Advertisement

Haryana Election: ಮತ್ತೆ ಇವಿಎಂ ಮೇಲೆ ಅನುಮಾನ ಕಾಂಗ್ರೆಸ್‌ ಸಾಕ್ಷ್ಯಾಧಾರ ಒದಗಿಸಲಿ

05:37 AM Oct 10, 2024 | Team Udayavani |

ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಸತತ ಮೂರನೇ ಬಾರಿಗೆ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಚುನಾವಣ ಫ‌ಲಿತಾಂಶ ಪಕ್ಷಕ್ಕೆ ಸ್ವೀಕಾರಾರ್ಹವಲ್ಲ ಎನ್ನುವ ಮೂಲಕ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನಾದೇಶವನ್ನು ಧಿಕ್ಕರಿಸುವ ಮಾತುಗಳನ್ನಾಡಿದೆ. ಆದರೆ ತನ್ನ ಈ ನಿಲುವಿಗೆ ಮತದಾರರು ಕಾರಣರಲ್ಲ, ತಿರುಚಲ್ಪಟ್ಟ ವಿದ್ಯುನ್ಮಾನ ಮತಯಂತ್ರಗಳಿಂದಾಗಿ ಪಕ್ಷಕ್ಕೆ ಸೋಲಾಗಿದೆ ಎಂದು ಆರೋಪಿಸಿದೆ.

Advertisement

ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷ ಸೋಲನುಭವಿಸಿದಾಗಲೆಲ್ಲ ಇಂತಹ ಆರೋಪಗಳನ್ನು ಕಳೆದೊಂದು ದಶಕದಿಂದ ಮಾಡುತ್ತಲೇ ಬಂದಿದೆ. ಆದರೆ ತನ್ನ ಆರೋಪಗಳನ್ನು ಸಾಬೀತುಪಡಿಸುವ ಅಥವಾ ಆರೋಪಕ್ಕೆ ಪೂರಕವಾದ ಕನಿಷ್ಠ ಸಾಕ್ಷ್ಯಾಧಾರವನ್ನು ಒದಗಿಸಲು ಕಾಂಗ್ರೆಸ್‌ಗೆ ಈವರೆಗೆ ಸಾಧ್ಯವಾಗಿಲ್ಲ. ಇನ್ನೂ ಒಂದು ಅಚ್ಚರಿಯ ವಿಷಯ ಅಂದರೆ ಇದೇ ಅವಧಿಯಲ್ಲಿ ಪಕ್ಷ ಗೆಲುವು ಸಾಧಿಸಿದ ಚುನಾವಣೆ ಯಾ ಕ್ಷೇತ್ರಗಳ ಫ‌ಲಿತಾಂಶವನ್ನು “ಜನತೆಯ ಗೆಲುವು’ ಎಂದು ಬೀಗುವ ಕಾಂಗ್ರೆಸ್‌ಗೆ ಈ ಚುನಾವಣೆಗಳಲ್ಲೂ ಇದೇ ಮಾದರಿಯ ಇವಿಎಂಗಳನ್ನು ಬಳಕೆ ಮಾಡಲಾಗಿತ್ತು ಎಂಬ ಜಾಣಮರೆವು!

ಇವಿಎಂಗಳ ತಿರುಚುವಿಕೆ, ದೋಷಪೂರಿತ ಯಂತ್ರಗಳು, ಅದರಲ್ಲಿ ಬಳಸಲಾಗುವ ಸಾಧನಗಳಲ್ಲಿನ ಲೋಪದೋಷ ಈ ಎಲ್ಲ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಆದರೆ ಆಯೋಗ ಈ ಸಂದರ್ಭದಲ್ಲೆಲ್ಲ ವಿದ್ಯುನ್ಮಾನ ಮತಯಂತ್ರಗಳ ಸುಧಾರಣೆ ಮತ್ತು ಮತದಾನ ವ್ಯವಸ್ಥೆಯ ಸುಧಾರಣೆಗೆ ಹಲವು ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಅಷ್ಟು ಮಾತ್ರವಲ್ಲದೆ ಇವಿಎಂ ಕುರಿತಾಗಿನ ಅನುಮಾನ, ಗೊಂದಲಗಳನ್ನು ನಿವಾರಿಸಲು ಮತದಾನ ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುನ್ನವೇ ರಾಜಕೀಯ ಪಕ್ಷಗಳ ವೀಕ್ಷಕರ ಸಮ್ಮುಖದಲ್ಲಿ ಇವಿಎಂಗಳ ಪ್ರಾಯೋಗಿಕ ಪರೀಕ್ಷೆಗೆ ಅನುವು ಮಾಡಿಕೊಟ್ಟಿದೆ.

ಇನ್ನು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಂತೂ ಇದಕ್ಕಾಗಿ ವಿಶೇಷ ಪ್ರಾತ್ಯಕ್ಷಿಕೆಯನ್ನು ಆಯೋಜಿಸುತ್ತ ಬಂದಿದೆ. ಇಷ್ಟು ಮಾತ್ರವಲ್ಲದೆ ಇವಿಎಂಗಳ ಕುರಿತಾಗಿನ ಆರೋಪಗಳಿಗ ಸಂಬಂಧಿಸಿದಂತೆ ಈಗಾಗಲೇ ಹಲವು ಬಾರಿ ಸುಪ್ರೀಂ ಕೋರ್ಟ್‌ನ ಕದ ತಟ್ಟಲಾಗಿತ್ತಾದರೂ ಎಲ್ಲ ಅರ್ಜಿಗಳನ್ನು ವಜಾಗೊಂಡಿದ್ದವಲ್ಲದೆ ಅರ್ಜಿದಾರರು ಮತ್ತು ಇವಿಎಂಗಳ ಬಗೆಗೆ ಅನುಮಾನ ವ್ಯಕ್ತಪಡಿಸುತ್ತ ಬಂದಿರುವ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಆದರೆ ಈ ಬಾರಿಯ ಹರಿಯಾಣ ಚುನಾವಣೆಯಲ್ಲಿ ಬ್ಯಾಟರಿಗಳಲ್ಲಿ ಹೆಚ್ಚಿನ ಚಾರ್ಜ್‌ ಇರುವ ಇವಿಎಂಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಲಭಿಸಿದ್ದರೆ, ಬ್ಯಾಟರಿಗಳಲ್ಲಿ ಶೇ. 60-70ರಷ್ಟು ಚಾರ್ಜ್‌ ಇದ್ದ ಇವಿಎಂಗಳಲ್ಲಿ ಕಾಂಗ್ರೆಸ್‌ಗೆ ಅಧಿಕ ಮತಗಳು ಲಭಿಸಿವೆ. ಇದಕ್ಕೆ ಇವಿಎಂಗಳನ್ನು ತಿರುಚಲಾಗಿರುವುದೇ ಕಾರಣವಾಗಿದ್ದು, ಇದರ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿ ಚುನಾವಣ ಆಯೋಗಕ್ಕೆ ಪತ್ರ ಬರೆದಿತ್ತು. ಇದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ್ದ ಆಯೋಗ, ದೇಶದ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಈವರೆಗೆ ಕೇಳದಂತಹ ಗಂಭೀರ ಆರೋಪವಾಗಿದ್ದು ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

Advertisement

ಇಷ್ಟೆಲ್ಲ ಆಗಿಯೂ ಕಾಂಗ್ರೆಸ್‌ ಇವಿಎಂನ ಸಾಚಾತನ ಮತ್ತು ಪಾರದರ್ಶಕತೆ ಬಗೆಗೆ ಪ್ರಶ್ನೆ ಮಾಡುತ್ತಿದೆ ಎಂದಾದರೆ “ಗಾಳಿಯಲ್ಲಿ ಗುಂಡು ಹೊಡೆಯುವ’ ಇಲ್ಲವೇ ಸೋಲನ್ನು ಒಪ್ಪಿಕೊಳ್ಳಲಾಗದ ರಣಹೇಡಿಯ ತಂತ್ರ ಎನ್ನದೆ ವಿಧಿ ಇಲ್ಲ. ಇದೇ ವೇಳೆ ಚುನಾವಣ ಆಯೋಗ ಕೂಡ ಇವಿಎಂ ಮತ್ತು ತನ್ನ ಕಾರ್ಯನಿರ್ವಹಣೆ ಕುರಿತಂತೆ ಆರೋಪ ಕೇಳಿ ಬಂದಾಗಲೆಲ್ಲ ಕೇವಲ ಸ್ಪಷ್ಟನೆ, ಸಮರ್ಥನೆಗೆ ಮಾತ್ರ ಸೀಮಿತವಾಗದೆ ಆರೋಪದ ಹಿಂದಿನ ವಾಸ್ತವಾಂಶಗಳನ್ನು ಬಯಲಿಗೆಳೆದು ಜನರ ಮುಂದಿಡಬೇಕು. ಹೀಗಾದಾಗ ಆಯೋಗದ ಮೇಲಿನ ಜನರ ವಿಶ್ವಾಸ ಮತ್ತಷ್ಟು ಹೆಚ್ಚಲಿದೆಯಲ್ಲದೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next