Advertisement

ಮಲೇಷಿಯಾದಲ್ಲಿ ಕಿರುಕುಳ :ಚಿಂತಾಮಣಿ ಎಂಜಿನಿಯರ್ ಆತ್ಮಹತ್ಯೆ

10:21 AM Mar 13, 2020 | sudhir |

ಚಿಕ್ಕಬಳ್ಳಾಪುರ: ಬಡತನದಲ್ಲಿ ಹುಟ್ಟಿ ಬೆಳೆದ ವಿದ್ಯಾರ್ಥಿಯೊಬ್ಬ ಪೋಷಕರ ಆಸೆಯಂತೆ ಕಷ್ಟಪಟ್ಟು ಬಿ.ಇ. ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲ ಕಾಲ ಉತ್ತಮವಾಗಿ ಕೆಲಸ ಮಾಡಿ 26ನೇ ವರ್ಷಕ್ಕೆ ಕಂಪನಿ ಪ್ರಮೋಷನ್ ಮೇರೆಗೆ ಮಲೇಷಿಯಾಗೆ ನೇಮಕಗೊಂಡ ಸಂದರ್ಭದಲ್ಲಿ ಅಲ್ಲಿನ ಕಂಪನಿ ಸಹದ್ಯೋಗಿಗಳು ನೀಡಿದ ಮಾನಸಿಕ ಕಿರುಕುಳ ತಾಳಲಾರದೇ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಆತ್ಮಹತ್ಯೆಗೆ ಶರಣಾದ ಎಂಜಿನಿಯರ್‌ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಡಿಓಬವನಹಳ್ಳಿ ಗ್ರಾಮದ ನಿವಾಸಿ ಮನು ಬಿನ್ ಶ್ರೀರಾಮರೆಡ್ಡಿ (26) ಎಂದು ಗುರುತಿಸಲಾಗಿದೆ.

ಏನಿದು ಘಟನೆ?
ಗುಡಿಓಬವನಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿದ ಮನು ಬಿ.ಇ. ಎಂಜಿನಿಯರ್ ಪದವಿ ಮುಗಿಸಿದ ಬಳಿಕ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟೆಸಾಲ್ವ ಸೆಮಿ ಕಂಡಕ್ಟರ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಇಂಜಿನಯರ್ ಆಗಿ ಕರ್ತವ್ಯಕ್ಕೆ ಸೇರಿ ಯಶಸ್ವಿಯಾಗಿ 2018 ರ ಜನವರಿಯಲ್ಲಿ ಪ್ರೊಬೇಷನರಿ ಮುಗಿಸಿದ್ದು. ಸಂಸ್ಥೆಯಲ್ಲಿ ಯಶಸ್ವಿ ನೌಕರನಾಗಿದ್ದ ಮನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 2019ರ ಜುಲೈ 24 ರಂದು ಎಂಜನಿಯರ್ ಆಗಿ ಕರ್ತವ್ಯ ನಿರ್ವಹಿಸಲು ನೇಮಿಸಲಾಗಿತ್ತು. ಆದರೆ ಮಲೇಶಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮನುವಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ನೀಡಿ ಮಾನಸಿಕ ರೋಗಿಯಾಗಿರದಿದ್ದರೂ ಮಲೇಶಿಯಾದಲ್ಲಿ ಮಾನಸಿಕ ರೋಗಿ ಎಂದು ಆಸ್ಪತ್ರೆಗೆ ಸೇರಿಸಿ ಆಸ್ಪತ್ರೆಯಲ್ಲಿದ್ದಾಗ ಎಒನ್‌ಎ ಆರೋಗ್ಯ ವಿಮೆ ಕೂಡ ಮಾಡಿಸದೇ ಆತನಿಗೆ ಸ್ವಂತ ಲಗೇಜ್‌ನ್ನು ವಶಕ್ಕೆ ನೀಡದೆ ಕಂಪನಿ ಇತರೇ ಸಹದ್ಯೋಗಿಗಳಾದ ತಿರುಮಲೇಶ್ (44 )2) ಸವಿತ (40), ಗಣೇಶ್ ವೀರಮಣಿ (42) ಹಾಗೂ ರವಿ (36) ಮತ್ತು ಶ್ರೀಹರಿ (28) ಕಿರುಕುಳ ನೀಡಿರುವುದಾಗಿ ಮನು ತನ್ನ ಸಂಬಂಧಿಕರಿಗೆ ಆತ್ಮಹತ್ಯೆಗೂ ಮೊದಲು ಕಳುಹಿಸಿರುವ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

ಕಿರುಕುಳದ ಬಗ್ಗೆ ಡೆತ್ ನೋಟ್:
ತನಗೆ ಯಾರು ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎನ್ನುವ ಬಗ್ಗೆ ತನ್ನ ಡೈರಿಯಲ್ಲಿ ಡೆತ್ ನೊಟ್ ಬರೆದಿದ್ದಾನೆ. ಆತನಿಗೆ ಮೇಲೆ ತಿಳಿಸದವರ ಪೈಕಿ ಕೆಲವರು ಲಿಪ್ಟ್ ನಲ್ಲಿ, ಕೆಲವರು ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದಾಗ, 3ನೇ ಗಣೇಶ್ ವೀರಮಣಿ ರವರು ಮನುವಿಗೆ ಮಲೇಶಿಯಾ ಆಸ್ಪತ್ರೆಯಲ್ಲಿ ಬೈದಿದ್ದು, ಹೀಯಾಳಿಸಿದ್ದ ಕಾರಣಗಳು ಮಾನಸಿಕ ಹಿಂಸೆಗೆ ಒಳಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮನು ಡೈರಿಯಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಮಲೇಷಿಯಾಗೆ ತೆರಳಿದ್ದ ಭಾಮೈದ ಶ್ರೀನಾಥ ಜೊತೆ ಮನು ಮಾತನಾಡಿದ್ದು, ಇಲ್ಲಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸಲು ಆಸ್ಪದ ಕೊಡದೆ ತೊಂದರೆ ನೀಡಿ ವಿನಾಕಾರಣ 3 ನೇ ಆರೋಪಿ ಗಣೇಶ್ ವೀರಮಣಿ ಮನುಗೆ ಆಸ್ಪತ್ರೆಗೆ ಸೇರಿಸಿ ನಂತರ ಸಂಸ್ಥೆಯ ಕೆಲಸವನ್ನು ಬಿಡಿಸಿ ಬೆಂಗಳೂರಿನ ಕಂಪನಿಗೆ ಹೋಗುವಂತೆ ಒತ್ತಡ ಹಾಕಿದ್ದರೆಂದು ಶ್ರೀನಾಥನ ಬಳಿ ಮನು ಹೇಳಿಕೊಂಡಿದ್ದಾನೆ.

ಮಲೇಷಿಯಾದಿಂದ ವಾಪಸ್ಸು ಬಂದ ಮನು ಬೆಂಗಳೂರಿನಲ್ಲಿ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಕಪಂನಿ ಹೆಚ್‌ಆರ್ ತಿರುಮಲೇಶ್ ಅವಕಾಶ ಕೊಡದೇ ಪೋನ್‌ಕಾಲ್‌ಗಳನ್ನು ರಿಸೀವ್ ಮಾಡದೇ ಅಸಡ್ಡೆ ಮಾಡಿದ್ದರಿಂದ ಮನು ಮಾನಸಿಕ ಯಾತನೆ ಅನುಭವಿಸಿ ಕಳೆದ ಫೆ.7 ರಂದು ತನ್ನ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಶಸ್ವಿ ನೌಕರನಾಗಿದ್ದೇ ಮುಳವಾಯಿತೇ?
ಮನು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಕೆಲ ವರ್ಷಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಕ್ಕೆ ಜೊತೆಗೆ ಮಲೇಷಿಯಾ ಹೋಗುವ ಮಟ್ಟದಲ್ಲಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಪ್ರಗತಿ ತೋರಿಸಿದ್ದಕ್ಕೆ ಸಹಿಸದೇ ಆತನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದಾಗಿ ಮನು ತನ್ನ ಸಂಬಂದಿಕರ ಬಳಿ ಹೇಳಿಕೊಂಡಿದ್ದನೆಂದು ಅವರ ತಂದೆ ಶ್ರೀರಾಮರೆಡ್ಡಿ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next