Advertisement

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ

05:45 PM Aug 13, 2022 | Team Udayavani |

ಪುಣೆ: ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವ ರಾಜ್ಯ. ಅದೇ ರೀತಿ ಕನ್ನಡಿಗರ ಬಗ್ಗೆ ಗೌರವವಿರುವ ರಾಜ್ಯ. ನಿಮ್ಮ ಸಂಬಂಧ ಕನ್ನಡದ ಸಂಸ್ಕೃತಿ, ಭಾವನೆ, ಬೆಳವಣಿಗೆಗೆ ನಿರಂತರವಾಗಿರಲಿ. ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಕೆಲಸವಾಗಲಿ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಅಮೃತ ಕಾಲಕ್ಕೆ ಭದ್ರಬುನಾದಿ: ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಭಕ್ತಿಯನ್ನು ಪುನರುಜ್ಜೀವನಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ 1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಡೀ ದೇಶದ ತುಂಬಾ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡುತ್ತಿದೆ. ಇದರ ಅವಶ್ಯಕತೆ ಇದೆ. ದೇಶದ ಏಕತೆ, ಅಖಂಡತೆ ಇದ್ದಾಗ ಮಾತ್ರ ದೇಶ ಕಟ್ಟಲು ಸಾಧ್ಯ. ದೇಶ ಮೊದಲು ಎನ್ನುವ ಭಾವ ಇದ್ದ ದೇಶಕ್ಕೆ ಸೋಲು ಎನ್ನುವುದು ಇರುವುದಿಲ್ಲ. ಭಾರತದ 130 ಕೋಟಿ ಜನ ಸಂಖ್ಯೆ ಎದ್ದು ನಿಂತರೇ ಇಡೀ ಜಗತ್ತೇ ಅಲ್ಲಾಡಿಬಿಡುತ್ತದೆ ಎಂದರು.

ಸರ್ಕಾರದ ನೆರವು: 21ನೇ ಶತಮಾನ ಜ್ಞಾನದ ಕಾಲ. ಮುಂದಿನ ಪೀಳಿಗೆ ಜ್ಞಾನ ಪಡೆಯಬೇಕು. ಜ್ಞಾನದಲ್ಲಿಯೂ ಬಂಟರು ಕಡಿಮೆ ಇಲ್ಲ. ಬಂಟರ ಸಮಾಜಕ್ಕೆ ಕೀರ್ತಿ, ಕಿರೀಟ ಸಿಗುತ್ತದೆ. ನಿಮ್ಮ ಸಂಘದ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಸಂಘಕ್ಕೆ ಅಗತ್ಯವಿರುವ ಸಹಾಯ ಸಹಕಾರವನ್ನು ನೀಡಲಾಗುವುದು. ಪಾಂಡರಾಪುರಕ್ಕೆ ಈ ವರ್ಷ 5 ಕೋಟಿ ರೂ.ಗಳನ್ನು ನೀಡಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ. ಕನ್ನಡಿಗರು ಹೋಗುವ ಕಡೆಗಳಲ್ಲಿ ಸಹಾಯ ಹಸ್ತ ಚಾಚುತ್ತಿದ್ದೇವೆ ಎಂದರು.

Advertisement

ತಾಯಿ ಋಣ ತೀರಿಸುವ ಬಂಟರು: ಕರ್ನಾಟಕದ ಹೊರಗಿರುವ ಕನ್ನಡಿಗರ ಪ್ರೀತಿ ವಿಶ್ವಾಸ ಹಾಗೂ ಅವರ ಬಗ್ಗೆ ನಮಗಿರುವ ಪ್ರೀತಿ ಅವರೊಂದಿಗೆ ನಾವಿದ್ದೇವೆ. ನೀವು ನಮ್ಮವರು, ನಮ್ಮೂರಿನವರು. ಮಣ್ಣು, ತಾಯಿಯ ಋಣ ಅತ್ಯಂತ ಮಹತ್ವದ್ದು. ನಮ್ಮ ಇಡೀ ಬದುಕು ತಾಯಿಯ ಗರ್ಭದಿಂದ ಭೂ ಗರ್ಭದವರೆಗೆ ಪಯಣ.  ಮಣ್ಣಿನ ಋಣವನ್ನು ಸದಾ ಮನಸ್ಸಿನಲ್ಲಿಟ್ಟು ಕೊಂಡು ಅದನ್ನು ತೀರಿಸುವ ಪ್ರಯತ್ನ ಮಾಡುವವರೇ ನಿಜವಾದ ಬಂಟರು ಎಂದರು.

ಬಂಟರದ್ದು ಎಂಟೆದೆ. ಬಂಟರು ಎನ್ನುವ ಹೆಸರಿನಲ್ಲಿಯೇ ಶಕ್ತಿ ಇದೆ. ನೀವು ನಿಮ್ಮ ಊರಿನಲ್ಲಿ ಶಕ್ತಿ ಪ್ರದರ್ಶಿಸಿದ ದೊಡ್ಡ ಮಾತಲ್ಲ. ನೀವು ದೇಶದ ಉದ್ದಗಲಕ್ಕೆ   ಕಾಶ್ಮೀರದಿಂದ ಕನ್ಯಾಕುಮಾರಿ, ದಿಲ್ಲಿ ಎಲ್ಲೇ ಹೋದರೂ ಗೌರವವಿದೆ. ಬಂಟರಾಗಬೇಕಾದರೆ ಅವರಿಗೆ ಎಂಟೆದೆ ಇರಬೇಕು. ಅದು ನಿಮ್ಮ ರಕ್ತದ ಕಣ ಕಣದಲ್ಲಿದೆ.  ವ್ಯಾಪಾರ ವ್ಯವಹಾರದಲ್ಲಿ ಸಾಹಸಕ್ಕೆ ಕೈಹಾಕುವವರು ನೀವು. ವ್ಯಾಪಾರದ ಇಕೋ ಸಿಸ್ಟಮ್ ಸೃಷ್ಟಿಸುತ್ತೀರಿ. ಯಾರಿಗೆ ಸಾಧ್ಯವಿಲ್ಲ ಅದನ್ನು ಮಾಡಿ ತೋರಿಸಿರುವವರು ಬಂಟರು. ಎಂಟೆದೆ ಇದೆ ಎಂದು ಗರ್ವ ತೋರಿಸುವವರಲ್ಲ. ಶಕ್ತಿ ಶಾಲಿಗಳಾದಂತೆಯೇ ಪ್ರೀತಿ ವಿಶ್ವಾಸ ತೋರುವ ಜನ. ಪುಣೆಯಲ್ಲಿ ಕನ್ನಡಿಗರು ಬಹಳಷ್ಟು ಜನರಿದ್ದಾರೆ. ಕನ್ನಡದ ಗುರುತು ಬಂಟರ ಸಂಘದಿಂದ ಇದೆ. ಹೊರಗಿನ ರಾಜ್ಯ ಕ್ಕೆ ಬಂದು ನೆಲೆಸಿದಾಗ ನಮ್ಮ ಊರಿನ ಬಗ್ಗೆ ಇನ್ನೂ ಹೆಚ್ವಿನ ಅಭಿಮಾನ ಬೆಳೆಯುತ್ತದೆ. ದೂರವಾದಷ್ಟು, ಊರು ಮನಸ್ಸಿಗೆ ಹತ್ತಿರವಾಗುತ್ತದೆ ಎಂದರು.

ವಿದ್ಯೆ, ತಂತ್ರಜ್ಞಾನ, ಸಂಸ್ಕೃತಿ ಕಲಿತಿದ್ದೇವೆ. ಅತ್ಯಂತ ಸುಸಂಸ್ಕೃತ ಊರು ಪುಣೆ. ಇಲ್ಲಿ ಬಂದು ಯಶಸ್ವಿಯಾಗಿರುವುದು ಶ್ಲಾಘನೀಯ. ಬೆಂಗಳೂರಿನಲ್ಲಿ ಇದಕ್ಕಿಂತ ಚೆನ್ನಾಗಿರುವ ಬಂಟರ ಸಂಘವನ್ನು ಕಟ್ಟಬೇಕು. ಎಲ್ಲಿಗೆ ಹೋದರೂ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೀರಿ. ಬಂಟರ ಸಂಘ ನೂರಾರು ವರ್ಷ ಸಂಘ ಬಾಳಬೇಕು, ಬೆಳೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next