Advertisement

ತುಂಗಭದ್ರೆ ತಟದಲ್ಲಿ ಸಂಕ್ರಾಂತಿ ಸಂಭ್ರಮ-ಭೂರಿ ಭೋಜನ

04:43 PM Jan 17, 2020 | Naveen |

ಹರಿಹರ: ಸಂಕ್ರಾಂತಿ ಹಬ್ಬದ ನಿಮಿತ್ತ ಬುಧವಾರ ನಗರದ ತುಂಗಭದ್ರಾ ನದಿ ದಡದಲ್ಲಿ ಸಾವಿರಾರು ಜನರು ಗಂಗಾಪೂಜೆ ನೆರವೇರಿಸಿ, ಸಂಭ್ರಮದ ಸಂಕ್ರಾಂತಿ ಆಚರಿಸಿದರು.

Advertisement

ಎತ್ತಿನ ಬಂಡಿ, ಟ್ರ್ಯಾಕ್ಟರ್‌, ಕಾರು, ಆಟೋ, ದ್ವಿಚಕ್ರವಾಹನಗಳಲ್ಲಿ ಜನರು ಕುಟುಂಬಸ್ಥರು, ಸ್ನೇಹಿತರೊಂದಿಗೆ ಬಂದು ನದಿ ದಡದಲ್ಲಿ ಜಮಾಯಿಸಿದ್ದರು. ನದಿಯ ಪಶ್ಚಿಮ ಭಾಗವಾದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಎಂದಿನಂತೆ ಹೆಚ್ಚಿನ ಜನಸಂದಣಿ ಇತ್ತು. ಪೂರ್ವ ಭಾಗದ ವಾಟರ್‌ವರ್ಕ್ಸ್, ರೈಲ್ವೆ ಸೇತುವೆ, ರಾಘವೇಂದ್ರ ಮಠದ ಸಮೀಪವೂ ಜನರು ಸೇರಿದ್ದರು.

ವಿಶಿಷ್ಟ ಭಕ್ಷ್ಯ ಭೋಜನ: ಬಿರು ಬಿಸಿಲಿನ ಚುರುಕಿನಲ್ಲೂ ಮರಳಿನ ಮೇಲೆ ಜನರು ಗುಂಪು-ಗುಂಪಾಗಿ ಕುಳಿತು ಜೋಳ-ಸಜ್ಜೆಯ ಖಡಕ್‌ ರೊಟ್ಟಿ, ಬಿಸಿ ಚಪಾತಿ, ಮುಳಗಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕಡ್ಲೆ, ಹೆಸರುಕಾಳು, ಬಟಾಣಿ, ಮಡಿಕೆ ಮತ್ತಿತರೆ ಪಲ್ಯಗಳು ಜೊತೆಗೆ
ಶೇಂಗಾ, ಎಳ್ಳು, ಕೊಬ್ಬರಿ, ಹಸಿಮೆಣಸು, ಕೆಂಪುಮೆಣಸು, ಕುರುಶಿಣಿ ಚಟ್ನಿಗಳು, ಅಲ್ಲದೇ ಬಿಳಿ ಅನ್ನ, ಚಿತ್ರಾನ್ನ, ಒಗ್ಗರಣೆ ಬುತ್ತಿ ಜೊತೆಗೆ, ಈರುಳ್ಳಿ, ಸಾಂಬಾರು, ಮೊಸರು, ಮಜ್ಜಿಗೆ ಒಳಗೊಂಡ ರುಚಿ ರುಚಿ ಊಟ ಸವಿದರು.

ಸ್ನಾನದ ಮಜ: ಕಳೆದ ಮೂರ್‍ನಾಲ್ಕು ವರ್ಷ ಸಂಕ್ರಾಂತಿ ವೇಳೆ ನದಿಯ ಒಡಲು ಬತ್ತಿರುತ್ತಿತ್ತು. ಪ್ರಸಕ್ತ ವರ್ಷ ನದಿಯಲ್ಲಿ ನೀರಿರುವ ಕಾರಣ ಯುವಕ-ಯುವತಿಯರು, ಕಿರಿಯರು-ಹಿರಿಯರೆಂಬ ಭೇದವಿಲ್ಲದೇ ನದಿ ನೀರಿನಲ್ಲಿ ಈಜಾಡಿ ಸ್ನಾನದ ಮಜಾ ಅನುಭವಿಸಿದರು.

ನೆರಳಿಗೆ ಡೇರೆ: ಅಯ್ಯಪ್ಪ ಸ್ವಾಮಿ ದೇವಾಲಯ, ರಾಘವೇಂದ್ರ ಮಠ, ಚಿತ್ರಾ ಟಾಕೀಸ್‌ ಹಿಂಭಾಗ, ರೈಲ್ವೆ ಸೇತುವೆ, ಹಳೆಯ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ಜನರು ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಅಲ್ಲಲ್ಲಿ ಡೇರೆಗಳನ್ನು(ಟೆಂಟ್‌) ಹಾಕಿಕೊಂಡಿದ್ದರು. ಕೆಲವರು ತಮ್ಮ ವಾಹನಗಳನ್ನೇ ಸೂರ್ಯ ರಶ್ಮಿಗೆ ಅಡ್ಡ ನಿಲ್ಲಿಸಿ ನೆರಳು ಮಾಡಿಕೊಂಡಿದ್ದರು.

Advertisement

ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ ಇತರೆ ಭಾಗದಿಂದ ಜನರು ಆಗಮಿಸಿದ್ದರು. ತುಂಗ, ಭದ್ರಾ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮದ ಛಾಪು ಇಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಉಳಿದಂತೆ ನದಿ ಸಾಲಿನ ತಾಲೂಕಿನ ಗ್ರಾಮಗಳಾದ ಬಿಳಸನೂರು, ನಂದಿಗಾವಿ, ಚಿಕ್ಕಬಿದರಿ, ಸಾರಥಿ, ಗುತ್ತೂರು, ಹರ್ಲಾಪುರ, ಹಲಸಬಾಳು, ರಾಜನಹಳ್ಳಿ, ಎಳೆಹೊಳೆ, ಧೂಳೆಹೊಳೆ, ನಂದಿಗುಡಿ, ಉಕ್ಕಡಗಾತ್ರಿ, ಕೊಮಾರನಹಳ್ಳಿ ಹಾಗೂ ದೇವರಬೆಳೆಕೆರೆ, ಕೆರೆಯಂಗಳದಲ್ಲೂ ಜನ ಸಂಕ್ರಾಂತಿ ಆಚರಿಸಿದರು. ಕೊಮಾರನಹಳ್ಳಿ, ದೇವರಬೆಳೆಕೆರೆ, ಕೆರೆಯಂಗಳದಲ್ಲೂ ಜನ ಸಂಕ್ರಾಂತಿ ಸಂಭ್ರಮಿಸಿದರು. ಧೂಳೆಹೊಳೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next