Advertisement

ತುಂಗಭದ್ರೆ ತಟದಲ್ಲಿದ್ದರೂ ನೀರಿಗೆ ಪರದಾಟ

11:29 AM Mar 13, 2020 | Naveen |

ಹರಿಹರ: ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆ ತಾಲೂಕಿನ ಪಶ್ಚಿಮ ಗಡಿಯುದ್ದಕ್ಕೂ ಹರಿದು ಬಂದಿದೆ. ಹರಿಹರ ನಗರ ಸೇರಿದಂತೆ ಹಲವಾರು ಗ್ರಾಮಗಳು ನದಿ ತಟದಲ್ಲಿಯೇ ಇವೆ. ಆದರೂ ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎಂಬಂತೆ ಕುಡಿಯುವ ನೀರಿಗೆ ಜನರು ಪರದಾಡುವುದು ಮಾತ್ರ ತಪ್ಪಿಲ್ಲ.

Advertisement

ಇತ್ತೀಚಿಗೆ ಮಳೆ ಅಭಾವದಿಂದ ಜಲಾಶಯದಲ್ಲಿ ನೀರಿನ ಕೊರತೆಯಾಗಿ ಬೇಸಿಗೆ ಮುನ್ನವೆ ನದಿ ನೀರು ಕ್ಷೀಣಿಸುವುದು, ಇದರಿಂದ ನದಿ ಅವಲಂಬಿತ ಯೋಜನೆಗಳ ನೀರು ಪೂರೈಕೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ಅವಧಿ ಭದ್ರಾ ಕ್ಯಾಚ್‌ಮೆಂಟ್‌ ಏರಿಯಾದಲ್ಲಿ ಉತ್ತಮ ಮಳೆಬಿದ್ದ ಪರಿಣಾಮ ಜಲಾಶಯದಲ್ಲಿ ಇನ್ನೂ ನೀರಿರುವುದರಿಂದ ಪ್ರಸಕ್ತ ಬೇಸಿಗೆಗೆ ಸಮಸ್ಯೆಯಾಗಿಲ್ಲ.

ವಿದ್ಯುತ್‌ ಪೂರೈಕೆಯದ್ದೇ ಸಮಸ್ಯೆ: ನಗರಕ್ಕೆ ನೀರು ಪೂರೈಸುವ ಜಾಕ್‌ವೆಲ್‌ ಕವಲತ್ತಿನಲ್ಲಿದ್ದು, ಗ್ರಾಮೀಣ ಪ್ರದೇಶವಾದ್ದರಿಂದ ದಿನಕ್ಕೆ 8-10 ಗಂಟೆ ವಿದ್ಯುತ್‌ ವ್ಯತ್ಯಯವಾಗುತ್ತದೆ. ಇದರಿಂದಾಗಿ ಶುದ್ಧೀಕರಣ ಘಟಕಕ್ಕೆ ನದಿಯಿಂದ ನೀರು ಏರಿಸಲು, ನಿಗದಿಯಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಘಟಕಕ್ಕೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡುವ ಎಕ್ಸ್‌ಪ್ರೆಸ್‌ ಪವರ್‌ ಲೈನ್‌ ಅಳವಡಿಕೆ ಕಾಮಗಾರಿ 6 ವರ್ಷಗಳಿಂದ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ.

ನಗರಕ್ಕೆ ದಿನದ 24 ಗಂಟೆ ನೀರು ಹರಿಸುವ ಜಲಸಿರಿ ಯೋಜನೆ ನಗರದಲ್ಲಿ ಜಾರಿ ಹಂತದಲ್ಲಿದೆ. ಈಗಾಗಲೆ ಮನೆಗಳಿಗೆ ಪೈಪ್‌ಲೈನ್‌, ಮೀಟರ್‌ ಅಳವಡಿಕೆಯಾಗುತ್ತಿದೆ. ಆದರೆ ಬೇಸಿಗೆಯಲ್ಲಿ ನದಿ ಬತ್ತಿದಾಗ ನೀರೆಲ್ಲಿಂದ ತರುವುದು ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ನಗರ ಹೊರವಲಯದ ಬೈಪಾಸ್‌ ರಸ್ತೆ ಸಮೀಪದ ಅಗಸನಕಟ್ಟೆ ಕೆರೆ ಅಭಿವೃದ್ಧಿಪಡಿಸುವ ಯೋಜನೆಗೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ.

Advertisement

98 ಶುದ್ಧ ನೀರಿನ ಘಟಕ: ಭೂಸೇನಾ ನಿಗಮದ 45, ಗ್ರಾಮೀಣ ನೀರು ಸರಬರಾಜು ಇಲಾಖೆಯ 36, ಧರ್ಮಸ್ಥಳ ಸಂಘದ 10, ಸಹಕಾರಿ ಸಂಘಗಳ ಹಾಗೂ ಸಂಸದರ ಅನುದಾನದ ತಲಾ 3 ಸೇರಿ ತಾಲೂಕಿನಲ್ಲಿ ಒಟ್ಟು 98 ಶುದ್ಧ ಕುಡಿಯವ ನೀರಿನ ಘಟಕಗಳಿದ್ದು, ಸದ್ಯಕ್ಕೆ ಎಲ್ಲವೂ ಸುಸ್ಥಿತಿಯಲ್ಲಿವೆ. ಸಣ್ಣಪುಟ್ಟ ಸಮಸ್ಯೆ ಬಂದರೂ 1-2 ದಿನಗಳಲ್ಲಿ ದುರಸ್ತಿಪಡಿಸಿ ನೀರು ಪೂರೈಸಲಾಗುತ್ತಿದೆ.

61 ಹಳ್ಳಿಗೆ ಬಹುಗ್ರಾಮ ಯೋಜನೆ: ರಾಜೀವ್‌ಗಾಂಧಿ ಸಬ್‌ಮಿಷನ್‌ ಅಡಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರೊದಗಿಸಲು 5 ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಯೋಜನೆಯಿಂದ ಮಲೆಬೆನ್ನೂರಿನ 26 ಗ್ರಾಮಗಳಿಗೆ, ಭಾನುವಳ್ಳಿ ಯೋಜನೆಯಡಿ 21 ಗ್ರಾಮಗಳಿಗೆ, ಹೊಳೆಸಿರಿಗೆರೆ ಯೋಜನೆಯಿಂದ 13 ಗ್ರಾಮಗಳಿಗೆ ಮತ್ತು ಏಕ ಗ್ರಾಮ ಯೋಜನೆ ಉಕ್ಕಡಗಾತ್ರಿ ಸೇರಿ ಒಟ್ಟು 61 ಗ್ರಾಮಗಳಿಗೆ ಕುಡಿಯಲು ನದಿ ನೀರು ಪೂರೈಸಲಾಗುತ್ತಿದೆ.

ಕೊಂಡಜ್ಜಿ ಯೋಜನೆ ಬಂದ್‌: ಕೊಂಡಜ್ಜಿ ಮತ್ತಿತರ 12 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದೆ. ಕೊಂಡಜ್ಜಿ ಕೆರೆ ನೀರು ಬಳಸಿಕೊಳ್ಳಬೇಕಿದ್ದ ಈ ಯೋಜನೆಗೆ ದನ-ಕರುಗಳು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು, ಮತ್ತಿತರೆ ಉದ್ದೇಶಗಳಿಗೆ ಸಾಕಾಗುತ್ತಿಲ್ಲವೆಂದು ಕೆರೆ ನೀರು ನೀಡುತ್ತಿಲ್ಲ.ಪರಿಣಾಮ ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಹೊಟ್ಟೆಗೇನಹಳ್ಳಿ, ದೀಟುರು, ಚಿಕ್ಕಬಿದರಿ, ಸಾರಥಿ ಮುಂತಾದ 12 ಗ್ರಾಮಗಳಲ್ಲಿ ನೀರಿಗಾಗಿ ಜನರು ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ. ಗ್ರಾಮಸ್ಥರು ಕುಡಿವ ನೀರಿಗೆ ಪರದಾಡುತ್ತಿರುವುದಲ್ಲದೆ ಕೋಟ್ಯಂತರ ಹಣ ವ್ಯಯಿಸಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ ಬಳಕೆಯಲ್ಲಿಲ್ಲದೆ ಹಾಳಾಗುತ್ತಿದ್ದರೂ ಸಂಬಂಧಪಟ್ಟವರು ಯೋಜನೆ ಜಾರಿಗೆ ಅಗತ್ಯವಿರುವ ನೀರಿನ ಮೂಲ ಹುಡುಕಲು ಮುಂದಾಗಿಲ್ಲ.

ಫ್ಲೋರೈಡ್‌ ನೀರು ತಪ್ಪಿಲ್ಲ: ಪ್ರಭಾವಿಗಳು ಅಕ್ರಮವಾಗಿ ನಲ್ಲಿ ಸಂಪರ್ಕ ಪಡೆದಿರುವುದು, ಅವೈಜ್ಞಾನಿಕ ಕೊಳವೆ ಮಾರ್ಗದಿಂದ ಗ್ರಾಮಗಳ ಕೆಲ ಭಾಗಗಳ ನಲ್ಲಿಗಳಲ್ಲಿ ನೀರು ಬರುವುದೇ ಅಪರೂಪ. ಇದಲ್ಲದೆ ವಿದ್ಯುತ್‌ ಅಭಾವ, ಮಶಿನ್‌ ಕೆಟ್ಟರೆ ಕೂಡಲೇ ದುರಸ್ತಿ ಮಾಡಿಸದ ಕಾರಣ ತಾಲೂಕಿನ ಜನ ಫ್ಲೋರೈಡ್‌ಯುಕ್ತ ಕೊಳವೆ ಬಾವಿ ನೀರು ಕುಡಿಯುವುದು ತಪ್ಪಿಲ್ಲ.

ನಗರ-ಗ್ರಾಮೀಣದ ಒಂದಿಲ್ಲೊಂದು ಪ್ರದೇಶದ ಜನರು ನೀರಿಗೆ ಪರದಾಡು ವಂತಾಗಿದ್ದು, ಜನಪ್ರತಿನಿಧಿ ಗಳು, ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

ಭದ್ರಾ ಜಲಾಶಯದಲ್ಲಿ 40.09 ಟಿಎಂಸಿ ನೀರು
ಜಿಲ್ಲೆಯ ಬಹುತೇಕ ಗ್ರಾಮ, ಪಟ್ಟಣಗಳು ಸೇರಿದಂತೆ ಹರಿಹರ-ದಾವಣಗೆರೆ ಅವಳಿ ನಗರಗಳ ಕುಡಿಯುವ ನೀರಿಗೆ ತುಂಗಭದ್ರಾ ನದಿಯೇ ಪ್ರಮುಖ ಮೂಲವಾಗಿದೆ. ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದರೆ ಮಾತ್ರ ಬೇಸಿಗೆಯಲ್ಲಿ ನದಿ ಹರಿಯಲು ಸಾಧ್ಯ. 63.4 ಟಿಎಂಸಿ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿ (2019ರ ಮಾ.10) ಡ್ಯಾಂನಲ್ಲಿ 33.89 ಟಿಎಂಸಿ ನೀರಿದ್ದರೆ, ಪ್ರಸಕ್ತ ವರ್ಷ 40.09 ಟಿಎಂಸಿ ನೀರಿದೆ.

148 ಮೇಲ್ತೊಟ್ಟಿ, 11,637 ನಲ್ಲಿಗಳು
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 148 ಮೇಲ್ತೊಟ್ಟಿಗಳಿದ್ದು (ಓವರ್‌ಹೆಡ್‌ ಟ್ಯಾಂಕ್‌), 11,637 ನಲ್ಲಿ ಸಂಪರ್ಕಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇದಲ್ಲದೆ ತಾಲೂಕಿನಾಧ್ಯಂತ 648 ಕಿರು ನೀರು ಸರಬರಾಜು ಯೋಜನೆ ಮೂಲಕವೂ ನೀರು ಸರಬರಾಜಾಗುತ್ತಿದೆ .

ಕೊಂಡಜ್ಜಿ ಬಹುಗ್ರಾಮ ನೀರು ಪೂರೈಕೆ ಯೋಜನೆಗೆ ತುಂಗಭದ್ರಾ ನದಿಯಿಂದ ನೀರು ತರುವ ಏತ ನೀರಾವರಿ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದು, ಮಂಜೂರಾಗುವ ನಿರೀಕ್ಷೆಯಿದೆ. ಗ್ರಾಮೀಣ ಪ್ರದೇಶದಲ್ಲೂ ಮೀಟರ್‌ ಅಳವಡಿಸಿದರೆ ನೀರು ದುರ್ಬಳಕೆಯಾಗುವುದಿಲ್ಲ.
ಕೆ.ಗಂಗಾಧರಪ್ಪ,
ಎಇಇ, ಗ್ರಾಮೀಣ ನೀರು
ಸರಬರಾಜು ಮತ್ತು ನೈರ್ಮಲ್ಯ ಇಲಾಖೆ

ಎಕ್ಸ್‌ಪ್ರೆಸ್‌ ಲೈನ್‌ ಅಳವಡಿಕೆಗೆ ಹೆಸ್ಕಾಂನಲ್ಲಿ ಕೆಲವು ಪ್ರಕ್ರಿಯೆ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿದರೆ ಕವಲತ್ತಿನ ಜಾಕ್‌ ವೆಲ್‌ಗೆ ನಿರಂತರ ವಿದ್ಯುತ್‌ ಸಿಗಲಿದೆ. ಆಗ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬಹುದಾಗಿದೆ.
ಎಸ್‌.ಎಸ್‌.ಬಿರಾದರ್‌,
ಎಇಇ, ನಗರಸಭೆ

„ಬಿ.ಎಂ. ಸಿದ್ಧಲಿಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next