ವಿಜಯಪುರ: ಜಿಲ್ಲೆಯಲ್ಲಿ ಬುಧವಾರ ವೂಡಾ ಅಧ್ಯಕ್ಷ ಹಾಗೂ ಓರ್ವ ವೈದ್ಯ ಸೇರಿ ನಾಲ್ವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರಲ್ಲಿ 80 ವರ್ಷದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿ ಆಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಅಭಿವೃದ್ಧಿ ಪ್ರಾ ಧಿಕಾರ ಅಧ್ಯಕ್ಷ 47 ವರ್ಷದ ಪಿ28329, ಖಾಸಗಿ ಆಸ್ಪತ್ರೆ ವೈದ್ಯ 50 ವರ್ಷದ ಪಿ28331, 45 ವರ್ಷದ ವ್ಯಕ್ತಿ 28328 ಹಾಗೂ 28 ವರ್ಷದ ಮಹಿಳೆ 28330 ಸೇರಿದಂತೆ ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆಯಾಗಿದೆ.
ಇನ್ನು ಮೃತ ವೃದ್ಧ ರೋಗಿಯನ್ನು 80 ವರ್ಷದ ಪಿ24790 ಎಂದು ಗುರುತಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸದರಿ ಸೋಂಕಿತ ವೃದ್ಧರು ಜು.4ರಂದು ತೀವ್ರ ಉಸಿರಾಟ ತೊಂದರೆ, ತೀವ್ರ ರಕ್ತದೊತ್ತಡ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಮ್ಮು, ನಿಶ್ಯಕ್ತಿ, ಮೈ-ಕೈ ನೋವು ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜು.7ರಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದ್ದಾರೆ.
ಬುಧವಾರ ಚಿಕಿತ್ಸೆ ಫಲಕಾರಿಯಾಗಿ ಮತ್ತೆ ಇಬ್ಬರು ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ಇದರೊಂದಿಗೆ ಗುಣಮುಖರಾದವರ ಸಂಖ್ಯೆ 444ಕ್ಕೆ ಏರಿಕೆಯಾಗಿದೆ. ಇದೀಗ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ 163 ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.