ಮುಂಬಯಿ: ಗ್ರಹಚಾರ ಕೆಡುವುದು ಅಂದರೆ ಏನು ಎನ್ನುವುದಕ್ಕೆ ಇದೇ ಉದಾಹರಣೆ…ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಐಪಿಎಲ್ 10ನೇ ಆವೃತ್ತಿಗಾಗಿ ಕ್ರಿಕೆಟಿಗರ ಹರಾಜು ನಡೆದು ಹಲವು ಅನಾಮಿಕರು ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಅದೃಷ್ಟದ ಕತೆಯನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ಇಲ್ಲೊಬ್ಬ ಆಟಗಾರ ಬೇರೆಯವರು ಮಾಡಿದ ತಪ್ಪಿಗೆ ಬೆಲೆ ತೆತ್ತು ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿಸಿಕೊಂಡ ದುರದೃಷ್ಟಕರ ಘಟನೆ ಮಾತ್ರ ಯಾರ ಗಮನಕ್ಕೂ ಬಂದಿಲ್ಲ!
ಟ್ವಿಟರ್‌ನಲ್ಲಿ ತಪ್ಪು ಹೆಸರು
ಐಪಿಎಲ್ ಹರಾಜು ನಡೆಯುವ ದಿನವೇ ಹರ್ಮೀತ್ ಸಿಂಗ್ ಎಂಬ ಕ್ರಿಕೆಟಿಗ ಮುಂಬಯಿಯ ಅಂಧೇರಿ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ಗೇ ಕಾರು ನುಗ್ಗಿಸಿ ಬಂಧಿತರಾಗಿದ್ದರು. ಆದರೆ ಎಎನ್‌ಐ ಸುದ್ದಿಸಂಸ್ಥೆಯ ಟ್ವಿಟರ್ ಖಾತೆಯಲ್ಲಿ ಹರ್ಮೀತ್ ಹೆಸರು ತಪ್ಪಾಗಿ ಹರ್‌ಪ್ರೀತ್ ಎಂದು ಬರೆಯಲ್ಪಟ್ಟಿತು. ಪರಿಣಾಮ ಹರ್‌ಪ್ರೀತ್ ಆವರನ್ನು ಕೊಳ್ಳಲು ಬಯಸಿದ್ದ ಮುಂಬೈ ಇಂಡಿ ಯನ್ಸ್ ಆ ಯೋಚನೆಯನ್ನು ಕೈಬಿಟ್ಟಿತು!
ಮುಂಬೈ ಇಂಡಿಯನ್ಸ್ ತಂಡದ ಪ್ರತಿನಿಧಿಯೇ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ. ಕೆಲವೇ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಅದು ಹರ್‌ಪ್ರೀತ್ ಸಿಂಗ್ ಅಲ್ಲ ಹರ್ಮೀತ್ ಎನ್ನುವುದು ಗೊತ್ತಾಗಿದೆ. ಅಷ್ಟರಲ್ಲಿ ಹರಾಜು ಮುಗಿದು ಹೋಗಿತ್ತು. ಇದು ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ಹರ್‌ಪ್ರೀತ್ ಸಿಂಗ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.
ಯಾರಿವರು ಹರ್ಮೀತ್, ಹರ್‌ಪ್ರೀತ್?
ವಾಸ್ತವವಾಗಿ ಈ ಇಬ್ಬರು ಕ್ರಿಕೆಟಿಗರೂ ಸಮಕಾಲೀನರು. ಇಬ್ಬರೂ ಭಾರತದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದಾರೆ. ಹರ್ಮೀತ್ (26) ಮುಂಬೈ ತಂಡದಲ್ಲೂ ಕಾಣಿಸಿಕೊಂಡಿ ದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಅವರು 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಐಪಿಎಲ್ ಕೂಡ ಆಡಿದ್ದರು. ಅವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಮುಂದೆ ಮುಂಬೈ ತಂಡದಲ್ಲಿ ಆಡುವ ಅವಕಾಶವನ್ನೂ ಕಳೆದುಕೊಂಡರು.
ಆದರೆ ಹರ್‌ಪ್ರೀತ್ ಸಿಂಗ್ ಅವರದ್ದು (25) ಇದಕ್ಕೆ ವ್ಯತಿರಿಕ್ತವಾಗಿ ಏರುಗತಿಯ ಪ್ರಯಾಣ. ಇವರು ಮಧ್ಯಪ್ರದೇಶ ತಂಡದಲ್ಲಿ ಆಡುತ್ತ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇವರನ್ನು ಖರೀದಿಸಲು ಬಯಸಿತ್ತು. ಇದಕ್ಕೆ ಬೇರೆಯವರು ಮಾಡಿದ ತಪ್ಪು ಅಡ್ಡಿಯಾಗಿದೆ.