ಹರಿಹರ: ಮಾನವ ಸಮಾಜಕ್ಕೆ ಕಳಂಕವಾಗಿರುವ ಲಿಂಗ ತಾರತಮ್ಯ ನಿವಾರಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಇಲ್ಲಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಬಿ.ಸುಮಲತಾ ಹೇಳಿದರು.
ನಗರದ ಮರಿಯ ನಿವಾಸ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಬೇಟಿ ಬಚಾವೋ, ಬೇಟಿ ಪಢಾವೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗ ತಾರತಮ್ಯ ನಿವಾರಣೆಯ ಗುರಿಯೊಂದಿಗೆ ಭಾರತ ಸರಕಾರ 2015ರಲ್ಲಿ ಈ ಮಹತ್ವದ ಯೋಜನೆ ಆರಂಭಿಸಿದೆ ಎಂದರು.
ವಿಶ್ವಸಂಸ್ಥೆ 1948ರಿಂದಲೂ ಮಾನವ ಹಕ್ಕುಗಳ ರಕ್ಷಣೆಗಾಗಿ ಸದಸ್ಯ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಭಾರತದಲ್ಲಿ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗವನ್ನು 1993, ರಾಜ್ಯ ಆಯೋಗವನ್ನು 2005ರಲ್ಲಿ ಆರಂಭಿಸಲಾಗಿದೆ. ಮಾನವ ಹಕ್ಕುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ವೇದಿಕೆಗೆ ದೂರು ನೀಡಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮಾತೆ ಚರ್ಚ್ ಫಾ| ಅಂತೋನಿ ಪೀಟರ್ ಮಾತನಾಡಿ, ಹೆಣ್ಣು, ಗಂಡು ಎಂಬ ಭೇದಭಾವ ಸರಿಯಲ್ಲ. ಇಬ್ಬರಿಗೂ ಸಮಾನ ಅವಕಾಶ, ಗೌರವ, ಸ್ಥಾನಮಾನ ನೀಡುವುದು ಎಲ್ಲಾ ಪೋಷಕರ ಕರ್ತವ್ಯವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜು ಹಲವಾಗಲು ಮಾತನಾಡಿ, ಹೆಣ್ಣು ಹುಟ್ಟಿದರೆ ಕೀಳರಿಮೆ ಅನುಭವಿಸುವ ಜನರು ಈಗಲೂ ಇದ್ದಾರೆ. ಹಲವರು ಹೆಣ್ಣೆಂದು ತಿಳಿದರೆ ಗರ್ಭಪಾತದಂತಹ ಹೀನ ಕೃತ್ಯವನ್ನೂ ಮಾಡುತ್ತಾರೆ. ಹೆಣ್ಣಿರಲಿ, ಗಂಡಿರಲಿ ಇಬ್ಬರಿಗೂ ಕಾನೂನಿನಡಿ ಸಮಾನ ಸ್ಥಾನಮಾನವಿದೆ ಎಂದರು.
ಬಿಇಒ ಬಸವರಾಜಪ್ಪ ಯು. ಮಾತನಾಡಿ, ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನ ಆರಂಭವಾದಂದಿನಿಂದ ಶಿಕ್ಷಣ ಇಲಾಖೆಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸರಕಾರಿ ಶಾಲಾ, ಕಾಲೇಜುಗಳಲ್ಲಿ ಶುಲ್ಕ ರಹಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಎಪಿಪಿ ಶಂಷೀರ್ ಅಲಿಖಾನ್, ಸಂಪನ್ಮೂಲ ವ್ಯಕ್ತಿ ಕೊಕ್ಕನೂರು ಸಿಆರ್‌ಪಿ ಬಸವರಾಜಯ್ಯ, ವಕೀಲ ಜಾರ್ಜ್ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.