Advertisement

Haryana; ಪುತ್ರ ಬಿಜೆಪಿ ಸಂಸದ; ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ಸಾವಿತ್ರಿ ಜಿಂದಾಲ್ ಆಕ್ರೋಶ

09:14 PM Sep 05, 2024 | Team Udayavani |

ಹೊಸದಿಲ್ಲಿ: ಹರಿಯಾಣ ವಿಧಾನ ಸಭೆ ಚುನಾವಣೆಗೆ ಬಿಜೆಪಿ 90 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಿಗೆ ಬುಧವಾರ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಬಂಡಾಯ ಭುಗಿಲೆದ್ದಿದೆ. ಹಲವರು ರೆಬೆಲ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಪ್ರಮುಖವಾಗಿ ಬಿಜೆಪಿಯ ಕುರುಕ್ಷೇತ್ರ ಸಂಸದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ತಾಯಿ,ಶ್ರೀಮಂತ ಮಹಿಳಾ ಉದ್ಯಮಿ ಸಾವಿತ್ರಿ ಜಿಂದಾಲ್ ಅವರು ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ನಿಂದ ಪಕ್ಷೇತರಳಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Advertisement

74 ರ ಹರೆಯದ ಸಾವಿತ್ರಿ ಜಿಂದಾಲ್ ಹಿಸಾರ್‌ನಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಬಯಸಿದ್ದರು, ಆದರೆ ಬಿಜೆಪಿ ಹಾಲಿ ಶಾಸಕ ಮತ್ತು ಸಚಿವ ಡಾ.ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಿದೆ.

“ನನ್ನ ಕುಟುಂಬದ ಹಿಸಾರ್‌ನ ಜನರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನನ್ನು ಕೇಳುತ್ತಿದ್ದಾರೆ. ಅವರು ನನಗೆ ಈ ರೀತಿಯ ಗೌರವವನ್ನು ನೀಡಿದರೆ, ಅವರ ನಿರ್ಧಾರವನ್ನು ನಾನು ಗೌರವಿಸಬೇಕಾಗುತ್ತದೆ. ಒಮ್ಮೆ ನಾನು ಏನನ್ನಾದರೂ ಹೇಳಿದರೆ ಎಂದಿಗೂ ಹಿಂದೆ ಸರಿಯುವುದಿಲ್ಲ”ಎಂದು 35.5 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಸಾವಿತ್ರಿ ಜಿಂದಾಲ್ ಅವರು ಹಿಸಾರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆಗಳ ಕುರಿತು ಪ್ರತಿಕ್ರಿಯಿಸಿ “ಸಮಯವೇ ಹೇಳುತ್ತದೆ. ನಾನು ಭೂಪಿಂದರ್ ಸಿಂಗ್ ಹೂಡಾ ನನ್ನ ಅಣ್ಣನಿದ್ದಂತೆ, ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ, ಅವರಿಂದಲೇ ನಾನು ರಾಜಕೀಯವನ್ನು ಕಲಿತಿದ್ದೇನೆ.  ನಾನು ರಾಜಕೀಯಕ್ಕೆ ಬಂದಾಗ ನನಗೆ ಹೆಚ್ಚು ತಿಳಿದಿರಲಿಲ್ಲ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಹಿಸಾರ್ ಜನರಿಗೆ ಮಾತ್ರ ಸೇವೆ ಸಲ್ಲಿಸಲು ಬಯಸುತ್ತೇನೆ. ನೀವು ಜನರಿಗೆ ಸೇವೆ ಸಲ್ಲಿಸಲು ರಾಜಕೀಯ ಒಂದು ವೇದಿಕೆಯಾಗಿದೆ. ಇದನ್ನೇ ನಾನು ಮಾಡಬೇಕೆಂದಿದ್ದೇನೆ” ಎಂದರು.

Advertisement

”ನಾನು ಬಿಜೆಪಿಗೆ ಸೇರಲಿಲ್ಲ, ಆದರೆ ನಾನು ನನ್ನ ಪುತ್ರ ಮತ್ತು ರಂಜಿತ್ ಸಿಂಗ್ ಜೀ ಪರ ಪ್ರಚಾರ ಮಾಡಿದ್ದೆ” ಎಂದು ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನವೀನ್ ಜಿಂದಾಲ್ ಹಿಸಾರ್‌ನಲ್ಲಿ ಬಿಜೆಪಿಯ ರಂಜಿತ್ ಸಿಂಗ್‌ ಅವರ ಪರ ಸಕ್ರಿಯವಾಗಿ ಪ್ರಚಾರ ಮಾಡಿದ್ದರು.

ನವೀನ್ ಪ್ರತಿಕ್ರಿಯೆ

ಬಿಜೆಪಿ ಸಂಸದ ನವೀನ್ ಜಿಂದಾಲ್ ತಾಯಿ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯಿಸಿದ್ದು, ”ಇಡೀ ರಾಜ್ಯದಲ್ಲಿ ಟಿಕೆಟ್ ಹಂಚಿಕೆಯನ್ನು ಕೇಂದ್ರ ನಾಯಕತ್ವವು ಚಿಂತನಶೀಲವಾಗಿ ಮಾಡಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಕ್ಷೇತ್ರದಲ್ಲೂ ಅನೇಕ ಜನರು ಟಿಕೆಟ್ ಕೇಳುತ್ತಾರೆ ಆದರೆ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುತ್ತದೆ. ಹಾರೈಕೆ ಇರುವುದು ತಪ್ಪಲ್ಲ” ಎಂದಿದ್ದಾರೆ.

ಓ.ಪಿ. ಜಿಂದಾಲ್ ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಓಂ ಪ್ರಕಾಶ್ ಜಿಂದಾಲ್ ಅವರು ಹರಿಯಾಣದ ಹಿಸಾರ್‌ನವರು. ಅವರು ಜಿಂದಾಲ್ ಸಂಸ್ಥೆಯ ಅಡಿಯಲ್ಲಿ ಜಿಂದಾಲ್ ಸ್ಟೀಲ್ ಮತ್ತು ಪವರ್, JSW ಗ್ರೂಪ್ ಮತ್ತು ಜಿಂದಾಲ್ ಸ್ಟೇನ್‌ಲೆಸ್ ಲಿಮಿಟೆಡ್ ಸೇರಿದಂತೆ ದಿಗ್ಗಜ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಿದ್ದರು. ಪುತ್ರ ನವೀನ್ ಜಿಂದಾಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next