Advertisement

ಮಲೆನಾಡ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ

10:14 AM Aug 08, 2019 | Naveen |

ಹರಿಹರ: ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಹಳ್ಳ-ಕೊಳ್ಳಗಳಿಂದ ನದಿಗೆ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ನದಿ ನೀರಿನ ಹರಿವು ಅಪಾಯದ ಮಟ್ಟ ಸಮೀಪಿಸುತ್ತಿದೆ.

Advertisement

ತಾಲೂಕಿನ ನದಿ ಪಾತ್ರದಲ್ಲಿರುವ ಹಲಸಬಾಳು, ರಾಜನಹಳ್ಳಿ, ತಿಮಲಾಪುರ, ಬಿಳಸನೂರು, ನಂದಿಗಾವಿ, ಧೂಳೆಹೊಳೆ, ಎಳೆಹೊಳೆ, ಸಾರಥಿ, ಚಿಕ್ಕಬಿದರೆ, ಗುತ್ತೂರು ಮುಂತಾದ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ನದಿ ದಡದ ಮೋಟರ್‌ಗಳನ್ನು ರೈತರು ಮೇಲೆತ್ತಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದರೂ ಮಂಗಳವಾರ ರಾತ್ರಿ ನೂರಾರು ಮೋಟಾರ್‌ಗಳು, ಪಂಪ್‌ಹೌಸ್‌ಗಳು ಮುಳುಗಡೆಯಾಗಿವೆ.

ನದಿಯ ಹಿನ್ನೀರಿನಿಂದ ಸಣ್ಣ-ಪುಟ್ಟ ಗ್ರಾಮೀಣ ರಸ್ತೆಗಳು ಮುಳುಗಡೆಯಾಗಿವೆ. ಅಲ್ಲಲ್ಲಿ ಕೃಷಿ ಜಮೀನು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ಕಣಗಳಿಗೂ ನೀರು ನುಗ್ಗಿ, ದನಕರುಗಳ ಮೇವಿನ ಬಣವಿಗಳು ನೀರುಪಾಲಾಗಿವೆ.

ಸಂಪರ್ಕ ಕಡಿತ: ತಾಲೂಕಿನ ಸಾರಥಿ-ಚಿಕ್ಕಬಿದರಿ ಮಧ್ಯೆ ಹಳ್ಳದ ಸೇತುವೆ ಮೇಲೆ 4 ಅಡಿ ಎತ್ತರ ನದಿ ಹಿನ್ನೀರು ಆವರಿಸಿರುವುದರಿಂದ ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸೇತುವೆಯ ಇಕ್ಕೆಲಗಳಲ್ಲಿ ತಡೆಗೋಡೆಯೂ ಇಲ್ಲದ್ದರಿಂದ ಜನ-ದನ ವಾಹನ ಸಂಚಾರ ನಿಷೇಧಿಸಲಾಗಿದೆ.

ಇದೆ ರೀತಿ ಉಕ್ಕಡಗಾತ್ರಿ-ಫತ್ತೇಪುರ ಗ್ರಾಮಗಳ ಮಧ್ಯೆ ರಸ್ತೆ ನೀರಿನಿಂದ ಆವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ನಂದಿಗುಡಿ-ಗೋವಿನಹಾಳ್‌, ಉಕ್ಕಡಗಾತ್ರಿ ಹಾಗೂ ರಾಣೆಬೆನ್ನೂರು ತಾಲೂಕಿನ ಫತ್ತೇಪುರ ಸಂಪರ್ಕಿಸುವ ರಸ್ತೆಗಳು ಜಲಾವೃತವಾಗಿವೆ.

Advertisement

ತಾಲೂಕಿನ ಗುತ್ತೂರು, ಹಲಸಬಾಳು, ನದಿ ಆಚೆಗಿನ ಕೊಡಿಯಾಲ ಹೊಸಪೇಟೆ, ಕುಮಾರಪಟ್ಟಣನಲ್ಲಿ ಹಲವಾರು ಇಟ್ಟಿಗೆ ಭಟ್ಟಿಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಎಪಿಎಂಸಿಯಲ್ಲಿ ಗಂಜಿಕೇಂದ್ರ: ನಗರದ ಗಂಗಾನಗರ, ಕೈಲಾಸನಗರ ಮುಳುಗಡೆ ಭೀತಿ ಎದುರಿಸುತ್ತಿರುವುದರಿಂದ ಸಮೀಪದ ಎಪಿಎಂಸಿ ಗೋದಾಮಿನಲ್ಲಿ ತಾಲೂಕು ಆಡಳಿತದಿಂದ ಈಗಾಗಲೇ ಗಂಜಿ ಕೇಂದ್ರ ತೆರೆಯಲಾಗಿದೆ. ತಿಂಡಿ, ಚಹಾ, ಬ್ರೆಡ್‌, ಬಿಸ್ಕಿಟ್, ಶುದ್ಧ ಕುಡಿಯುವ ನೀರು, ಮಧ್ಯಾಹ್ನ, ರಾತ್ರಿ ಊಟ, ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ನದಿ ನೀರಿನ ಮಟ್ಟ: ಹೊನ್ನಾಳಿ ನದಿ ನೀರು ಮಾಪನ ಕೇಂದ್ರದಲ್ಲಿ ಮಂಗಳವಾರ ಸಂಜೆ 5ಕ್ಕೆ 9.66 ಮೀಟರ್‌ನಷ್ಟಿದ್ದ ನೀರು ಬುಧವಾರ ಬೆಳಿಗ್ಗೆ 7ಕ್ಕೆ 10.16 ಮೀ.ಗೆ ಹೆಚ್ಚಳವಾಗಿತ್ತು. ಮದ್ಯಾಹ್ನ 12ಕ್ಕೆ 10.32 ಮೀ. 2ಕ್ಕೆ 10.45 ಮೀ. 3-30ಕ್ಕೆ 10.55 ಮೀ., 4-30ಕ್ಕೆ ಕ್ಕೆ 10.63 ಮೀ.ಗೆ ಏರಿಕೆಯಾಗಿದ್ದು, ಅಪಾಯ ಮಟ್ಟ 11 ಮೀಟರ್‌ಗೆ ಸಮೀಪದಲ್ಲಿದೆ.

ಎಚ್ಚರಿಕೆ ಟಾಂಟಾಂ: ನದಿ ನೀರು ಏರಿಕೆಯಾಗಿರುವುದರಿಂದ ಜನ-ಜಾನುವಾರು ನೀರಿಗೆ ಇಳಿಯದಂತೆ, ತಗ್ಗು ಪ್ರದೇಶದ ಜನರು ಎತ್ತರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಗ್ರಾಮಗಳಲ್ಲಿ ಎಚ್ಚರಿಕೆ ಟಾಂಟಾಂ ಹೊಡೆಸುವಂತೆ ಬುಧವಾರ ತಹಶೀಲ್ದಾರ್‌ ರೆಹನ್‌ ಪಾಷಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

6 ಮನೆಗಳಿಗೆ ಹಾನಿ: ಕಳೆದ 4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಪಿಟಿ ಮಳೆಯಿಂದ ತಾಲೂಕಿನ ಹಾಲಿವಾಣ, ಬೆಳ್ಳೂಡಿ ಗ್ರಾಮಗಳಲ್ಲಿ ತಲಾ ಎರಡು, ಕೊಮಾರನಹಳ್ಳಿ, ಮಲೆಬೆನ್ನೂರಿನಲ್ಲಿ ತಲಾ ಒಂದು ಮನೆ ಸೇರಿ ಒಟ್ಟು 6 ಮನೆಗಳು ಭಾಗಶಃ ಕುಸಿದು ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next