Advertisement

ಅಪಾಯದ ಸುಳಿಯಲ್ಲಿ ಶತಮಾನದ ಸೇತುವೆ

10:41 AM May 25, 2019 | Team Udayavani |

ಹರಿಹರ: ಸಾರ್ವಜನಿಕರ ವ್ಯಾಪಕ ವಿರೋಧದ ನಡುವೆಯೂ ಹರಿಹರ-ಕುಮಾರಟ್ಟಣಂ ನಡುವಿನ ತುಂಗಭದ್ರಾ ನದಿಯ ಹಳೆ ಸೇತುವೆ ಮೇಲೆ ಬೃಹತ್‌ ಪೈಪ್‌ಲೈನ್‌ ಅಳವಡಿಸಲು ಜಲಸಿರಿ ಯೋಜನೆಯ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಅನುಮತಿ ಪಡೆದಿರುವುದು ಬಹಿರಂಗವಾಗಿದೆ.

Advertisement

ದಿನಪೂರ್ತಿ ನೀರು ಪೂರೈಸುವ ಜಲಸಿರಿ ಯೋಜನೆಗೆ ನದಿ ಆಚೆ ಇರುವ ಕವಲೆತ್ತು ಜಾಕ್‌ವೆಲ್ನಿಂದ ನಗರದ ನೀರು ಸರಬರಾಜು ಕೇಂದ್ರದಕ್ಕೆ ನೀರು ತರಲು ಹಳೆ ಸೇತುವೆ ಮೇಲೆ ಪೈಪ್‌ಲೈನ್‌ ಅಳವಡಿಸಲು ಮುಂದಾದಾಗ ಸಾರ್ವಜನಿಕರು ಶಿಥಿಲ ಸೇತುವೆ ಮೇಲೆ ಈಗಾಗಲೇ ಒಂದು ಪೈಪ್‌ ಇದೆ. ಐತಿಹಾಸಿಕ ಸೇತುವೆಗೆ ಹೆಚ್ಚಿನ ಧಕ್ಕೆ ಒದಗಿಸುವುದು ಬೇಡವೆಂದು ವಿರೋಧಿಸಿದ್ದರು.

ಸೇತುವೆಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ ಸಹ ಅನುಮತಿ ಪಡೆಯದೆ ಪೈಪ್‌ಲೈನ್‌ ಅಳವಡಿಕೆ ಬೇಡವೆಂದು ಜಲಸಿರಿ ಯೋಜನೆಯ ಅಧಿಕಾರಿಗಳಿಗೆ ಪತ್ರ ಬರೆದಿತ್ತು.

ಇದರಿಂದ ಬಚಾವಾಗಲು ಜಲಸಿರಿ ಅಧಿಕಾರಿಗಳು ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನಿಂದ ಪೈಪ್‌ಲೈನ್‌ ಭಾರ ಹೊರಲು ಸೇತುವೆ ಶಕ್ಯವಾಗಿದೆ ಎಂದು ವರದಿ ತರಿಸಿಕೊಂಡು, ಸರ್ಕಾರದಿಂದ ಅನುಮತಿಯನ್ನೂ ಸಹ ಪಡೆದು ಈಗ ಕಾಮಗಾರಿಗೆ ಮುಂದಾಗಿದ್ದಾರೆ.

ವರದಿಯಲ್ಲೇನಿದೆ: ಕೇವಲ 2 ಪುಟಗಳಿರುವ ವರದಿಯಲ್ಲಿ ಸೇತುವೆಯ ಉದ್ದಗಲ, ಕಮಾನುಗಳ ಸಂಖ್ಯೆ, ಕಮಾನುಗಳ ಮಧ್ಯದ ಅಂತರ ಆಧರಿಸಿ ಪೈಪ್‌ಲೈನ್‌ ಅಳವಡಿಸಲು ಸೇತುವೆ ಯೋಗ್ಯವಾಗಿದೆ ಎಂದು ವರದಿ ನೀಡಲಾಗಿದೆ.

Advertisement

ಸುಳ್ಳು ಮಾಹಿತಿ: ಬಿಐಇಟಿ ಸಂಸ್ಥೆಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದರೋ ಅಥವಾ ತಜ್ಞರೇ ವರದಿಯಲ್ಲಿ ತಪ್ಪಾಗಿ ಬರೆದರೋ ಗೊತ್ತಿಲ್ಲ, ಆದರೆ 1868 ರಲ್ಲಿ ನಿರ್ಮಾಣವಾಗಿ 151 ವರ್ಷ ಹಳೆಯದಾಗಿರುವ ಈ ಸೇತುವೆಯನ್ನು 1960ರಲ್ಲಿ ನಿರ್ಮಿಸಿದ್ದು, ಕೇವಲ 58 ವರ್ಷವಾಗಿದೆ ಎಂದು ವರದಿಯಲ್ಲಿ ನಮೂದಿಸಿ ಸೇತುವೆಯ ವಯಸ್ಸನ್ನು ಬರೋಬ್ಬರಿ 93 ವರ್ಷಗಳಷ್ಟು ಇಳಿಸಲಾಗಿದೆ.

ಇದಲ್ಲದೆ ಸೇತುವೆ ಮೇಲೆ ಎಲ್ಲಾ ರೀತಿಯ ಲಘು ವಾಹನಗಳು ಸಂಚರಿಸುತ್ತಿದ್ದರೂ ಕೇವಲ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸುತ್ತವೆ ಎಂದು ನಮೂದಿಸಲಾಗಿದೆ. ಹೀಗೆ ಸುಳ್ಳು ಅಂಶಗಳನ್ನಾಧರಿಸಿ ತಮಗೆ ಅನುಕೂಲವಾಗುವಂತೆ ವರದಿ ರೂಪಿಸಿಕೊಂಡಿರುವ ಅಧಿಕಾರಿಗಳು ಜನರ ಕಣ್ಣಿಗೆ ಮಣ್ಣೆರಚಿ ತಮ್ಮ ಕಾರ್ಯ ಸಾಧಿಸಿಕೊಳ್ಳಲು ಮುಂದಾಗಿದ್ದಾರೆ.

ಪಿಡಬ್ಲ್ಯುಡಿ ಮೌನ: ತಮ್ಮದೇ ಇಲಾಖೆಗೆ ಸೇರಿರುವ, ತಮ್ಮ ಕಚೇರಿಯಿಂದ ಕೂಗಳತೆ ದೂರದಲ್ಲಿದ್ದರೂ ಈ ಸೇತುವೆಯ ನಿರ್ಮಾಣ, ಇತರೆ ತಾಂತ್ರಿಕ ಮಾಹಿತಿಗಳು ಪಿಡಬ್ಲ್ಯುಡಿಯವರಿಗೆ ತಿಳಿಯದಿರುವುದು ವಿಪರ್ಯಾಸ. ಸೇತುವೆಯ ವಯಸ್ಸನ್ನು 93 ವರ್ಷ ಕಡಿಮೆ ಮಾಡಿದರೂ ತುಟಿ ಬಿಚ್ಚದ ಇವರ ವರ್ತನೆ ಅನುಮಾನಾಸ್ಪದವಾಗಿದೆ.

ಅಪಾಯವೇನು: ಈಗಾಗಲೆ ಸೇತುವೆಯ ಒಂದು ಬದಿ ಪೈಪ್‌ಲೈನ್‌ ಇರುವುದರಿಂದ ಮಳೆ ನೀರು ಹರಿಯುವ ಕಿಂಡಿಗಳು ಒಂದೆಡೆ ಬಂದ್‌ ಆಗಿವೆ. ಇನ್ನೊಂದು ಲೈನ್‌ ಬಂದರೆ ಅಲ್ಲೂ ಕಿಂಡಿಗಳು ಬಂದ್‌ ಆಗಿ ಸೇತುವೆ ಮೇಲೆ ನೀರು ನಿಲ್ಲಲಿದೆ. ಬೃಹತ್‌ ಗಾತ್ರದ ಪೈಪ್‌, ಅವುಗಳ ಬೆಡ್‌, ಪೈಪ್‌ನಲ್ಲಿ ನಿಲ್ಲುವ ನೀರಿನ ಭಾರದಿಂದ ಕೆಲವೆ ವರ್ಷಗಳಲ್ಲಿ ಸೇತುವೆ ಕುಸಿಯುವ ಅಪಾಯವಿದೆ. ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಿದ್ದರೂ ಅಲ್ಲಿ ವಾಹನ ದಟ್ಟಣೆ ಅಧಿಕವಾಗುವುದರಿಂದ ನದಿ ಆಚೀಚಿನ ಪ್ರದೇಶಗಳ ಜನರು ನಡೆದಾಡಲು, ಸೈಕಲ್ ಸವಾರರಿಗೆ ಹಳೆಯ ಸೇತುವೆ ಅಗತ್ಯವಾಗಿದೆ. ಹೀಗಾಗಿ ಪೈಪ್‌ಲೈನ್‌ ಅಳವಡಿಕೆಗೆ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಒಂದೂವರೆ ಶತಮಾನದ ಸೇತುವೆ
1868ರ ಬ್ರಿಟೀಶ್‌ ಆಡಳಿತಾವಧಿಯಲ್ಲಿ ಕಲ್ಲು ಮತ್ತು ಇಟ್ಟಿಗೆಯಿಂದ ನಿರ್ಮಿಸಿರುವ 840 ಅಡಿ ಉದ್ದದ ಈ ಸೇತುವೆಗೆ ಸಿಮೆಂಟ್ ಮತ್ತು ಕಬ್ಬಿಣ ಬಳಸಿಲ್ಲ. ಸೇತುವೆಯ ಅಂಡಾಕಾರದ 14 ಕಮಾನುಗಳು ಪೈಕಿ 2 ಕಮಾನುಗಳು 1926ರಲ್ಲಿ ಪ್ರವಾಹಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದು, ಅವುಗಳನ್ನು ಪುನರ್‌ನಿರ್ಮಿಸಲಾಗಿತ್ತು. ಸೂಕ್ತ ನಿರ್ವಹಣೆ ಕೊರತೆಯಿಂದ ಮತ್ತೂಂದು ಕಮಾನು ಸಹ ಬಿರುಕು ಬಿಟ್ಟಿದ್ದರಿಂದ 80ರ ದಶಕದಿಂದ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ.

ಸೇತುವೆ ಮಾತ್ರವಲ್ಲ, ಭಾವನೆಗಳ ಬೆಸುಗೆ
ತುಂಗಭದ್ರಾ ನದಿಯ ಹಳೆ ಸೇತುವೆ ಕೇವಲ ಒಂದು ಕಟ್ಟಡವಲ್ಲ. ಮಧ್ಯ ಕರ್ನಾಟಕದ ಜನರ ನೆನಪುಗಳು, ಭಾವನೆಗಳು ಬೆಸೆದುಕೊಂಡಿರುವ ಒಂದೂವರೆ ಶತಮಾನದ ಸ್ಮಾರಕ. ಸೇತುವೆ ಮೇಲೆ ಪೈಪ್‌ಲೈನ್‌ ಹಾಕಿ ಹಾಳು ಮಾಡಲು ನಾವು ಬಿಡುವುದಿಲ್ಲ. ಹೊಸ ಸೇತವೆ ಆರಂಭವಾಗಿರುವುದರಿಂದ ಹಳೆ ಸೇತುವೆ ಮೇಲೆ ಸೈಕಲ್ ಹೊರತುಪಡಿಸಿ ಲಘು ವಾಹನಗಳ ಸಂಚಾರವನ್ನೂ ನಿಷೇಧಿಸಬೇಕು.
ಎಚ್.ಕೆ. ಕೊಟ್ರಪ್ಪ,
ಕಾರ್ಮಿಕ ಮುಖಂಡ

ನನಗೆ ಹಲವಾರು ಸಬ್‌ ಡಿವಿಜನ್‌ಗಳಿವೆ. ಕೆಲಸದ ಒತ್ತಡದಲ್ಲಿ ಸೇತುವೆ ಮೇಲೆ ಪೈಪ್‌ ಅಳವಡಿಸುವ ಕುರಿತು ತಜ್ಞರು ಏನು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ.
•ಸಿ.ರವಿ, ಎಸ್‌ಇ,
ಜಲಸಿರಿ ಯೋಜನೆ, ದಾವಣಗೆರೆ

ಸೇತುವೆ ನಿರ್ಮಾಣವಾಗಿದ್ದು 1886 ಎಂದು ಗೊತ್ತಿಲ್ಲ. 1960 ಸರಿ ಇರಬಹುದು. ನಾನು ತಜ್ಞರ ವರದಿಯನ್ನು ಕ್ರಾಸ್‌ಚೆಕ್‌ ಮಾಡಿಲ್ಲ.
•ಎಂ.ಎನ್‌.ದಳವಾಯಿ,
ಎಇಇ, ಪಿಡಬ್ಲ್ಯೂಡಿ, ಹರಿಹರ

Advertisement

Udayavani is now on Telegram. Click here to join our channel and stay updated with the latest news.

Next