Advertisement

ಮಾಜಿ CM ಗಳ ವಲಸೆ ಹಿಂದೆ ಫ‌ಲ ನೀಡಿತ್ತೇ?

12:09 AM Apr 17, 2023 | Team Udayavani |

ಬೆಂಗಳೂರು: ವರಿಷ್ಠರ ಜತೆಗಿನ ವೈಮನಸ್ಯಕ್ಕಾಗಿ ಪಕ್ಷ ತೊರೆದ ಹಾಗೂ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದ ಯಾವುದೇ ಮಾಜಿ ಮುಖ್ಯಮಂತ್ರಿಗಳು ರಾಜಕೀಯವಾಗಿ ಯಶಸ್ವಿಯಾದ ಉದಾಹರಣೆ ಕರ್ನಾಟಕದ ರಾಜಕಾರಣದಲ್ಲಿ ಇದುವರೆಗೆ ಇಲ್ಲ.

Advertisement

ಹಿಂದುಳಿದ ವರ್ಗದ ಹರಿಕಾರ ಎಂದೇ ರಾಜ್ಯ ರಾಜಕಾರಣದಲ್ಲಿ ಖ್ಯಾತರಾಗಿದ್ದ ವರ್ಚಸ್ವಿ ನಾಯಕ ದಿ| ದೇವರಾಜ್‌ ಅರಸು ಅವರಿಂದ ಮೊದಲ್ಗೊಂಡು ಬಿ.ಎಸ್‌.ಯಡಿಯೂರಪ್ಪನವರವರೆಗೂ ಈ ವೈಫ‌ಲ್ಯದ ಸಾಲೇ ನಮ್ಮ ಕಣ್ಣ ಮುಂದಿದೆ. ಹೀಗಾಗಿ ವರಿಷ್ಠರ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಜಗದೀಶ್‌ ಶೆಟ್ಟರ್‌ ಯಶಸ್ವಿಯಾಗಬಹುದೇ? ಅಥವಾ ತಮ್ಮನ್ನು ನಿರ್ಲಕ್ಷಿಸಿದ ವರಿಷ್ಠರಿಗೆ ಸೋಲುಣಿಸುವುದಕ್ಕಾದರೂ ಅವರ ಬಂಡಾಯದ ಬಿಸಿ ಸಫ‌ಲವಾಗಬಹುದೇ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.

ಡಿ.ದೇವರಾಜ ಅರಸು

ವರಿಷ್ಠರ ವಿರುದ್ಧ ಸೆಟೆದು ನಿಂತು ಪ್ರತ್ಯೇಕ ಪಕ್ಷ ಕಟ್ಟಿಯೂ ಸಫ‌ಲರಾಗದ ನಾಯಕರ ಪೈಕಿ ದಿ| ದೇವರಾಜ್‌ ಅರಸು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ರಾಜ್ಯದಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೂ, ಹಿಂದುಳಿದ ವರ್ಗದ ರಾಜಕಾರಣಕ್ಕೆ ಹೊಸ ಆಯಾಮವನ್ನೇ ಕೊಟ್ಟು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರೂ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್‌ ಅಲೆಯ ವಿರುದ್ಧ ಈಜಿ ರಾಜಕೀಯವಾಗಿ ಸಫ‌ಲತೆ ಕಾಣುವುದಕ್ಕೆ ಅರಸು ಅವರಿಗೆ ಸಾಧ್ಯವಾಗಲೇ ಇಲ್ಲ.

ಎಸ್‌.ಬಂಗಾರಪ್ಪ

Advertisement

ಅದಾದ ಬಳಿಕ ಹಿಂದುಳಿದ ವರ್ಗಕ್ಕೆ ಸೇರಿದ ಇನ್ನೊಬ್ಬ ಜನಪ್ರಿಯ ನಾಯಕ ಎಸ್‌.ಬಂಗಾರಪ್ಪ ಕೂಡಾ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ತಮಗಿದ್ದ ಜನಪ್ರಿಯತೆಯ ಬಲದಿಂದ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡುವಲ್ಲಿ ಬಂಗಾರಪ್ಪ ಸ್ಥಾಪಿಸಿದ ಹೊಸ ಪಕ್ಷ ಯಶ ಕಂಡಿತ್ತಾದರೂ ಆ ಬಳಿಕ ಅಧಿಕಾರದ ಮೊಗಸಾಲೆಗೆ ಬರುವುದಕ್ಕೆ ಬಂಗಾರಪ್ಪ ಸಫ‌ಲರಾಗಲಿಲ್ಲ. ಸಾಲು ಸಾಲು ಪಕ್ಷಾಂತರದ ಮೂಲಕ ಅವರು ತಮ್ಮ ಅಸ್ಥಿತ್ವ ಉಳಿಸಿಕೊಂಡರೇ ಹೊರತು ಕಾಂಗ್ರೆಸ್‌ ಶ್ರೀರಕ್ಷೆಯಿಂದ ಆಚೆ ಬಂದು ಬಲಾಡ್ಯ ರಾಜಕೀಯ ಶಕ್ತಿಯಾಗುವ ಬಂಗಾರಪ್ಪ ನವರ ಕನಸು ಕೊನೆಯವರೆಗೂ ಈಡೇರಲಿಲ್ಲ.

ಬಿ.ಎಸ್‌.ಯಡಿಯೂರಪ್ಪ

ಇದೇ ಹಾದಿಯಲ್ಲಿ ಸಾಗಿದ ಮತ್ತೂಬ್ಬ ನಾಯಕ ಬಿ.ಎಸ್‌.ಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೇ ತಮ್ಮ ಅಪಾರ ಬೆಂಬಲಿಗರ ಜತೆಗೆ ಪಕ್ಷ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ ಕೂಡಾ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಸಫ‌ಲರಾದರೂ ವೈಯಕ್ತಿಕವಾಗಿ ಯಾವುದೇ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ, ಬಿಜೆಪಿ ಇಲ್ಲದ ಯಡಿಯೂರಪ್ಪ ಶೂನ್ಯ ಎಂಬ ಚರ್ಚೆ ಆಗಲೇ ಹುಟ್ಟಿಕೊಂಡಿತು. ಹೀಗಾಗಿ ಮರಳಿ ಪಕ್ಷ ಸೇರಿದ ಯಡಿಯೂರಪ್ಪ ಮತ್ತೂಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೂಮ್ಮೆ ಮುಖ್ಯಮಂತ್ರಿಯಾದರು.

ಎಸ್‌.ಎಂ.ಕೃಷ್ಣ

ಇನ್ನು ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೂಡ ವರಿಷ್ಠರ ವಿರುದ್ಧ ಬೇಸರ ಗೊಂಡು ಬಿಜೆಪಿ ಸೇರ್ಪಡೆ ಯಾದರೂ ರಾಜಕೀಯವಾಗಿ ನೇಪಥ್ಯಕ್ಕೆ ಸರಿದು ಹೋದರು. ಈ ಪಟ್ಟಿಯಲ್ಲಿ ಈಗ ಜಗದೀಶ್‌ ಶೆಟ್ಟರ್‌ ಸೇರ್ಪಡೆಗೊಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next