Advertisement

ಮಳಿಗೆಗಳ ತೆರವಿಗೆ ನೋಟಿಸ್‌

11:29 AM Mar 05, 2020 | Naveen |

ಹರಿಹರ: ನಗರದ ಗಾಂಧಿ  ಮೈದಾನದ ಅಂಚಿನಲ್ಲಿರುವ ವಾಣಿಜ್ಯ ಸಂಕೀರ್ಣ ಮಳಿಗೆಗಳ ಬಾಡಿಗೆ ಒಪ್ಪಂದದ ಅವಧಿ ಮೀರಿರುವ ಹಿನ್ನೆಲೆಯಲ್ಲಿ ಮೇ 30ರೊಳಗೆ ತೆರವುಗೊಳಿಸುವಂತೆ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮಳಿಗೆದಾರರಿಗೆ ನೋಟಿಸ್‌ ನೀಡಿದೆ.

Advertisement

ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯ 26 ಮಳಿಗೆಗಳ ಮಾಲೀಕರಿಗೆ ಮೇ 30ಕ್ಕೆ ಅವಧಿ ಪೂರ್ಣಗೊಳ್ಳುವ ಕಾರಣ ಅಷ್ಟರಲ್ಲಿ ತೆರವುಗೊಳಿಸುವಂತೆ ನೋಟಿಸಿನಲ್ಲಿ ಸೂಚಿಸಲಾಗಿದೆ. ನಿಯಮಾವಳಿಯಂತೆ 12 ವರ್ಷಕ್ಕೊಮ್ಮೆ ಮಳಿಗೆಗಳ ಮರು ಹರಾಜು ನಡೆಯಬೇಕಿರುವುದರಿಂದ ಇಲಾಖೆ ಪ್ರಕ್ರಿಯೆ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ 2ನೇ ದೊಡ್ಡ ನಗರವೆನಿಸಿದ ಹರಿಹರದಲ್ಲಿ ಹಳೆ ಪಿ.ಬಿ.ರಸ್ತೆ ಮತ್ತು ಮುಖ್ಯ ರಸ್ತೆಯಲ್ಲಿ ಹೆಚ್ಚಿನ ವಾಣಿಜ್ಯ ವಹಿವಾಟು ನಡೆಯುತ್ತದೆ. ಹೀಗಾಗಿ ಮರು ಹರಾಜು ಪ್ರಕ್ರಿಯೆ ನಡೆದರೆ ತಮ್ಮ ಕನಸಿನ ಒಂದು ಮಳೆಗೆ ಪಡೆದು ಏನಾದರೂ ವ್ಯಾಪಾರ, ವಹಿವಾಟು ಮಾಡುವವರಿಗೆ ಆಸೆ ಚಿಗುರಿದೆ.

ಅವಧಿ ಮುಗಿದಿದೆ: ಕಳೆದ 2001ರಲ್ಲಿ ಮಳಿಗೆಗಳನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗಿತ್ತು. ಅವ ಧಿ ಮೀರಿದ ಹಿನ್ನೆಲೆ 26 ಮಳಿಗೆಗಳಿಗೆ ಪರಿಷ್ಕೃತ ಬಾಡಿಗೆ ನಿಗದಿ ಪಡಿಸಿ, ಮರು ಹರಾಜು ಮಾಡಲು ಇಲಾಖೆ ಈ ಕ್ರಮ ಜರುಗಿಸಿದೆ. ಬಾಡಿಗೆದಾರರಿಗೆ ಮಳಿಗೆ ತೆರವುಗೊಳಿಸಲು ಅಗತ್ಯ ಸಮಯ ನೀಡಿ ನೋಟಿಸ್‌ ನೀಡಲಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ ಮಾಹಿತಿ ನೀಡಿದರು.

ತೆರೆಮರೆ ಕಸರತ್ತು: ವಾಣಿಜ್ಯ ಸಂಕೀರ್ಣದಲ್ಲಿ ಹಾಲಿ ಬಾಡಿಗೆದಾರರಲ್ಲಿ ಕೆಲವರು ತಮ್ಮ ಮಳಿಗೆಗಳನ್ನು ತಮ್ಮ ಸುಪರ್ದಿಯಲ್ಲಿಯೇ ಉಳಿಸಿಕೊಳ್ಳಲು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳು, ಮುಖಂಡರು ಹಾಗೂ ಅಧಿ ಕಾರಿಗಳ ಮನವೊಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆಂದು ತಿಳಿದು ಬಂದಿದೆ.

Advertisement

ಗೋದಾಮಿಗೆ ಅವಕಾಶ ಬೇಡ: ಕೆಲ ವ್ಯಾಪಾರಿಗಳು ಕುಟುಂಬಸ್ಥರ ಹೆಸರಿನಲ್ಲಿ ಒಂದಕ್ಕಿಂತ ಅಧಿ ಕ ಮಳಿಗೆ ಪಡೆದುಕೊಂಡು, ಒಂದು ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಾ ಉಳಿದ ಮೂರ್‍ನಾಲ್ಕು ಮಳಿಗೆಗಳನ್ನು ಗೋದಾಮು ಮಾಡಿಕೊಂಡಿದ್ದಾರೆ. ಇದರಿಂದ ವಾಣಿಜ್ಯ ಸಂಕೀರ್ಣದ ಇತರೆ ವ್ಯಾಪಾರಿಗಳಿಗೆ ಅಲ್ಲದೆ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಗೋದಾಮುಗಳನ್ನು ಊರಾಚೆ ಮಾಡಿಕೊಳ್ಳಬೇಕೆಂಬ ನಿಯಮವಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್‌ ಆರೋಪಿಸಿದ್ದಾರೆ.

ಮಳಿಗೆಗಳ ಮರು ಹರಾಜು ಕಾನೂನು ಬದ್ಧ ಹಾಗೂ ವಾಸ್ತವವಾಗಿ ನಡೆಯಬೇಕು. ಅಧಿಕಾರಿ, ಜನಪ್ರತಿನಿಧಿ ಗಳೊಂದಿಗೆ ಸೇರಿ ತೋರಿಕೆಗೆ ಮರು ಹರಾಜು ಪ್ರಕ್ರಿಯೆ ಮಾಡಿ ಮುಗಿಸಿದರೆ ಕ್ರೀಡಾ ಇಲಾಖೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ನಿರುದ್ಯೋಗಿಗಳಿಗೆ ಅವಕಾಶವಾಗಲಿ
ಕಳೆದ ಹಲವು ವರ್ಷಗಳಿಂದ ವಾಣಿಜ್ಯ ಮಳಿಗೆಗಳ ಪೈಕಿ ಹಲವು ಮಳೆಗಗಳು ನಿಯಮ ಬಾಹಿರವಾಗಿ ಬಳಕೆಯಾಗಿವೆ. ಬಾಡಿಗೆ ಪಡೆದವರು ಉಪ ಬಾಡಿಗೆಗೆ ನೀಡುವುದು. ವ್ಯಾಪಾರ ಮಾಡಲು ಎಂದು ಹೇಳಿ ಗೋದಾಮು ಮಾಡಿಕೊಳ್ಳುವುದು. ಹೀಗೆ ವಾಣಿಜ್ಯ ಸಂಕೀರ್ಣದ ಸ್ಥಾಪನೆಯ ಉದ್ದೇಶವನ್ನು ಗಾಳಿಗೆ ತೂರಲಾಗಿದೆ. ಇಲಾಖೆಯು ಮರು ಹರಾಜು ಪ್ರಕ್ರಿಯೆ ಕೈಗೊಂಡಿರುವುದು ಸ್ವಾಗತಾರ್ಹ. ಈ ಮರು ಹರಾಜಿನಲ್ಲಿ ಹೊಸ, ಬಡ, ನಿರುದ್ಯೋಗಿಗಳಿಗೆ ಮಳಿಗೆಗಳು ಸಿಗುವಂತಾದರೆ ಮರು ಹರಾಜಿನ ಉದ್ದೇಶ ಈಡೇರಿದಂತಾಗುತ್ತದೆ.
ಜಿ.ಸಿ.ರವಿಶಂಕರ್‌,
ನಿವಾಸಿ, ಹರಿಹರ

Advertisement

Udayavani is now on Telegram. Click here to join our channel and stay updated with the latest news.

Next