Advertisement
ಪುಂಜಾಲಕಟ್ಟೆ: ಉದ್ಯೋಗದಲ್ಲಿದ್ದರೂ ನೆಮ್ಮದಿ ಇಲ್ಲದೆ ಕೊನೆಗೆ ಕೃಷಿಯೊಂದೇ ಕೈ ಹಿಡಿದಿದೆ ಎನ್ನುತ್ತಾರೆ ಸಾವಯವ ಕೃಷಿಕ ಹರಿಪ್ರಸಾದ್ ಪ್ರಭು. ಮೂಲತಃ ಬಂಟ್ವಾಳ ತಾ|ನ ಸಿದ್ದಕಟ್ಟೆ ಸಮೀಪದ ಕಪೆì ಪಾರ್ಲ ನಿವಾಸಿ, ಪ್ರಸ್ತುತ ಕುಕ್ಕಿಪಾಡಿ ಗ್ರಾಮದ ಹೆಣ್ಣೂರುಪದವು ನಿವಾಸಿ ಹರಿಪ್ರಸಾದ್ ಪ್ರಭು ಪಿಯುಸಿ ವಿದ್ಯಾಭ್ಯಾಸದ ಅನಂತರ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿ ಮೆಕ್ಯಾನಿಕ್ ಆಗಿ, ಧಾರಾವಾಹಿ ಸಹ ನಿರ್ದೇಶಕರಾಗಿ ಪಡಿಪಾಟಲು ಪಟ್ಟು ಬಳಿಕ ಊರಿಗೆ ಬಂದು ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ತಾ| ಕೃಷಿ ಇಲಾಖೆಯಿಂದ ಈ ವರ್ಷದ ಉತ್ತಮ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಭು ಅವರಿಗೆ ಕೃಷಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಸುವಲ್ಲಿ ಆಸಕ್ತಿ ಇದ್ದರೂ ಸ್ವಂತ ಜಮೀನು ಇಲ್ಲದ ಕಾರಣ ಕೃಷಿಕನಾಗಲು ಸಾಧ್ಯವಾಗಿರಲಿಲ್ಲ. ಆದರೂ ಹಠ ಬಿಡದ ಪ್ರಭು ಅವರು ಮೊದಮೊದಲು ಕೃಷಿಕರ ಮನೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಕೃಷಿಯ ಅನುಭವ ಬೆಳೆಸಿಕೊಂಡರು. ವರ್ಷ ಕಳೆದಂತೆ ತಾನು ಸಂಪಾದಿಸಿದ ಹಣದಿಂದ ಹತ್ತಿರದ ಹೆಣ್ಣೂರುಪದವುನಲ್ಲಿ 2 ಎಕ್ರೆ ತೋಟ, ಉಳಿದ ಜಾಗವನ್ನು ಲೀಸ್‌ಗೆ ಪಡೆದು 8 ವರ್ಷಗಳ ಕಾಲ ವಿವಿಧ ತರಕಾರಿ ಬೆಳೆಸಿದರು. ಉಳಿಕೆ ಹಣ ಸಂಗ್ರಹಿಸಿ ಕಳೆದ ವರ್ಷ ಹತ್ತಿರದಲ್ಲಿ ಎಲಿಯ ನಡುಗೋಡು ಗ್ರಾಮದ ಉಪ್ಪಿರದಲ್ಲಿ ನಾಲ್ಕೂವರೆ ಎಕ್ರೆ ಖರೀದಿ ಮಾಡಿ ಅಡಿಕೆ, ತೆಂಗು ಕೃಷಿ ಮಾಡಿದ್ದಾರೆ. ಅದರೊಂದಿಗೆ ತರಕಾರಿ ಬೆಳೆಸುತ್ತಿದ್ದಾರೆ.
ಇವರು ಬೆಳೆಸುವ ಹಾಲು ಬೆಂಡೆಗೆ ವಿಶೇಷ ಬೇಡಿಕೆ ಇದೆ. 15 ಇಂಚು ಉದ್ದದ ಪರಿಮಳ,
ಸಿಹಿ ಇರುವ ಈ ಬೆಂಡೆ ಸಾರು, ಪಲ್ಯಕ್ಕೆ ವಿಶಿಷ್ಟ ಸ್ವಾದ ನೀಡುತ್ತದೆ. ಮಳೆಗಾಲ ಆರಂಭದಲ್ಲಿ ಬೆಂಡೆ ಕೃಷಿ ಮಾಡುವ ಇವರು 150 ಗಿಡಗಳಿಂದ ಮೂರು ತಿಂಗಳ ಕಾಲ ಪ್ರತಿನಿತ್ಯ 12 ಕಿ.ಲೋ. ಬೆಂಡೆ ಪಡೆದು ಸುಮಾರು 600 ರೂ. ಆದಾಯ ಗಳಿಸುತ್ತಾರೆ. ಸಾಧಾರಣ ಐದು ತಿಂಗಳಲ್ಲಿ 50 ಸಾವಿರ ರೂ. ಉಳಿಸುತ್ತಾರೆ. ನವೆಂಬರ್ ಅನಂತರ ಅದೇ ಗಿಡದ ಬುಡದಲ್ಲಿ ಅಲಸಂಡೆ ಬೆಳೆಯುತ್ತಾರೆ. ಮೂರು ತಿಂಗಳ ಕಾಲ ಪ್ರತಿದಿನ 25 ಕಿಲೋದಂತೆ ಫಸಲು ತೆಗೆದು 50 ಸಾವಿರ ರೂ. ಗಳಿಸುತ್ತಾರೆ. ಬಳಿಕ ಹೀರೆಕಾಯಿ ಬೆಳೆಯುತ್ತಾರೆ. ತೊಂಡೆ, ಮುಳ್ಳುಸೌತೆ, ಹಾಗಲಕಾಯಿ, ಬಸಳೆ ಇವರು ಬೆಳೆಸುವ ಇತರ ತರಕಾರಿಗಳು. ಕೃಷಿ, ಹೈನುಗಾರಿಕೆಯಲ್ಲಿ ಇವರಿಗೆ ಪತ್ನಿ ಅಶ್ವಿನಿ ಅವರು ಸಾಥ್ ನೀಡಿದ್ದಾರೆ. ಸಾವಯವ ಗೊಬ್ಬರ
ಹಟ್ಟಿ ಗೊಬ್ಬರ, ಸಾವಯವ ಗೊಬ್ಬರವನ್ನು ಮಾತ್ರ ಉಪಯೋಗಿಸುವ ಇವರ ಊರಿನ ತರಕಾರಿ ಬೆಳೆಗಳಿಗೆ ಗ್ರಾಮಾಂತರ ಮತ್ತು ಪೇಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗುತ್ತದೆ.
Related Articles
Advertisement
ಬೇಡಿಕೆ ಇರುವ ಬೆಳೆ ಬೆಳೆಸಿ
ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಕೊಡುವುದು ತರಕಾರಿ ಬೆಳೆ ಮಾತ್ರ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಯನ್ನು ಮಾತ್ರ ಆಯಾಯ ಕಾಲಕ್ಕೆ ಬೆಳೆಯಬೇಕು. ಇದರಿಂದ ಉತ್ತಮ ಆದಾಯ ಸಾಧ್ಯ. ಬೆಂಡೆಕಾಯಿಗೆ ಉತ್ತಮ ಬೇಡಿಕೆ ಇದೆ. ಆದುದರಿಂದ ಅದನ್ನು ಹೆಚ್ಚು ಬೆಳೆದಿದ್ದೇನೆ. ಆರಂಭದಲ್ಲಿ 25ರಿಂದ 30 ಬೆಂಡೆ ಗಿಡ ಬೆಳೆಸಿದೆ. ಬಳಿಕ 400 ಗಿಡದ ವರೆಗೆ ಬೆಳೆಸಿದ್ದೇನೆ. ತರಕಾರಿ ಬೆಳೆಗೆ ವಾತಾವರಣದ ಪ್ರಭಾವವೂ ಮುಖ್ಯ. ಬೇಸಗೆ, ಮಳೆಗಾಲದಲ್ಲಿ ವಿಭಿನ್ನ ತರಕಾರಿ ಬೆಳೆಯಬೇಕು.
-ಹರಿಪ್ರಸಾದ್ ಪ್ರಭು,
ಸಾವಯವ ಕೃಷಿಕರು ಪ್ರಶಸ್ತಿ -ಸಮ್ಮಾನ
ತಾ| ಕೃಷಿ ಇಲಾಖೆಯಿಂದ ಈ ವರ್ಷದ ಉತ್ತಮ ಕೃಷಿಕ ಪ್ರಶಸ್ತಿ.
– ವಿದ್ಯಾಭ್ಯಾಸ-ಪಿಯುಸಿ
– 8 ವರ್ಷಗಳಿಂದ ಕೃಷಿ
– ಮೊಬೈಲ್ ಸಂಖ್ಯೆ- 9448779212 ಹೆಸರು: ಹರಿಪ್ರಸಾದ್ ಪ್ರಭು
ಏನು ಕೃಷಿ: ತರಕಾರಿ, ಅಡಿಕೆ, ತೆಂಗು, ಹೈನುಗಾರಿಕೆ
ವಯಸ್ಸು: 38
ಕೃಷಿ ಪ್ರದೇಶ: ಆರೂವರೆ ಎಕ್ರೆ -ರತ್ನದೇವ್ ಪುಂಜಾಲಕಟ್ಟೆ