Advertisement

ಸನಾತನ ಸಂಸ್ಕೃತಿಯ ಹಿಂದುತ್ವಕ್ಕೆ ಸಾವಿಲ್ಲ

10:56 AM May 08, 2019 | Naveen |

ಹರಿಹರ: ಸನಾತನ ಸಂಸ್ಕೃತಿಯಾದ ಹಿಂದುತ್ವಕ್ಕೆ ಸಾವಿಲ್ಲ. ಅದೆಷ್ಟೋ ನಾಗರಿಕತೆಗಳು ಬಂದು ಹೋಗಿರಬಹುದು. ಆದರೆ ಹಿಂದುತ್ವ ಅಜರಾಮರ ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ್ಯ ಪ್ರಧಾನ ಸಂಚಾಲಕ ಶಿವಾನಂದಪ್ಪ ಬಡಿಗೇರ್‌ ಹೇಳಿದರು.

Advertisement

ಶ್ರೀರಾಮ ನವಮಿ ನಿಮಿತ್ತ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ವಿರಾಟ್ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಹುಟ್ಟಿದ ಮೇಲೆ ಸಾಯುವುದು ಪ್ರಕೃತಿ ನಿಯಮ. ಇಸ್ಲಾಂ, ಕ್ರೈಸ್ತ ಧರ್ಮಗಳು ನಿರ್ದಿಷ್ಟ ದಿನಾಂಕದಂದು ಹುಟ್ಟಿದ್ದು, ಅವುಗಳಿಗೆ ಎಂದಾದರೊಮ್ಮೆ ಅಂತ್ಯವಿದೆ. ಆದರೆ ಹಿಂದೂತ್ವ ಹುಟಿದ್ದಕ್ಕೆ ದಿನಾಂಕ, ಸಮಯವಿಲ್ಲ. ಹಿಂದುತ್ವ ನಿರಂತರ ಎಂದರು.

ವಿವಿಧ ಜನಾಂಗದವರು ಹಿಂದೂತ್ವ ಮುಗಿಸಲು ಕಳೆದ 2000 ವರ್ಷಗಳಿಂದಲೂ ದಾಳಿ ಮಾಡುತ್ತಿದ್ದರೂ ಯಶಸ್ವಿಯಾಗಿಲ್ಲ. ಪುನರ್‌ಜನ್ಮದ ಮೇಲೆ ನಂಬಿಕೆ ಇಟ್ಟಿರುವ ಹಿಂದೂಗಳನ್ನು ಕೊನೆಗಾಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಯುದ್ಧವಿಲ್ಲದೆ, ಕೇಸು-ಕೋರ್ಟ್‌ ಅಲೆದಾಡದೆ, ನಗುನಗುತ್ತಲೇ ಭಾರತವನ್ನು ಮುಸ್ಲಿಂ ದೇಶವಾಗಿಸುವ ಹುನ್ನಾರ ಲವ್‌ ಜಿಹಾದ್‌. ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಶೇ. 4 ರಷ್ಟಿದ್ದ ಅಲ್ಪಸಂಖ್ಯಾತರು ಇಂದು ಶೇ. 18ರಷ್ಟಾಗಿದ್ದಾರೆ. ಹಿಂದೂಗಳು ಆರ್ಥಿಕ ಶಕ್ತಿಯಿದ್ದರೂ ಕೇವಲ ಒಂದೆರಡು ಮಕ್ಕಳು ಸಾಕೆನ್ನುತ್ತಿದ್ದರೆ, ಅಲ್ಪಸಂಖ್ಯಾತರು ಹಲವು ಮಕ್ಕಳನ್ನು ಹೆತ್ತು ಬಹುಸಂಖ್ಯಾತರಾಗುತ್ತಿದ್ದಾರೆ ಎಂದರು.

ಹಿಂದೂಗಳು ಕೋಮವಾದಿಗಳಲ್ಲ. ಸಹಿಷ್ಣುತಾವಾದಿಗಳು. ಹಿಂದೂಗಳ ಉದಾತ್ತ ಮನೋಭಾವವನ್ನು ದೌರ್ಬಲ್ಯವೆಂದುಕೊಳ್ಳಬಾರದು. ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವುದು ಎರಡೂ ಕಡೆಯಿಂದ ಆಗಬೇಕು. ನಾವು ಕುರಾನ್‌ ದೇವರ ಮನೆಯಲ್ಲಿಟ್ಟು ಪೂಜಿಸಬಲ್ಲೆವು. ಮುಸ್ಲಿಮ್‌ರು ಭಗವದ್ಗೀತೆ ಇಟ್ಟುಕೊಳ್ಳುತ್ತಾರೆಯೇ? ಬಸವಣ್ಣ ಹೇಳಿದಂತೆ ದೇವನೊಬ್ಬ ನಾಮ ಹಲವು ಎಂಬುದನ್ನು ಒಪ್ಪುತ್ತಾರೆಯೇ ಎಂದರು.

Advertisement

ನಮ್ಮ ಪೂರ್ವಜರನ್ನು ಕೊಂದು ಹಾಕಿದ ಟಿಪ್ಪು ಸುಲ್ತಾನನ ಜಯಂತಿ ಆಚರಿಸುವವರಿಗೆ ಹಿಂದೂ ಮುಸ್ಲಿಮ್‌ರ ಸಾಮರಸ್ಯ ಸಾಧಿಸಿದ ಸಂತ ಶಿಶುನಾಳ ಶರೀಫ್‌, ಅಬ್ದುಲ್ ಕಲಾಂ ಜಯಂತಿ ಬೇಕಿಲ್ಲ ಎಂದರು.

ಜಾತಿ, ಕುಲಗಳೆನ್ನೆಲ್ಲ ತೊಡೆದು ಹಿಂದೂಗಳನ್ನು ಒಗ್ಗೂಡಿಸಿದ ಬಸವಣ್ಣ ಅಲ್ಲದೆ ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಕನಕದಾಸ ಇವರೆಲ್ಲಾ ಇಂದು ಸಣ್ಣ-ಪುಟ್ಟ ಸಮಾಜಕ್ಕೆ ಸೀಮಿತರಾಗಿದ್ದಾರೆ. ಇದೆ ರೀತಿ ಛತ್ರಪತಿ ಶಿವಾಜಿಯನ್ನು ಮರಾಠಾ ಸಮಾಜಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದರು.

ಸಮಾಜೋತ್ಸವ ನಿಮಿತ್ತ ಬೈಕ್‌ ರ್ಯಾಲಿಗೆ ಅನುಮತಿ ನೀಡದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತದಲ್ಲಿ ರಾಮ ನವಮಿ ಆಚರಿಸಲೂ ಪರವಾನಿಗೆ ಪಡೆಯಬೇಕು. ಆದರೆ ಪ್ರಾರ್ಥನೆ ಮಾಡಲು ಯಾವುದೇ ಅನುಮತಿ ಬೇಕಿಲ್ಲ. ಇದು ಬಹುಸಂಖ್ಯಾತ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದರು. ಹಿಂಜಾವೆ ತಾಲೂಕು ಅಧ್ಯಕ್ಷ ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ವೀರೇಶ್‌, ಜಿಲ್ಲಾ ಸಂಚಾಲಕ ಸತೀಶ್‌ ಪೂಜಾರಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next