹಾಕ್ತೀನಿ ಎನ್ನುತ್ತಾರೆ. ಪರಿವರ್ತನೆ ಯಾತ್ರೆಗೆ ಇಲ್ಲಿಗೆ ಬಂದಾಗ ಯಡಿಯೂರಪ್ಪ ಅವರನ್ನು ಈ ಬಗ್ಗೆ ಕೇಳಿ ಎಂದು ತಾಕೀತು ಮಾಡಿದರು.

ಕೀಳುಮಟ್ಟದ ರಾಜಕಾರಣ
ಚಿತ್ರದುರ್ಗ: ಬ್ರಾಹ್ಮಣ ಸಮುದಾಯದವರು ಉತ್ತಮರು. ಅಲ್ಲದೆ, ಅತ್ಯಂತ ಸಂಸ್ಕಾರವಂತರು. ಆದರೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆಯವರು ಏಕೆ ಅಸಂವಿಧಾನಿಕ ಭಾಷೆ ಬಳಸುತ್ತಾರೋ ಗೊತ್ತಾಗುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಬೇಸರ ವ್ಯಕ್ತಪಡಿಸಿದರು. ಹೊಳಲ್ಕೆರೆಯಲ್ಲಿ ಬುಧವಾರ ನಡೆದ 150 ಜೋಡಿಗಳ ಸಾಮೂಹಿಕ ವಿವಾಹ
ಕಾರ್ಯಕ್ರಮ, ಸಾಧನಾ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿಯ ಕೆಲ ನಾಯಕರು
ಕೀಳು ಮಟ್ಟದಲ್ಲಿ ಟೀಕೆ ಮಾಡಿದರೆ ಓಟು ಬರುತ್ತೆ ಎನ್ನುವ ಹುಚ್ಚು ಭ್ರಮೆಯಲ್ಲಿ ಇದ್ದಾರೆ. ಹಾಗಾಗಿ ಸಂಸ್ಕಾರ, ಸಂಸ್ಕೃತಿ ಇಲ್ಲದವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಾಮೂಹಿಕ ವಿವಾಹ
ಹೊಳಲ್ಕೆರೆ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ  ಶತಮಾನೋತ್ಸವದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿವರ್ಷ ಆಯೋಜಿಸುವ ಸಾಮೂಹಿಕ ವಿವಾಹ ಈ ಬಾರಿ ಬುಧವಾರ ನಡೆಯಿತು. 150 ಸಾಮೂಹಿಕ ವಿವಾಹದಲ್ಲಿ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್‌.ಆಂಜನೇಯ, ಸಂಸದ ಬಿ.ಎನ್‌. ಚಂದ್ರಪ್ಪ, ಜಿಪಂ ಅಧ್ಯಕ್ಷ ಸೌಭಾಗ್ಯ ಬಸವರಾಜನ್‌, ಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಚಿತ್ರದುರ್ಗ
ಮುರುಘಾ ಮಠದ ಶ್ರೀ ಡಾ| ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ವಿವಿಧ ಮಠಾಧೀಶರು ನವವಿವಾಹಿತರಿಗೆ ಶುಭಕೋರಿದರು.

ಮೋದಿ ಸಮಕ್ಷಮ ಜನರ ಸಮಸ್ಯೆಗೆ ಉತ್ತರಿಸುವೆ
ದಾವಣಗೆರೆ: “ಬಿಜೆಪಿ ಪರಿವರ್ತನಾ ಯಾತ್ರೆ ಹೋದ ಕಡೆಯೆಲ್ಲ ಜನರು ನನಗೆ ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಹಲವಾರು ಬೇಡಿಕೆ ಮುಂದಿಟ್ಟಿದ್ದಾರೆ. ಕೆಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಆ ಎಲ್ಲಾ ಸಮಸ್ಯೆಗಳಿಗೆ ಜ.28ರಂದು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿ ಸಮಕ್ಷಮದಲ್ಲಿ ಉತ್ತರ ನೀಡುವೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.   ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು. “ಜ.28ರಂದು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿ ಸಮಕ್ಷಮದಲ್ಲಿ ಉತ್ತರ ನೀಡುವುದರ ಜೊತೆಗೆ ಮುಂದೆ ಬಿಜೆಪಿ ರಾಜ್ಯದಲ್ಲಿ ಕೈಗೊಳ್ಳುವ ಯೋಜನೆ, ಕಾರ್ಯಕ್ರಮಗಳ ಬಗ್ಗೆಯೂ ತಿಳಿಸುತ್ತೇನೆ’ ಎಂದರು. 

Advertisement

ಕೇಂದ್ರ ಸರ್ಕಾರ ಕೆಜಿ ಅಕ್ಕಿಯನ್ನು 32 ರೂ. ಖರೀದಿಸಿ, ರಾಜ್ಯಕ್ಕೆ 3 ರೂ.ಗೆ ನೀಡುತ್ತಿದೆ. ಅನ್ನಭಾಗ್ಯ ಯೋಜನೆ ನನ್ನದೇ ಎಂದು ಹೇಳಿ ಕೊಳ್ಳುವ ಸಿದ್ದರಾಮಯ್ಯ ಚುನಾವಣೆ ಹತ್ತಿರ ಬರುತ್ತಿರುವಂತೆ ಕುಟುಂಬಕ್ಕೆ 7 ಕೆಜಿ ಅಕ್ಕಿ ನೀಡಿದ್ದಾರೆ. ಕೇಂದ್ರ ನೀಡಿರುವ ಗೋಧಿಯನ್ನು ಎಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಜನ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿ ಎಂದರು.

ಟಿಕೆಟ್‌ ಘೋಷಣೆ ಬೆನ್ನಲ್ಲೇ ಪ್ರತಿಭಟನೆ: ಪರಿವರ್ತನಾ ಯಾತ್ರೆ ಯಲ್ಲಿ ಮಾತನಾಡಿದ ಯಡಿಯೂರಪ್ಪ, ಹೊನ್ನಾಳಿಯಿಂದ ರೇಣುಕಾಚಾರ್ಯರನ್ನು ದೊಡ್ಡ ಅಂತರದಿಂದ ಗೆಲ್ಲಿಸಿ… ಎಂದು ಮನವಿ ಮಾಡುತ್ತಿದ್ದಂತೆ ಸಭಿಕರು ಹರ್ಷೋದ್ಘಾರ ಮಾಡಿದರು. ಇದರ ಬೆನ್ನಲ್ಲೇ ಹೊನ್ನಾಳಿ ತಾಲೂಕು ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ, ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ| ಎಚ್‌.ಪಿ. ರಾಜ ಕುಮಾರ್‌, ಬಿಸಾಟೆ ಸುರೇಶ್‌ಕುಮಾರ್‌ ಇತರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿಸಿದ ನಂತರ ಯಡಿಯೂರಪ್ಪರ ಎದುರಿನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next