ವಿಷಕಾರಿ ಔಷಧ, ಶೆರೆ, ತಂಬಾಕು, ಪ್ಲಾಸ್ಟಿಕ್ ಬ್ಯಾಗ್, ಗನ್ ಇತ್ಯಾದಿಗಳ ಬ್ಯಾನ್ ಮಾಡುವುದನ್ನು ಮತ್ತು ಹಾಕಿದ ಬ್ಯಾನನ್ನು ತೆಗೆಯಬೇಕು ಎನ್ನುವ ಹೋರಾಟ ನಡೆಯುವುದನ್ನು ನಾವು ಗಮನಿಸಿದ್ದೇವೆ! ಆದರೆ ದೇವಸ್ಥಾನದ, ಗುರುದ್ವಾರದ, ಬಹಳ ಮನೆಗಳ ಹಿಂದಿನ ಕೋಣೆಯಲ್ಲೋ, ಅಟ್ಟದ ಮೇಲೋ, ಯಾರಿಗೂ ತೊಂದರೆ ಕೊಡದೇ ಸುಮ್ಮನೆ ಕುಂತು, ಕರೆದಾಗ ಜಗುಲಿಗೋ, ದೇವರ ಕೋಣೆಗೋ ಬಂದು ಎಲ್ಲರ ಹಾಡಿಗೆ ಸಂವಾದಿನಿಯಾಗಿ, ಹಾಡುವವರನ್ನು ಮೀರದೇ ಹಾಡು ಮುಗಿಯುತ್ತಿದ್ದಂತೇ ಚಕಾರವೆತ್ತದೇ ಮತ್ತೆ ತನ್ನ ಜಾಗಕ್ಕೆ ಹೋಗಿ ಶಾಂತವಾಗಿ ಕುಳಿತುಕೊಳ್ಳುವ ಹಾರ್ಮೋನಿಯಂನ ಬಳಕೆ ಆಕಾಶವಾಣಿಯಲ್ಲಿ ಬ್ಯಾನ್ ಆಗಿತ್ತು ಎಂದು ನಂಬುವುದು ಕಷ್ಟ. “ಆಲ್ ಇಂಡಿಯಾ ರೇಡಿಯೋ’ದಲ್ಲಿ 1940ರಿಂದ 1971ರವರೆಗೆ ಹಾರ್ಮೋನಿಯಂ ಬ್ಯಾನ್ ಆಗಿತ್ತು ಎಂದು ನಾನು ತಿಳಿದುಕೊಂಡೂ ಬಹಳ ವರುಷ ಆಗಿಲ್ಲ.
(19ನೆಯ ಶತಮಾನ ಆಸುಪಾಸಿನಲ್ಲಿ ಫ್ರಾನ್ಸ್ ನಿಂದ ಬಂದ ಹಾರ್ಮೋನಿಯಂ ಈಗ ಇದ್ದಂತೆ ಇರಲಿಲ್ಲ. ಯುರೋಪಿನಿಂದ ಬಂದ ಈ ಪಾಶ್ಚಾತ್ಯ ವಾದ್ಯ ಈಗಿನ ಹೊಲಿಗೆ ಮೆಷಿನ್ನಿನಂತೆಯೇ ಇತ್ತು. ಅವರು ಅದನ್ನು ಎರಡೂ ಕೈಗಳಿಂದ ನುಡಿಸುತ್ತಿದ್ದುದರಿಂದ ಗಾಳಿ ಹಾಕುವ ಬೆಲ್ಲಿಯನ್ನು ಕಾಲಿನಿಂದ ನಡೆಸಲಾಗುತ್ತಿತ್ತು. ಅಂದರೆ ಅದು ಸುಮಾರಿಗೆ ನಾಟಕ ಕಂಪೆನಿಯ ಲೆಗ್ ಹಾರ್ಮೋನಿಯಂ. ನಾಟಕ ಕಂಪೆನಿಯಲ್ಲಿ ಆ ರೀತಿ ಕುಳಿತುಕೊಳ್ಳುವುದು ಸೂಕ್ತ, ಕಾರಣ ಅಲ್ಲಿನ ಸ್ಟೇಜ್ ಎತ್ತರವಿರುವುದರಿಂದ. ಆದರೆ, ಭಾರತೀಯ ಸಂಗೀತವನ್ನು ನೆಲದ ಮೇಲೆ ಕುಳಿತು ಪ್ರದರ್ಶಿಸುವುದರಿಂದ ಮತ್ತು ಈ ಸಂಗೀತವು “ಮೆಲೊಡಿ’ ಮೂಲ ತತ್ವವನ್ನು ಆಧರಿಸಿದ್ದರಿಂದ ಅದಕ್ಕೆ ತಕ್ಕಂತೆ ಹಾರ್ಮೋನಿಯಂನ ಕೆಳಭಾಗದಲ್ಲಿದ್ದ ಬೆಲ್ಲಿಯನ್ನು ಕತ್ತರಿಸಿ ಮೇಲೆ ತರಲಾಯಿತು. ಒಂದು ಕೈಯಲ್ಲಿ ಬದಿಯಲ್ಲಿರುವ ಬೆಲ್ಲಿಯನ್ನು ಒತ್ತುವುದು, ಮತ್ತೂಂದು ಕೈಯಲ್ಲಿ ಕೀಲಿಯನ್ನು ನುಡಿಸುವಂತೆ ಬದಲಾಯಿಸಲಾಯಿತು. ಈಗ ನಾವು ಸಂಗೀತ ಕಛೇರಿಯಲ್ಲಿ ಗಮನಿಸುವುದು ಈ ಹೊಸ ಹಾರ್ಮೋನಿಯಂನ್ನೇ.)
ಇಂದು ಕೂಡಾ ನೂರಕ್ಕೆ ಎಪ್ಪತ್ತು ಜನರು ಹಾರ್ಮೋನಿಯಂ ಯುರೋಪಿನಿಂದ ಬಂದ ಸಂಗೀತ ವಾದ್ಯ ಎನ್ನುವುದನ್ನು ಒಪ್ಪುವುದೇ ಇಲ್ಲ !
ಸುಮಾರು ಇಸವಿ 1990, ನನ್ನ ಹೈಸ್ಕೂಲಿನ ಕಾಲ. ಹೊನ್ನಾವರದ ಹೈಸ್ಕೂಲಿನ ಮೈದಾನದಲ್ಲಿ ಕಂಪೆನಿ ನಾಟಕದ ಮುದುಕನ ಮದುವೆ, ತಾಯಿ ಕರುಳು, ಬಸ್ ಕಂಡಕ್ಟರ್ ತರಹದ ಎಷ್ಟೇ ಹೆಸರು ಮಾಡಿದ ನಾಟಕವಿದ್ದರೂ ಆ ಸಮಯದಲ್ಲಿ ನನ್ನನ್ನು ಸೆಳೆದದ್ದು ಅಲ್ಲಿನ ಲೆಗ್ ಹಾರ್ಮೋನಿಯಂ. ಬೆಳಕು ಕ್ಷೀಣವಾಗುತ್ತಿದ್ದಂತೆ ನಾಟಕದ ಮುಂದಿನ ಪರದೆ ಇನ್ನೇನು ಸರಿಯುತ್ತಿದೆ ಎನ್ನುವಾಗ ಹಾರ್ಮೋನಿಯಂನಿಂದ ಬರುವ ಸೌಂಡ್ ಕೇವಲ ಟೆಂಟಿನೊಳಗೆ ಕುಂತ ಪ್ರೇಕ್ಷಕರನ್ನಲ್ಲದೆ ಅದರ ಸುತ್ತಲಿರುವ ಗೂಡಂಗಡಿಯವರನ್ನೂ ತನ್ನ ಕಡೆ ಸೆಳೆಯುತ್ತಿತ್ತು. ಗೆಜ್ಜೆ ಕಟ್ಟಿದ ಕೈಗಳು ಆಗ ಸಂವಾದಿನಿಯಾಗುವ ತಬಲಾದ ಮೇಲೆ ಸರಿದಾಡಿದರೆ ಒಂದು ಹೊಸ ಆವರಣವೇ ಸೃಷ್ಟಿಯಾಗುತ್ತಿತ್ತು. ನಂತರ ಮೊದಲ ದೃಶ್ಯ. ದಪ್ಪಮೀಸೆ, ಎಣ್ಣೆ ಹಚ್ಚಿ ಮೇಲಕ್ಕೆತ್ತಿ ಬಾಚಿದ ಕೂದಲು, ಕರಿಕೋಟು, ಅದರ ಪ್ರತಿ ಗುಂಡಿಗೆ ಚಿನ್ನದ ಚೈನು ಸೇರಿಸಿಕೊಂಡು, ಕೈಯಲ್ಲಿ ಚಿನ್ನದ ಕಟ್ಟು ಹಾಕಿಸಿದ ಕೋಲನ್ನು ಹಿಡಿದ ಸಾಹುಕಾರ ನಂಜೇಗೌಡರು ಹೊಗೆಯನ್ನು ಸೀಳಿ ಪ್ರವೇಶಿಸುತ್ತಿದ್ದಂತೇ ಹಾರ್ಮೋನಿಯಂನ “ಭ್ಯಾಂವ್’ ಕುಳಿತ ಪೂರ್ತಿ ಸಭೆಯನ್ನೇ ಹೆದರಿಸುತ್ತಿತ್ತು. ನಂತರದ ರಸ್ತೆ ಸೀನಿಗೆ ಎಂಟರ್ ಆದ ಕಂಡಕ್ಟರ್ ಮಾವನ ಡಿಸ್ಕೊ ಲೈಟಿನೊಂದಿಗೆ ನಡೆಯುವ ಪ್ರಣಯ ಗೀತೆಗೆ ಹಾರ್ಮೋನಿಯಂನ ಮಧುರವಾದ ಸ್ವರವಿನ್ಯಾಸ, ಎಲ್ಲವನ್ನೂ ಮೀರಿ ನಾವು ಹಾರ್ಮೋನಿಯಂನ್ನು ನೋಡುವಂತೆ ಮಾಡುತ್ತಿತ್ತು. ಅತ್ತ ನಾಟಕವಾದರೆ, ಇತ್ತ ನಮ್ಮೂರ ದೇವಸ್ಥಾನದ ಭಜನೆ ಸಪ್ತಾಹಗಳು. ಅಲ್ಲಿ ಹಾರ್ಮೋನಿಯಂನ್ನು ಹತ್ತಿರದಿಂದ ನೋಡಬಹುದಿತ್ತು. ಏಳು ದಿವಸ ನಡೆಯುವ ಭಜನೆಗೆ ಮಧ್ಯಾಹ್ನದ ಹೊತ್ತಿಗೆ ಜನ ಕಡಿಮೆ ಇರುವುದರಿಂದ ಅದನ್ನು ಮುಟ್ಟಬಹುದಿತ್ತು. ಅದೇ ರೀತಿ ಬೆಳಗಿನ ಜಾವ ಎದ್ದಿದ್ದರೆ ಸಣ್ಣಯ್ಯ ಹೆಬ್ಟಾರರು ಉದಯರಾಗ ನುಡಿಸುವಾಗ ಅವರು ಎರಡೂ ಕೈಯಲ್ಲಿ ನುಡಿಸುತ್ತಿದ್ದುದರಿಂದ ನಮಗೆ ಹಾರ್ಮೋನಿಯಂ ಬಾತೆ ಹಾಕುವ ಯೋಗ. ಹಾಗೇ ಊರಿನಲ್ಲಿ ಹಾರ್ಮೋನಿಯಂ ನುಡಿಸಲು ಬರುವಂಥವರು ಇಂತಹ ವಾರ್ಷಿಕ ಭಜನೆ ನಡೆಯುವ ದೇವಸ್ಥಾನಕ್ಕೆ ಪ್ರವೇಶಿಸುವ ಗತ್ತು-ಠೀವಿಯನ್ನು ನೋಡಬೇಕು! ಅವರು ಪ್ರವೇಶಿಸುತ್ತಿದ್ದಂತೇ ಪಕ್ಕದಲ್ಲಿರುವ ಯಾರನ್ನೂ ಗಮನಿಸದೇ, ನೇರವಾಗಿ ಗರ್ಭಗುಡಿಯ ಹತ್ತಿರ ಹೋಗಿ, ಅಲ್ಲಿ ಭಜನೆ ಮಾಡುತ್ತಿರುವವರಿಗೆ ತೊಂದರೆಯಾಗುತ್ತದೆ ಎನ್ನುವ ಸ್ವಲ್ಪವೂ ಅರಿವಿಲ್ಲದೇ ಜೋರಾಗಿ ದೇವರ ಗಂಟೆ ಬಾರಿಸಿ, ಆರತಿ ಸ್ವೀಕರಿಸಿ ಉದ್ದನೆಯ ಕುಂಕುಮ ಹಚ್ಚಿ , ಪ್ರಸಾದವೇರಿಸಿಕೊಂಡು ಭಜನೆಯಾಗುವ ಸ್ಥಳ ಸಮೀಪಿಸುತ್ತಿದ್ದಂತೇ ಈಗಾಗಲೇ ಹಾರ್ಮೋನಿಯಂ ನುಡಿಸುತ್ತಿದ್ದವರು ಈ ದೊಡ್ಡ ಹೆಗಡೆಯವರಿಗೆ ಬಿಟ್ಟುಕೊಡಬೇಕಿತ್ತು. ನಂತರ ಅವರು ನುಡಿಸಿದ್ದೇ ರಾಗ… ಎತ್ತಿದ್ದೇ ಭಜನೆ.
ಅಂತೆಯೇ ಶಾಲೆಯಲ್ಲಿನ ವಾರ್ಷಿಕೋತ್ಸವಕ್ಕೆ ಹಾಡುವ ಎಲ್ಲ ಹಾಡಿಗೂ ರಾಗ ಶಿವರಂಜನಿ ಅಥವಾ ಚಾರುಕೇಶಿ ಹಾಕುವ ತವಕ ನಮ್ಮ ಮಾಸ್ತರದ್ದು. ಮನೆ ಮನೆಗೆ ಹಾರ್ಮೋನಿಯಂ ಹಿಡಿದು “ತಾಯಿ, ಅಕ್ಕಿ’ಯೆಂದು ಬರುವವರು ಸ್ವಲ್ಪ$ ಚೆನ್ನಾಗಿ ಹಾಡಿದರೆ, “ಇನ್ನೆರಡು ಹಾಡು ಹೇಳು, ಊಟ ಮಾಡಿಕೊಂಡು ಹೋಗು’ ಎಂದು ಹೇಳುತ್ತಿದ್ದೆವು. ಹಾರ್ಮೋನಿಯಂ ಹಿಡಿದು ಭಿûಾಟನೆಗೆ ಬರುವವರಿಗೆ ಕೂಡ ನಮ್ಮ ಊರು ಅಜ್ಜನ ಮನೆಯಂತೇ ಕಂಡಿರಬೇಕು!
ಹತ್ತನೆಯ ತರಗತಿ ಮುಗಿಸಿ ಬೆಂಗಳೂರು ಬಸ್ಸಿನಿಂದ ಮಲ್ಲೇಶ್ವರ, ಮೆಜೆಸ್ಟಿಕ್ ಪ್ರವೇಶಿಸುತ್ತಿದ್ದಂತೇ ಸಂಗೀತ ವಾದ್ಯಗಳ ಅಂಗಡಿಯ ಗಾಜಿನಲ್ಲಿ ತುಂಬಿಕೊಂಡಿರುವ ಹಾರ್ಮೋನಿಯಂ ನೋಡಿ ಆಶ್ಚರ್ಯಗೊಂಡಿದ್ದಿದೆ. ನಂತರ ಬಸ್ಸಲ್ಲಿ ದಿನವೂ ರವೀಂದ್ರ ಕಲಾಕ್ಷೇತ್ರ ದಾಟುವಾಗ ಅಲ್ಲಿ ಒಂದು ಕಣ್ಣು ಇಟ್ಟಿದ್ದಿದೆ. ಪ್ರತೀ ಶನಿವಾರ ಬೆಳಗ್ಗೆ ನೀವು ಅಲ್ಲಿ ಹೋಗಬೇಕು. ಆಗಂತೂ ಮೈಕೊ, ಎನ್‌ಜಿಇಎಫ್ ಕಂಪೆನಿಗಳ ಎಂಪ್ಲಾಯ್ ಅಸೋಸಿಯೇಶನ್ನಿನವರು ಮತ್ತು ಇತರ ಹವ್ಯಾಸಿ ಕಲಾ ತಂಡಗಳು ಮಹಾಭಾರತ ಮತ್ತು ಇತರೆ ಕಥೆಯನ್ನಾಧರಿಸಿ ಪೌರಾಣಿಕ ನಾಟಕವನ್ನಾಡುತ್ತಿದ್ದರು. ಈಗಲೂ ಇದೆ. ಕಲಾಕ್ಷೇತ್ರದ ವಿಶಾಲವಾದ ಸ್ಟೇಜಿನಲ್ಲಿ ಎರಡು-ಮೂರು ಪರದೆ. ಆಸ್ಥಾನ, ಉಪವನ ಇತ್ಯಾದಿ. ಸ್ಟೇಜಿನ ಪ್ರಾರಂಭದಲ್ಲಿದ್ದ ನಾಲ್ಕೈದು ಹಲಗೆ ತೆಗೆದರೆ ಅಲ್ಲೇ ಅಂದರೆ ಸ್ಟೇಜಿನ ಮೇಲೆ ನಾಲ್ಕೈದು ಫಿ‚àಟಿನ ಹೊಂಡ. ಅದರೊಳಗೆ ಶಿಸ್ತಾಗಿ ಲೆಗ್ ಹಾರ್ಮೋನಿಯಂ ಬಾರಿಸುತ್ತಿರುವ ನಾಟಕದ ಮೇಷ್ಟ್ರು . ಶನಿವಾರ ಬೆಳಗ್ಗೆಯಾದ್ದರಿಂದ ಪ್ರೇಕ್ಷಕರೂ ಕಡಿಮೆ. ಕೆಲವು ನಾಟಕ ಚೆನ್ನಾಗಿರುತ್ತಿದ್ದವು. ಆದರೆ, ಹೆಚ್ಚಿನ ತಂಡಗಳು ಹವ್ಯಾಸಿಯೇ. ಅಂದರೆ ವರ್ಷಕ್ಕೊಂದೇ ನಾಟಕ ತಾಲೀಮು ಮಾಡಿ ಪ್ರದರ್ಶಿಸುತ್ತಿದ್ದುದರಿಂದ ಹೆಚ್ಚಿನವರು ಪ್ರಾರಂಭದಿಂದ ಕೊನೆಯವರೆಗೂ ಬೇಸೂರ್ ಹಾಡುತ್ತಿದ್ದರು. ಅಪೂಟು ಧ್ವನಿ, ರಾಗ ಜಾnನ, ಲಯವಿರುತ್ತಿರಲಿಲ್ಲ. (ಅವರ ನಾಟಕ ಪ್ರೀತಿ ಇವೆಲ್ಲ ತಾಂತ್ರಿಕ ದೃಷ್ಟಿಗಿಂತ ದೊಡ್ಡದು) ಅವರನ್ನೆಲ್ಲ ಮಕ್ಕಳಂತೇ ಸಂಭಾಳಿಸಿಕೊಂಡು ಹೋಗುತ್ತಿದ್ದುದ್ದು ಆ ಹೊಂಡದಲ್ಲಿ ಕುಂತ ಲೆಗ್ ಹಾರ್ಮೋನಿಯಂ ಆಗಿತ್ತು. ತಬಲಾದವನಿಗೆ ಸಿಟ್ಟುಬಂದರೆ ಜೋರಾಗಿ ತಬಲಾವನ್ನೇ ಸದ್ದು ಮಾಡುತ್ತಿದ್ದ. ಲೆಗ್ ಹಾರ್ಮೋನಿಯಂನ ಮೇಲೆ ಕುಂತ ಸಂಗೀತ ಮೇಷ್ಟ್ರು ಮಾತ್ರ, “ಹೊರಗೆ ಸಿಗು ಮಾಡತೇನೆ’ ಎನ್ನುವ ಇಷಾರೆ ತೋರಿಸುತ್ತಿದ್ದರು!
ಹೀಗೆ ಬಾಲ್ಯದಿಂದ ಇಂದಿನವರೆಗೆ ಪ್ರತೀ ಹಂತದಲ್ಲೂ ಸದ್ದಿಲ್ಲದೇ ತನ್ನ ಪ್ರಭಾವ ಬೀರಿದ್ದು ಹಾರ್ಮೋನಿಯಂ. ನಮಗಷ್ಟೇ ಅಲ್ಲ. ಈ ರೀತಿ ಅನುಭವ, ಆಪ್ತತೆ. ಭಾರತದ ಸಾವಿರ ಸಾವಿರ ಹಳ್ಳಿಗಳಲ್ಲಿ ಸಾವಿರ ಸಾವಿರದಷ್ಟು ಇದೆ. ಆ ನೆನಪನ್ನು ಇನ್ನೂ ಇಟ್ಟು ಜೋಪಾನವಾಗಿ ಕಾಯುತ್ತಿದ್ದಾರೆ. ಹೀಗೆಲ್ಲ ಇರುವಾಗ ಹಿಂದೊಂದು ದಿನ ಆಲ್ ಇಂಡಿಯಾ ರೇಡಿಯೊದಲ್ಲಿ ಹಾರ್ಮೋನಿಯಂನ್ನು ಬ್ಯಾನ್ ಮಾಡಲಾಗಿತ್ತು ಎಂದು ಓದಿದಾಗ ಬೇಸರವಾದದ್ದಂತೂ ನಿಜ.
ಭಾರತದ ಸಾಂಸ್ಕೃತಿಕ ನಾಡಿಯಾದ ಹಾರ್ಮೋನಿಯಂನ್ನು ಯಾಕೆ ಬ್ಯಾನ್ ಮಾಡಿದರು ಎಂದು ಬರುವ ವಾರ ಚರ್ಚಿಸೋಣ.
ಸಚ್ಚಿದಾನಂದ ಹೆಗಡೆ