ಬೆಂಗಳೂರು: ಹಾಡುಹಗಲೇ ಯುವಕನೊಬ್ಬ ಮಾರಕಾಸ್ತ್ರ ಹಿಡಿದು ಯುವತಿಯೊಬ್ಬಳಿಗೆ ಕಿರುಕುಳ ನೀಡಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದನ್ನು ಕಂಡ ಸ್ಥಳೀಯ ಮಹಿಳೆಯೊಬ್ಬರು ಯುವತಿಯ ರಕ್ಷಣೆಗೆ ಧಾವಿಸಿದ್ದಾರೆ.
ಸೋಮವಾರ ಘಟನೆ ನಡೆದಿದ್ದು, ಈ ಕುರಿತ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿವೆ. ಪುಲಕೇಶಿನಗರದ ವಿವೇಕಾನಂದ ರೆಸಿಡೆನ್ಸಿ ಬಳಿ ಯುವಕನೊಬ್ಬ ನಡೆದು ಹೋಗುತ್ತಿದ್ದ ಯುವತಿಯ ಬೆನ್ನಟ್ಟುತ್ತಾ ಬಂದಿದ್ದಾನೆ. ಬಳಿಕ ಆತ ಏಕಾಏಕಿ ಮಾರಕಾಸ್ತ್ರ ತೋರಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದರು.
ಸ್ಥಳೀಯ ಮಹಿಳೆಯ ನೆರವು: ಯುವತಿಯ ಚೀರಾಟ ಕೇಳಿದ ಸ್ಥಳೀಯ ಮಹಿಳೆಯೊಬ್ಬರು ಕೂಡಲೇ ಆಕೆಯ ನೆರವಿಗೆ ಧಾವಿಸಿದ್ದಾರೆ. ಯುವತಿ ರಕ್ಷಿಸಲು ಮಹಿಳೆ ಕೂಗಿಕೊಂಡು ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದಾನೆ. ಅಸ್ವಸ್ಥಗೊಂಡಿದ್ದ ಯುವತಿಗೆ ಸಮಾಧಾನ ಪಡಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವತಿಗೆ ಸಾಂತ್ವನ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಪುಲಕೇಶಿನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಾಗಿದೆ. ಮತ್ತೂಂದೆಡೆ ಈ ಭಾಗದಲ್ಲಿ ಪೊಲೀಸರಿಂದ ಸರಿಯಾಗಿ ಗಸ್ತು ಆಗುತ್ತಿಲ್ಲ. ಹೀಗಾಗಿ ಈ ರೀತಿಯ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.