ಬೆಂಗಳೂರು: ಆಟೋ ಚಾಲಕನೊಬ್ಬ ಯುವತಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಅಶೋಕನಗರದ ಗರುಡಾ ಮಾಲ್ ಬಳಿ ನಡೆದಿದ್ದು, ಈ ಸಂಬಂಧ ಸಂತ್ರಸ್ತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಘಟನೆಯನ್ನು ಫೋಸ್ಟ್ ಮಾಡಿದಲ್ಲದೆ, ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಂತೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.ಆಟೋ ಚಾಲಕ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆತನನ್ನು ಬಂಧಿಸಿ, ಆತನ ಚಾಲನಾ ಪರವಾನಿಗೆ ರದ್ದು ಪಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಏನಿದು ಘಟನೆ?: ಸೆ.30ರಂದು ಸಂಜೆಗೆ ನಾನು ಮತ್ತು ನನ್ನ ಸ್ನೇಹಿತರು ಗರುಡಾ ಮಾಲ್‌ಗೆ ಹೋಗಿದ್ದು, ಕಾಫಿ ಕುಡಿದು ಸಂಜೆ 5.25ರ ಸುಮಾರಿಗೆ ಮಾಲ್‌ನಿಂದ ಹೊರಬಂದು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಅಲ್ಲಿ ಆಟೋ ನಿಲ್ಲಿಸಿಕೊಂಡಿದ್ದ ಚಾಲಕನೊಬ್ಬ ನನ್ನನ್ನು ಅಸಭ್ಯವಾಗಿ ನೋಡಿದಲ್ಲದೆ, ನನ್ನ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ.
ಇದನ್ನು ನಾನು ಆಕ್ಷೇಪಿಸಿದೆ. ಇದಕ್ಕೆ ಕೋಪಗೊಂಡ ಆತ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ. ಪ್ಯಾಂಟ್ ಬಿಚ್ಚಿ ಕುಣಿಯುತ್ತೇನೆ ಏನೀಗ ಎಂದು ಹೇಳಿದ. ಈತನ ವರ್ತನೆಯನ್ನು ನನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಅಲ್ಲೆ ಇದ್ದ ಸಂಚಾರ ಪೊಲೀಸ್ ಸಿಬ್ಬಂದಿಗೆ ತೋರಿಸಿದೆ. ಆಗ ಆತ ಸ್ಥಳದಿಂದ ಕಾಲ್ಕಿತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಆತನ ವರ್ತನೆ ಗಮನಿಸಿದರೆ, ಒಂದು ವೇಳೆ ಯಾರಾದರೂ ಮಹಿಳೆ ಆಟೋದಲ್ಲಿ ಪ್ರಯಾಣಿಸಿದ್ದರೆ ಆಕೆ ಮೇಲೆ ಅತ್ಯಾಚಾರ ಎಸಗಲು ಆತ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಗಾಗಿ ಇಂತಹ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ನಿಮ್ಮ ದೂರನ್ನು ಅಶೋಕನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಪೊಲೀಸರು ಆರೋಪಿಯ ಸಂಬಂಧಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.