Advertisement

ನಿರ್ಗತಿಕ ಮಹಿಳೆ ಮೇಲೆ ಕೆಲವರಿಂದ ವಿನಾಕಾರಣ ಕಿರುಕುಳ

08:42 PM Apr 07, 2021 | Team Udayavani |

ಮುದ್ದೇಬಿಹಾಳ: ಕಳೆದ 40-45 ವರ್ಷಗಳಿಂದ 6ನೇ ವಾರ್ಡಿನ ಬಸ್‌ನಿಲ್ದಾಣ ಕಾಂಪೌಂಡ್‌ ಗೆ ಹೊಂದಿಕೊಂಡು ವಾಸವಿರುವ ನಮಗೆ ಮನೆ ದುರಸ್ತಿಪಡಿಸಿಕೊಳ್ಳಲು ವಿನಾಕಾರಣ ತೊಂದರೆ ಕೊಡುತ್ತಿರುವವರ ಮೇಲೆ ಮತ್ತು ಇವರಿಗೆ ಪ್ರಚೋದನೆ ನೀಡುತ್ತಿರುವ ಪುರಸಭೆ ಸದಸ್ಯರೊಬ್ಬರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೋಶನಬಿ ಕುಂಟೋಜಿ ಸೇರಿದಂತೆ ಅಲ್ಲಿನ ಕೆಲ ನಿವಾಸಿಗಳು, ಸಂಘಟನೆಗಳ ಮುಖಂಡರ ಸಹಯೋಗದೊಂದಿಗೆ ಪುರಸಭೆ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

6ನೇ ವಾರ್ಡ್‌ ಕಾಯಂ ನಿವಾಸಿಯಾಗಿರುವ ರೋಶನಬಿ ಕುಂಟೋಜಿ 45 ವರ್ಷಗಳಿಂದ ಈಗಿರುವ ಸ್ಥಳದಲ್ಲೇ ವಾಸವಾಗಿದ್ದಾರೆ. ಪುರಸಭೆಗೆ ಭೂ ಬಾಡಿಗೆ, ವಿದ್ಯುತ್‌ ಬಿಲ್‌ ಕಾಲ ಕಾಲಕ್ಕೆ ಕಟ್ಟುತ್ತಿದ್ದಾರೆ. ಕಳೆದ ವರ್ಷ ಸುರಿದ ಭಾರೀ ಮಳೆಗೆ ವಾಸವಿದ್ದ ಮನೆ ಕುಸಿದು ವಾಸಕ್ಕೆ ತೊಂದರೆ ಆಗಿತ್ತು. ಅದನ್ನು ಸಾಲ ಸೋಲ ಮಾಡಿ ದುರಸ್ತಿಗೆ ಮುಂದಾದಾಗ ಮನೆ ಪಕ್ಕದ ನಿವಾಸಿ ವಿಶ್ವನಾಥ ಕಡಿ ಎನ್ನುವವರು ಈ ಜಾಗ ಮುನಸಿಪಾಲಟಿಯ ಜಾಗ ಇದೆ.

ನಾನು ಕಟ್ಟಿಕೊಳ್ಳಬೇಕು ಅಂತಾ ಇದೀನಿ. ನೀನು ಕಟ್ಟಿದರೆ ನಾ ಏನು ಮಾಡಲಿ ಅಂತಾ ಒಬ್ಬಂಟಿಗಳಾದ ರೋಶನಬಿಗೆ ತಡೆದಿದ್ದಾರೆ. ನಾನು ಅವರ ಮಾತು ಕೇಳದಿದ್ದಾಗ ಪುರಸಭೆ ಸದಸ್ಯ ವೀರೇಶ ಹಡಲಗೇರಿ ಎನ್ನುವ ತಮ್ಮ ಸಂಬಂ ಧಿಯನ್ನು ಕರೆ ತಂದು, ಪುರಸಭೆಯಲ್ಲಿ ಪ್ರಭಾವ ಬಳಸಿ ಮನೆ ದುರಸ್ತಿಗೊಳಿಸುವುದನ್ನು ತಡೆದಿದ್ದಾರೆ. ನಿರ್ಗತಿಕಳಾದ ರೋಶನಬಿಗೆ ಹಿಂದೆ ಮುಂದೆ ಯಾರೂ ಇಲ್ಲ. ಪುರಸಭೆ ಆಡಳಿತ ಮಂಡಳಿಯವರು ಮನೆ ದುರಸ್ತಿಗೆ ಅವಕಾಶ ಮಾಡಿಕೊಡಬೇಕು ಮತ್ತು ಪ್ರಭಾವಿಗಳಿಗೆ ತಕ್ಕ ಕಾನೂನು ಶಿಕ್ಷೆ ವಿ ಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಎಲ್ಲ ಅತಿಕ್ರಮಣ ತೆಗೆಯಿರಿ: ಈ ಸಂದರ್ಭ ಮಾತನಾಡಿದ ಗುಡ್ನಾಳದ ಬಾಬಾ ಪಟೇಲ್‌, ಪಟ್ಟಣದಲ್ಲಿ ಸಾಕಷ್ಟು ಕಡೆ ಅತಿಕ್ರಮಣ ಆಗಿದೆ. ಪುರಸಭೆ ಸದಸ್ಯ ವೀರೇಶ ಹಡಲಗೇರಿ ಎನ್ನುವವರು ಕಮ್ಯೂನಲ್‌ ವಯೋಲೆನ್ಸ್‌ ಮಾಡುತ್ತಿದ್ದಾರೆ. ಡಿಸಿ ಬಳಿ ಪತ್ರ ಕೊಟ್ಟು ಮುಖ್ಯಾ ಧಿಕಾರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ವಾರ್ಡ್‌ 1ರಿಂದ ಹಿಡಿದು 23 ವಾರ್ಡ್‌ವರೆಗೂ ಮುನ್ಸಿಪಾಲ್ಟಿ ಜಾಗೆಯಲ್ಲಿ ಎಲ್ಲ ರೀತಿಯ ಅತಿಕ್ರಮಣ ಮಾಡಲಾಗಿದೆ. ರೋಶನಬಿಗೆ ತೊಂದರೆ ಕೊಡುತ್ತಿರುವ ಕಡಿ ಎನ್ನುವವರೇ ಸ್ವತಃ ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಇದನ್ನು ಮುಚ್ಚಿಟ್ಟು ಇನ್ನೊಬ್ಬರ ಅತಿಕ್ರಮಣ ತೆರವಿಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.

ಪುರಸಭೆಯವರು ಇಂಥವರ ಮಾತಿಗೆ ಮಣಿದು ಒಬ್ಬರನ್ನೇ ಟಾರ್ಗೆಟ್‌ ಮಾಡಿ ಅತಿಕ್ರಮಣದ ಹೆಸರಲ್ಲಿ ಕಟ್ಟಡ ತೆರವಿಗೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಯಾರೋ ಒಬ್ಬ ದೂರಿದ ಮಾತ್ರಕ್ಕೆ ಯಾರೋ ಒಬ್ಬರನ್ನು ಟಾರ್ಗೆಟ್‌ ಮಾಡುವುದು ಸರಿ ಅಲ್ಲ. ಪುರಸಭೆ ಮುಖ್ಯಾ ಧಿಕಾರಿಗೆ, ಜಿಲ್ಲಾ ಧಿಕಾರಿಗೆ ಅಷ್ಟು ಆಸಕ್ತಿ ಇದ್ದರೆ ಪಟ್ಟಣದಲ್ಲಿ ಎಲ್ಲೆಲ್ಲಿ ಅತಿಕ್ರಮಣ ಆಗಿದೆಯೋ ಅದೆಲ್ಲವನ್ನೂ ತೆರವುಗೊಳಿಸಲಿ. ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಇದನ್ನು ಬಿಟ್ಟು ಬಡವರನ್ನೇ ಟಾರ್ಗೆಟ್‌ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

Advertisement

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾ ಧಿಕಾರಿ ಗೋಪಾಲ ಕಾಸೆ, ರೋಶನಬಿಯವರು 40 ವರ್ಷದಿಂದ ಒಂದೇ ಕಡೆ ಇದ್ದೇವೆ. ಇರಲು ಬೇರೆ ಜಾಗ ಇಲ್ಲ. ನಿರ್ಗತಿಕರಿದ್ದೇವೆ. ಮನೆ ದುರಸ್ತಿಗೆ ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದರು. ತಕರಾರು ಬಂದಿದ್ದರಿಂದ ಕಾಮಗಾರಿ ತಡೆಗಟ್ಟಿದ್ದೇವೆ. ಈ ಸರ್ವೇ ನಂಬರ್‌ ನಲ್ಲಿ ಎಲ್ಲೆಲ್ಲಿ ರಸ್ತೆ ಅತಿಕ್ರಮಣ ಆಗಿದೆ ಅನ್ನೋದನ್ನು ತಿಳಿದುಕೊಂಡು ಅದೆಲ್ಲವನ್ನೂ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ರೋಶನಬಿಯವರು ನಿರ್ಗತಿಕರಾಗಿದ್ದರೆ ಅವರಿಗೆ ಸರ್ಕಾರದ ಉಚಿತ ವಸತಿ ಯೋಜನೆ ಅಡಿ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡುತ್ತೇವೆ. ರಸ್ತೆಯಲ್ಲಿ ಮನೆ ಕಟ್ಟಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗುತ್ತದೆ. ಪಟ್ಟಣದಲ್ಲಿರುವ ಎಲ್ಲ ಅತಿಕ್ರಮಣ ತೆರವುಗೊಳಿಸಲು ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಹುಲಗಪ್ಪ ನಾಯಕಮಕ್ಕಳ, ಪರಶುರಾಮ ಮುರಾಳ, ಚೇತನ್‌ ಮೋಟಗಿ, ಎಂ.ಸಿ. ಮ್ಯಾಗೇರಿ ವಕೀಲರು, ಸನ್ನಿ ವಾಲ್ಮೀಕಿ, ಮಲ್ಲಯ್ಯ ಸಾಲಿಮಠ, ರಾಮೋಡಗಿ, ಬಡಾವಣೆಯ ಕೆಲ ನಿವಾಸಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next