ಮುಂಬೈ: ಭಾರತ ಟಿ20 ತಂಡದ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮೂಲಗಳು ವರದಿ ಮಾಡಿದೆ. ಸದ್ಯದ ಉಪ ನಾಯಕ ಕೆ.ಎಲ್.ರಾಹುಲ್ ಬದಲಿಗೆ ಪಾಂಡ್ಯರನ್ನು ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.
ಕನ್ನಡಿಗ ರಾಹುಲ್ ಪದೇ ಪದೇ ಗಾಯಗೊಳ್ಳುತ್ತಿರುವುದು ಇದಕ್ಕೆ ಕಾರಣ. ಫಿಟ್ ನೆಸ್ ಸಮಸ್ಯೆಯಿಂದ ರಾಹುಲ್ ಸತತ ಸರಣಿಗಳಿಂದ ಹೊರುಳಿಯುತ್ತಿದ್ದಾರೆ. ಹೀಗಾಗಿ ತಂಡಕ್ಕೆ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯಗೆ ಈ ಜವಾಬ್ದಾರಿ ನೀಡಲು ಬಿಸಿಸಿಐ ಮುಂದಾಗಿದೆ ಎನ್ನುತ್ತಿದೆ ವರದಿ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮೊದಲ ಬಾರಿ ಉಪ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಬಳಿಕ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಇಲ್ಲೂ ಹಾರ್ದಿಕ್ ಯಶಸ್ಸು ಪಡೆದಿದ್ದರು.
ಇದನ್ನೂ ಓದಿ:ಅಮಿತ್ ಶಾ ಭೇಟಿಯಾದ ಬಿಎಸ್ ವೈ: ಪುತ್ರನ ರಾಜಕೀಯದ ಬಗ್ಗೆ ಚರ್ಚೆ
ಮುಂದಿನ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯಗೆ ಅಧಿಕೃತವಾಗಿ ಉಪ ನಾಯಕತ್ವದ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗಿದೆ. ಮೊದಲ ಐಪಿಎಲ್ ತಂಡದ (ಗುಜರಾತ್ ಟೈಟಾನ್ಸ್) ನಾಯಕತ್ವ ವಹಿಸಿದ್ದ ಹಾರ್ದಿಕ್, ಚೊಚ್ಚಲ ಕಪ್ ಗೆದ್ದುಕೊಂಡಿದ್ದರು. ಹೀಗಾಗಿ ಅವರ ಆಯ್ಕೆ ಬಹುತೇಕ ಖಚಿತ ಎನ್ನುತ್ತಿದೆ ಬಿಸಿಸಿಐ ಮೂಲಗಳು.