Advertisement

ಹರೀಶ್‌ ಬಂಗೇರ ಬಿಡುಗಡೆ ಸನ್ನಿಹಿತ ? ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಬಂಧಿತ

03:53 AM Jul 17, 2021 | Team Udayavani |

ಕುಂದಾಪುರ: ತನ್ನ ಹೆಸರಲ್ಲಿ ಕಿಡಿಗೇಡಿಗಳು ಫೇಸ್‌ಬುಕ್‌ ನಕಲಿ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿತರಾಗಿರುವ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಅವರ ಬಿಡುಗಡೆ ಸನ್ನಿಹಿತವಾಗಿದೆ ಎನ್ನುವ ಮಾಹಿತಿ ಲಭಿಸಿದೆ.

Advertisement

ಬಿಡುಗಡೆಯ ಪ್ರಕ್ರಿಯೆ ಈಗ ಪೂರ್ಣಗೊಂಡಿದ್ದು, ಶೀಘ್ರ ಜೈಲಿನಿಂದ ಬಿಡುಗಡೆಗೊಂಡು ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಅವರ ಬಿಡುಗಡೆಗಾಗಿ ಸಂಸದರು, ಶಾಸಕರ ಸಹಿತ ಹಲವು ಮಂದಿ ಜನಪ್ರತಿನಿಧಿಗಳು, ಸಂಘಟನೆಗಳು ಸಹಕರಿಸಿದ್ದರು.

ಪ್ರಕರಣವೇನು?
ಹರೀಶ್‌ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ತೆರೆದ ಪ್ರಕರಣ ಸಂಬಂಧ ಉಡುಪಿ ಸೆನ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್‌ ಹುಯೇಸ್‌ ಹಾಗೂ ತುವೇಸ್‌ನನ್ನು ಬಂಧಿಸಿದ್ದರು. ಈ ಸಹೋದರರಿಬ್ಬರು ಹರೀಶ್‌ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದು, ಅನಂತರ ಅದರ ಸ್ಕ್ರೀನ್‌ ಶಾಟ್‌ ತೆಗೆದು ಖಾತೆಯನ್ನು ಡಿಲೀಟ್‌ ಮಾಡಿದ್ದರು. ಇದು ಹರೀಶ್‌ ಅವರೇ ಹಾಕಿದ ಪೋಸ್ಟ್‌ ಎಂದು ತಿಳಿದು ಸೌದಿ ಪೊಲೀಸರು 2019ರ ಡಿಸೆಂಬರ್‌ನಲ್ಲಿ ಬಂಧಿಸಿದ್ದರು.

ಆರೋಪಿಗಳಿಗೆ ಜಾಮೀನು
ಹರೀಶ್‌ ಬಂಗೇರ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಸಂದೇಶ ರವಾನಿಸಿದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಆಗಿನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮತ್ತು ಹಾಲಿ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ ನೇತೃತ್ವದ ಪೊಲೀಸರ ಪಾತ್ರ ಪ್ರಮುಖವಾಗಿತ್ತು. ಪ್ರಸ್ತುತ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ಶಾನುಭಾಗ್‌ ಪ್ರತಿಕ್ರಿಯೆ
ಹರೀಶ್‌ ಬಂಗೇರ ಬಿಡುಗಡೆಯಾಗಿ ಶೀಘ್ರ ತಾಯ°ಡಿಗೆ ಮರಳಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಅವರ ಬಿಡುಗಡೆಗೆ ಆರಂಭ ದಿಂದಲೂ ಕಾನೂನು ಹೋರಾಟ ನಡೆಸುತ್ತಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್‌ ಶಾನುಭಾಗ್‌ ಪ್ರತಿಕ್ರಿಯಿಸಿದ್ದು, “ಹರೀಶ್‌ ಬಂಗೇರ ಅವರ ಬಿಡುಗಡೆಗೆ ಎಲ್ಲ ರೀತಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ನಕಲಿ ಖಾತೆ ಸೃಷ್ಟಿಸಿ ಬಂಧಿತರಾಗಿರುವ ಆರೋಪಿಗಳ ಕೇಸಿನ ವಿವರ, ಆರೋಪ ಪಟ್ಟಿಗಳನ್ನು ಆಂಗ್ಲ ಮತ್ತು ಅರೆಬಿಕ್‌ಗೆ ಭಾಷಾಂತರಿಸಿ ಕಳುಹಿಸಿ ಕೊಡಲಾಗಿದೆ. ಇದನ್ನೆಲ್ಲ ಅಲ್ಲಿನ ಪೊಲೀಸರು ಪರಿಶೀಲಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next