Advertisement

ಫೇಸ್‌ಬುಕ್‌ನಲ್ಲಿ ಕಿರುಕುಳ:ಸೆರೆ

05:25 AM Feb 07, 2019 | Team Udayavani |

ಬೆಂಗಳೂರು: ರೂಪದರ್ಶಿಯೊಬ್ಬರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಅಶ್ಲೀಲ ಚಿತ್ರ ಹಾಗೂ ಸಂದೇಶ ಗಳನ್ನು ಕಳುಹಿಸುತ್ತ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಮುಖಪುಟ ಕಲಾವಿದಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಬೆಳಗಾವಿಯ ರಾಮದುರ್ಗ ತಾಲೂಕಿನ ತಮ್ಮಣ್ಣ ಪಕೀರಪ್ಪ ಹಾದಿಮನಿ (52)ಬಂಧಿತ ಆರೋಪಿ. ಆರೋಪಿ ಫೇಸ್‌ಬುಕ್‌ ಮೂಲಕ ಪರಿಚಯವಾದ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಇತ್ತೀಚೆಗೆ ರೂಪದರ್ಶಿಯೊಬ್ಬರಿಗೆ ಅಶ್ಲೀಲ ಸಂದೇಶ ಹಾಗೂ ಚಿತ್ರ ಕಳುಹಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.

ಮೈಸೂರಿನಲ್ಲಿ ಕುಟುಂಬದ ಜತೆ ವಾಸವಾಗಿದ್ದ ಆರೋಪಿ ಕೃತ್ಯ ಬಯಲಾಗುತ್ತಿದ್ದಂತೆ ಬೆಳಗಾವಿಯ ಗೋಕಾಕ್‌ ಬಸ್‌ ನಿಲ್ದಾಣ ಬಳಿಯ ಲಾಡ್ಜ್ವೊಂದರಲ್ಲಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ ಎರಡು ಮೊಬೈಲ್‌ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಕನ್ನಡ ಮತ್ತು ಆಂಗ್ಲ ಭಾಷೆಯ ವಾರಪತ್ರಿಕೆಗಳು, ವಿವಿಧ ಲೇಖಕರ ಪುಸ್ತಕಗಳಿಗೆ ಮುಖಪುಟ ವಿನ್ಯಾಸಗಾರನಾಗಿ ಕರ್ತವ್ಯ ನಿರ್ವಹಿಸಿದ್ದಾನೆ. ಈ ವೇಳೆ ಫೇಸ್‌ಬುಕ್‌ ಮೂಲಕ ರೂಪದರ್ಶಿಯೊಬ್ಬರನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವರ ವೈಯಕ್ತಿಕ ಮಾಹಿತಿ ಸಂಗ್ರಹಿಸಿಕೊಂಡಿದ್ದ ಆರೋಪಿ, ಬಳಿಕ ಫೇಸ್‌ಬುಕ್‌ನ ಮೆಸೆಂಜರ್‌ನಲ್ಲಿ ಜ.24ರಿಂದ ನಿರಂತರವಾಗಿ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ರವಾನಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ.

ಇದಕ್ಕೆ ಕೋಪಗೊಂಡ ಸಂತ್ರಸ್ತೆ ಆರೋಪಿಯ ಅಶ್ಲೀಲ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ತಮ್ಮ ಫೇಸ್‌ಬುಕ್‌ನ ಟೈಮ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರು. ಇದರಿಂದ ಆರೋಪಿ ಎಚ್ಚೆತ್ತುಕೊಳ್ಳದೆ, ಪದೇ ಪದೆ ಸಂದೇಶಗಳನ್ನು ಕಳುಹಿಸುತ್ತಾ ಕಿರಿಕಿರಿ ಉಂಟು ಮಾಡುತ್ತಿದ್ದ. ಜತೆಗೆ ಸಂತ್ರಸ್ತೆಯ ವಿರುದ್ಧ ಕೆಲ ಪೋಸ್ಟ್‌ಗಳನ್ನು ಹಾಕಿ ಅವಮಾನ ಮಾಡುತ್ತಿದ್ದ. ಇದರಿಂದ ಅಸಮಾಧಾನಗೊಂಡ ಸಂತ್ರಸ್ತೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

Advertisement

ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ ಆರೋಪಿ: ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಆರೋಪಿ ತನ್ನ ಖಾತೆಯ ಟೈಮ್‌ಲೈನ್‌ನಲ್ಲಿ ಸಂತ್ರಸ್ತೆ ವಿರುದ್ಧ ಅಪ್‌ಲೋಡ್‌ ಮಾಡಿದ್ದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಈ ಮೂಲಕ ಸಾಕ್ಷ್ಯಾನಾಶ ಕೂಡ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ಈ ಹಿಂದೆಯೂ ಕೃತ್ಯ: ಆರೋಪಿ ನಾಲ್ಕು ವರ್ಷಗಳ ಹಿಂದೆ ದೃಶ್ಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಇದೇ ರೀತಿಯ ಸಂದೇಶಗಳನ್ನು ಕಳುಹಿಸಿದ್ದ. ಈ ಸಂಬಂಧ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೂಬ್ಬ ಮಹಿಳೆಗೂ ಅಶ್ಲಿಲ ಚಿತ್ರಗಳನ್ನು ಕಳುಹಿಸಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪ ಸಂಬಂಧ ಕೆಲ ದಿನಗಳ ಕಾಲ ಜೈಲು ಕೂಡ ಸೇರಿದ್ದ ಆರೋಪಿ, ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.

ಉತ್ತಮ ವಿನ್ಯಾಸಗಾರ ಪ್ರಶಸ್ತಿ
2008ರಲ್ಲಿ ಮಂಬೈನ ತಾಜ್‌ ಹೋಟೆಲ್‌ ಮೇಲಿನ ದಾಳಿಯ ಪ್ರಮುಖ ಆರೋಪಿ, ಉಗ್ರ ಮೊಹಮ್ಮದ್‌ ಅಜ್ಮಲ್‌ ಅಮೀರ್‌ ಕಸಬ್‌ನನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆರೋಪಿ ಅಂತಾರಾಷ್ಟ್ರೀಯ ನಿಯತಕಾಲಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮುಂಬೈನ ಸ್ಥಳೀಯ ಕೋರ್ಟ್‌ನಲ್ಲಿ ವಿಚಾರಣೆ ಕಸಬ್‌ ವಿಚಾರಣೆ ವೀಕ್ಷಿಸಲು ಹೋಗಿದ್ದ ಆರೋಪಿ ಹಾದಿಮನಿ, ಇಡೀ ವಿಚಾರಣೆಯ ಭಾಗವನ್ನು ಉತ್ತಮವಾಗಿ ವಿನ್ಯಾಸ ಮಾಡಿದ್ದರು. ಇದಕ್ಕೆ ಆ ನಿಯತಕಾಲಿಕೆ ಮುಖ್ಯಸ್ಥರು ಉತ್ತಮ ವಿನ್ಯಾಸಗಾರ ಪ್ರಶಸ್ತಿ ಕೂಡ ಪ್ರದಾನ ಮಾಡಿದ್ದರು ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.

ಆರೋಪಿ ತಮ್ಮಣ್ಣ ಪಕೀರಪ್ಪ ಹಾದಿಮನಿ ಈ ಹಿಂದೆಯೂ ಸಾಕಷ್ಟು ಮಂದಿ ಮಹಿಳೆಯರಿಗೆ ಇದೇ ರೀತಿ ಕಿರುಕುಳ ನೀಡಿರುವ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಒಂದು ವೇಳೆ ಈತನಿಂದ ದೌರ್ಜನ್ಯಕ್ಕೊಳಗಾದ ವರು ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಬಹುದು.
 ● ಎಸ್‌.ಗಿರೀಶ್‌, ಡಿಸಿಪಿ, ಕೇಂದ್ರ ಅಪರಾಧ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next