Advertisement

ಪಶುವೈದ್ಯರ ಸೇವೆಯಿಲ್ಲದೆ ಹೈನುಗಾರರಿಗೆ ಸಂಕಷ್ಟ

10:44 PM Feb 08, 2020 | Sriram |

ಬೆಳ್ಮಣ್‌: ಕರಾವಳಿ ಭಾಗದ ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಹೈನುಗಾರರಿಗೆ ಅಗತ್ಯವಾದ ಪಶುವೈದ್ಯರ ಸೇವೆಯೇ ಅಲಭ್ಯವಿದ್ದು ಹೈರಾಣಾಗುವಂತೆ ಮಾಡಿದೆ.

Advertisement

ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕಾಯಿಲೆ ಬಂದರೆ ಹೈನುಗಾರರು ಕಂಗಾಲಾಗುವ ಪರಿಸ್ಥಿತಿ ಇದೆ. ಜಿಲ್ಲಾದ್ಯಂತ ಪಶುವೈದ್ಯರ ಕೊರತೆಯಿದ್ದು, ಇದನ್ನು ಪರಿಹರಿಸುವತ್ತ ಸರಕಾರ ಮನಸ್ಸು ಮಾಡುತ್ತಿಲ್ಲ.

ಕಾರ್ಕಳ ತಾಲೂಕಿನಲ್ಲಿ 92 ವೈದ್ಯಾ ಧಿಕಾರಿಗಳ ಅಗತ್ಯ ಇದ್ದು, ಕೇವಲ 24 ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 41 ಸಹಾಯಕ ಸಿಬಂದಿ ಹಾಗೂ ಪಶು ಪರೀಕ್ಷಕರ ಅಗತ್ಯ ಇದ್ದು, ಕೇವಲ 13 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.

5,000 ಜಾನುವಾರುಗಳಿಗೆ ಒಂದು ಕೇಂದ್ರ
5,000 ಜಾನುವಾರುಗಳಿಗೊಂದು ಪಶು ಆಸ್ಪತ್ರೆ ಬೇಕು ಎಂಬ ಮಾನದಂಡವೊಂದಿದ್ದು, ಕಾರ್ಕಳ ತಾಲೂಕಿನಲ್ಲಿ ಈಗಾಗಲೇ ಹೆಬ್ರಿ, ಬಜಗೋಳಿ, ಕಾರ್ಕಳದಲ್ಲಿ ಇಂತಹ ಕೇಂದ್ರ ಕಾರ್ಯಾಚರಿಸುತ್ತಿದೆ. ನಿಟ್ಟೆಯಲ್ಲಿ ಪಶು ಚಿಕಿತ್ಸಾಲಯ ಇದೆ. ಆದರೆ ಇಲ್ಲಿ ಖಾಯಂ ಸಿಬಂದಿಗಳು ಹಾಗೂ ವೈದ್ಯಾಧಿಕಾರಿಗಳ ಕೊರತೆ ಕಾಣುತ್ತಿದೆ. ಹೀಗಾಗಿ ಹೈನುಗಾರರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಕಾರ್ಕಳ ಕೇಂದ್ರದಲ್ಲಿ 3 ಹಿರಿಯ ವೈದ್ಯಾಧಿಕಾರಿಗಳ ಅಗತ್ಯ ಇದ್ದರೂ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾರ್ಕಳ ತಾಲೂಕಿನಾದ್ಯಂತ ಕಳೆದ ಸೆಪ್ಟಂಬರ್‌ವರೆಗಿನ ಮಾಹಿತಿಯಂತೆ 75 ಹಾಲು ಉತ್ಪಾದಕರ ಸಂಘಗಳಿದ್ದು 6,228 ಹೈನುಗಾರರು ಇದ್ದಾರೆ. ಆದರೆ ಇವರಿಗೆ ಆಸರೆಯಾಗಿರುವ ಕಾಮಧೇನುವನ್ನು ರಕ್ಷಿಸಲು ಪಶು ಸಂಗೋಪನ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬಂದಿ ಕೊರತೆ ಇದೆ. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವೈದ್ಯರ ಸೇವೆ ಸಕಾಲದಲ್ಲಿ ಸಿಗದೇ ಹೋದರೆ ಹೈನುಗಾರರು ಆಪತ್ತಿಗೀಡಾಗಬೇಕಾದ ಸ್ಥಿತಿ ಇದೆ.

Advertisement

ಆಸ್ಪತ್ರೆಗೆ ತಿಂಗಳುಗಟ್ಟಲೆ ಬೀಗ
ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಶು ಆಸ್ಪತ್ರೆ ಜವಾಬ್ದಾರಿಯ ಪಶು ವೈದ್ಯಾಧಿಕಾರಿಗಳಿಗೆ ಇದ್ದರೂ ನಿರಂತರ ಹೆಚ್ಚುವರಿ ಸೇವೆ, ವರ್ಗಾವಣೆ ಹಾಗೂ ರಜೆಗಳ ಕಾರಣಗಳಿಂದ ಸಮಸ್ಯೆ ಎದುರಾಗುತ್ತಿದೆ. ಮುಂಡ್ಕೂರು ಪಂಚಾಯತ್‌ ವ್ಯಾಪ್ತಿಯ ಸಾಂದ್ರ ಶೀತಲೀಕರಣ ಘಟಕದ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳಿದ್ದು 4 ಸಂಘಗಳ ಸುಮಾರು 500 ಹೈನುಗಾರರು ಹಾಲು ಪೂರೈಸುತ್ತಿದ್ದಾರೆ. ಇಲ್ಲಿ ವೈದ್ಯರ ಸೇವೆ ಸಕಾಲಿಕವಾಗಿಲ್ಲ ಎನ್ನುವ ದೂರುಗಳಿವೆ. ಇನ್ನು ಬೋಳ ಗ್ರಾಮದಲ್ಲೂ ವೈದ್ಯರು ಇರುತ್ತಾರೋ ಇಲ್ಲವೋ? ಎಂಬುದೇ ತಿಳಿಯದಂತಾಗಿದೆ. ತಾಲೂಕಿನ ಬಹುತೇಕ ಪಶು ಆಸ್ಪತ್ರೆಗಳ ಸ್ಥಿತಿ ಇದೇ ರೀತಿ ಇದೆ.

ಹಾಲು ಒಕ್ಕೂಟದ ಕ್ಯಾಂಪ್‌ ಆಫೀಸ್‌ಗಳು ವಿರಳವಾಗಿರುವ ಹಿನ್ನೆಲೆಯಲ್ಲಿ ಆ ಕ್ಯಾಂಪ್‌ ಕಚೇರಿಯ ವೈದ್ಯರು ದಿನವೊಂದಕ್ಕೆ 3-4 ಹಸುಗಳ ಶುಶ್ರೂಷೆ ಮಾಡಲು ಸಾಧ್ಯ. ಹೀಗಾಗಿ ಗ್ರಾಮೀಣ ಭಾಗದ ಹೈನುಗಾರರಿಗೆ ಸರಕಾರಿ ಪಶು ವೈದ್ಯರ ಸೇವೆ ಅಗತ್ಯ. ಒಕ್ಕೂಟವೂ ಈ ಬಗ್ಗೆ ಒಂದಷ್ಟು ಕಾಳಜಿ ವಹಿಸಿದರೆ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ.

ಒತ್ತಡ ಹೇರಬೇಕು
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ. ಹೊಸ ಪದವೀಧರರು ಉದ್ಯೋಗದ ಆಕಾಂಕ್ಷೆಯಲ್ಲಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರುಗಳು ಹಾಗೂ ಇತರ ಜನಪ್ರತಿನಿಧಿ ಗಳು ಸೇರಿ ಸರಕಾರಕ್ಕೆ ಒತ್ತಡ ಹೇರಿ ಈ ಸಮಸ್ಯೆ ಪರಿಹರಿಸಬಹುದಾಗಿದೆ.
-ಡಾ| ಪ್ರಸನ್ನ,
ಸಹಾಯಕ ನಿರ್ದೇಶಕರು (ಪ್ರಭಾರ) ಪಶು ಸಂಗೋಪನ ಇಲಾಖೆ ಉಡುಪಿ ಜಿಲ್ಲೆ.

250 ಹುದ್ದೆಗಳು ಖಾಲಿ
ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸಹಾಯಕ ಸಿಬಂದಿ ಡಿ. ಗ್ರೂಪ್‌ ನೌಕರರು, ಹಿರಿಯ ಅಧಿ ಕಾರಿಗಳು ಸೇರಿ ಒಟ್ಟು 357 ಹುದ್ದೆಗಳು ಮಂಜೂರಾಗಿದ್ದು 107 ಹುದ್ದೆಗಳು ಭರ್ತಿಯಾಗಿವೆ. ಉಳಿದಂತೆ 250 ಹುದ್ದೆಗಳು ಖಾಲಿ ಇವೆ. 2019ರ ಮೇ ವರೆಗಿನ ಮಾಹಿತಿಯಂತೆ 336 ಹಾಲು ಉತ್ಪಾದಕರ ಸಂಘಗಳು, 30,513 ಹೈನುಗಾರರಿದ್ದಾರೆ. ಇವರಿಗೆ ವೈದ್ಯರ ಕೊರತೆಯಿಂದಾಗಿ ಸೇವೆ ಸಕಾಲದಲ್ಲಿ ಸಿಗುತ್ತಿಲ್ಲ.

ಸಕಾಲದಲ್ಲಿ ಚಿಕಿತ್ಸೆ
ಪಶು ಸಂಗೋಪನೆ ಇಲಾಖೆ ಈ ಕೊರತೆಗಳನ್ನು ನೀಗಿಸಬೇಕಾಗಿದೆ. ಅ ಧಿಕಾರಿಗಳು ಮತ್ತು ಸಿಬಂದಿ ಕೊರತೆಯಿದ್ದರೂ ಸಕಾಲದಲ್ಲಿ ಸೇವೆ ನೀಡುತ್ತಿದ್ದೇವೆ.
-ಡಾ| ಪ್ರಸಾದ್‌, ವೈದ್ಯಾ ಧಿಕಾರಿಗಳು, ಕಾರ್ಕಳ

ವೈದ್ಯರ ಅಗತ್ಯವಿದೆ
ಗ್ರಾಮೀಣ ಭಾಗದ ಹೈನುಗಾರರಿಗೆ ಪಶು ಇಲಾಖೆಯ ಸಕಲ ಸೇವೆಯ ಜತೆ ಹೈನುಗಾರಿಕೆಯ ಮಾಹಿತಿಗಾಗಿ ಖಾಯಂ ಪಶು ವೈದ್ಯರ ಅಗತ್ಯ ಇದೆ.
-ಪೇರೂರು ಕೃಷ್ಣ ಶೆಟ್ಟಿ, ಅಧ್ಯಕ್ಷರು, ಪೊಸ್ರಾಲು ಹಾ.ಉ. ಸಂಘ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next