ಒಂದು ಕಡೆ ಪ್ಯಾಶನೇಟ್ ಗರ್ಲ್, ಮತ್ತೂಂದು ಕಡೆ ಮಧ್ಯಮ ವರ್ಗದ ಹುಡುಗಿ, ಇನ್ನೊಂದು ಕಡೆ ಪೊಲೀಸ್ ಆಫೀಸರ್, ಡ್ಯಾನ್ಸರ್ … ಒಂದಕ್ಕಿಂತ ಒಂದು ವಿಭಿನ್ನ ಪಾತ್ರ. ಬಹುಶಃ ಹರಿಪ್ರಿಯಾ ಖುಷಿಯಾಗಲು ಇದಕ್ಕಿಂತ ಇನ್ನೊಂದು ಬೇರೇನು ಕಾರಣ ಬೇಕಿಲ್ಲ. ಸದ್ಯ ಹರಿಪ್ರಿಯಾ ಕೈಯಲ್ಲಿ ಆರು ಸಿನಿಮಾಗಳಿವೆ. “ಲೈಫ್ ಜೊತೆಗೊಂದ್ ಸೆಲ್ಫಿ’, “ಸೂಜಿದಾರ’, “ಡಾಟರ್ ಆಫ್ ಪಾರ್ವತಮ್ಮ’, “ಕಥಾಸಂಗಮ’, “ಬೆಲ್ ಬಾಟಮ್’ ಹಾಗೂ “ಕುರುಕ್ಷೇತ್ರ’ ಚಿತ್ರಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಆರಕ್ಕೆ ಆರು ಸಿನಿಮಾಗಳಲ್ಲೂ ಹರಿಪ್ರಿಯಾ ಅವರ ಪಾತ್ರ ಭಿನ್ನವಾಗಿದೆಯಂತೆ. ಇದರಲ್ಲಿ ನಾಲ್ಕು ಸಿನಿಮಾಗಳ ಚಿತ್ರೀಕರಣ ಮುಗಿದು ಹೋಗಿದೆ. ಸದ್ಯ ಆ ಸಿನಿಮಾಗಳು ಚಿತ್ರೀಕರಣೋತ್ತರ ಕೆಲಸಗಳಲ್ಲಿ ಬಿಝಿ.
“ಒಂದಕ್ಕಿಂತ ಒಂದು ಸಿನಿಮಾದಲ್ಲಿ ಪಾತ್ರಗಳು ಭಿನ್ನವಾಗಿವೆ. “ಲೈಫ್ ಜೊತೆಗೊಂದ್ ಸೆಲ್ಫಿ’ ಚಿತ್ರದಲ್ಲಿ ಸ್ವತಂತ್ರವಾಗಿ ಓಡಾಡುವ, ನಿರ್ಧಾರ ತೆಗೆದುಕೊಳ್ಳುವ ಪ್ಯಾಶನೇಟ್ ಗರ್ಲ್ ಆಗಿ ಕಾಣಿಸಿಕೊಂಡರೆ, “ಸೂಜಿದಾರ’ದಲ್ಲಿ ತುಂಬಾ ಗಂಭೀರವಾದ ಪಾತ್ರ ಸಿಕ್ಕಿದೆ. ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ. ಇನ್ನು, “ಕಥಾ ಸಂಗಮ’ ಏಳು ಕಥೆಯಲ್ಲಿನ ಒಂದು ಕಥೆಯಲ್ಲಿ ನಟಿಸಿದ್ದೇನೆ. “ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ವೈದೇಹಿ ಪಾತ್ರ. ನನ್ನ ಸಿನಿ ಕೆರಿಯರ್‌ನಲ್ಲಿ ಈ ತರಹದ ಪಾತ್ರ ಮಾಡಿಲ್ಲ. ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇನ್ನು, “ಕುರುಕ್ಷೇತ್ರ’ದ ಅದ್ಧೂರಿ ಹಾಡಿನಲ್ಲಿದ್ದೇನೆ. ಎಲ್ಲಾ ಸಿನಿಮಾಗಳ ಬಗ್ಗೆ ನಾನಂತು ತುಂಬಾ ಎಕ್ಸೆ„ಟ್ ಆಗಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ಹರಿಪ್ರಿಯಾ.
ಎಲ್ಲಾ ಓಕೆ, ಏಕಾಏಕಿ ಹರಿಪ್ರಿಯಾ ಅವರಿಗೆ ಇಷ್ಟೊಂದು ವಿಭಿನ್ನ ಪಾತ್ರಗಳು ಸಿಗಲು ಕಾರಣವೇನು ಎಂದರೆ ತಾಳ್ಮೆ ಎನ್ನುತ್ತಾರೆ. “”ನೀರ್‌ದೋಸೆ’ ನಂತರ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಐದಾರು ತಿಂಗಳು ಬರೀ ಕಥೆ ಕೇಳುವುದರಲ್ಲೇ ಸಮಯ ಕಳೆದೆ. ಯಾವ ಕಥೆ ಒಪ್ಪಿಕೊಂಡರೆ ಮುಂದೆ ವಕೌìಟ್ ಆಗಬಹುದು ಎಂದು ಯೋಚಿಸಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಕಥೆ ಕೇಳಿದೆ. ಒಬ್ಬ ಸಾಮಾನ್ಯ ಪ್ರೇಕ್ಷಕಳಾಗಿ ನಾನು ಇಷ್ಟಪಟ್ಟು, ತೃಪ್ತಿಯಾದ ನಂತರ ಆ ಸಿನಿಮಾವನ್ನು ಒಪ್ಪಿಕೊಂಡೆ. ಅದೇ ಕಾರಣದಿಂದ ಒಂದಷ್ಟು ಹೊಸ ಬಗೆಯ ಪಾತ್ರಗಳು ಸಿಗುತ್ತಿವೆ’ ಎಂದು ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಹೇಳುತ್ತಾರೆ.
ಐದು ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಆದರೆ, ಹರಿಪ್ರಿಯಾ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಆದರೆ, ಇಲ್ಲಿವರೆಗೆ ಯಾವುದೇ ಸಿನಿಮಾವನ್ನು ಅವರು ಒಪ್ಪಿಕೊಂಡಿಲ್ಲ. ಒಮ್ಮೆ ಒಪ್ಪಿಕೊಂಡ ಸಿನಿಮಾದ ಚಿತ್ರೀಕರಣ ಮುಗಿಸದೇ ಮತ್ತೆ ಬೇರೆ ಸಿನಿಮಾ ಒಪ್ಪಿಕೊಂಡರೆ ಡೇಟ್ಸ್ ಹೊಂದಾಣಿಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸದ್ಯ ಕಥೆ ಕೇಳುತ್ತಿದ್ದಾರಂತೆ. “ನನ್ನ ಡೇಟ್ಸ್ ಅನ್ನು ನಾನೇ ನೋಡಿಕೊಳ್ಳುತ್ತೇನೆ. ಹಾಗಾಗಿ, ಯಾವುದೇ ಸಿನಿಮಾಕ್ಕೆ ತೊಂದರೆಯಾಗದಂತೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ’ ಎನ್ನುವುದು ಹರಿಪ್ರಿಯಾ ಮಾತು.
ಹರಿಪ್ರಿಯಾ ನಟಿಸುತ್ತಿರುವ ಸಿನಿಮಾಗಳು
1)ಲೈಫ್ ಜೊತೆಗೊಂದ್ ಸೆಲ್ಫಿ 2) ಸೂಜಿದಾರ 3) ಕುರುಕ್ಷೇತ್ರ 4)ಡಾಟರ್ ಆಫ್ ಪಾರ್ವತಮ್ಮ 5)ಕಥಾ ಸಂಗಮ 6)ಬೆಲ್ ಬಾಟಮ್