Advertisement

ಮಹಿಳೆಗೆ ಕಿರುಕುಳ ಯತ್ನ: ಪೊಲೀಸ್‌ ಕಾರ್ಯಾಚರಣೆ 

02:45 AM Jul 08, 2017 | Team Udayavani |

ಬದಿಯಡ್ಕ: ಕೊನೆಯ ಬಸ್‌ ಕೂಡ ಸಿಗದೆ ಹೋದುದರಿಂದ ಪೇಟೆಯಲ್ಲಿ ಸಿಲುಕಿಕೊಂಡ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಮನೆಯೊಳಗೆ ಕೂಡಿ ಹಾಕಿ ಕಿರುಕುಳ ನೀಡಲು ನಡೆಸಿದ ಯತ್ನವನ್ನು ಪೊಲೀಸ್‌ ಹಾಗೂ ಸಂಬಂಧಿಕರ ಸಮಯೋಚಿತ ಕಾರ್ಯಾಚರಣೆಯಿಂದ ಪರಾಭವಗೊಳಿಸಲಾಗಿದೆ.

Advertisement

ಘಟನೆ ಬಗ್ಗೆ ಯಾರಿಂದಲೂ ಲಿಖೀತ ದೂರು ಲಭಿಸದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆ ಬಗ್ಗೆ ಪ್ರಚಾರ ಮಾಡಿ ಆರೋಪಕ್ಕೆಡೆಯಾದ ಯುವಕರು ಬದಿಯಡ್ಕ ಪೇಟೆಯಲ್ಲಿ ಅಲೆದಾಡುತ್ತಿರುವ ಕುರಿತು ಜನರು ತಿಳಿಸಿದ ಹಿನ್ನೆಲೆಯಲ್ಲಿ ಮಹಿಳೆಯ  ಸಂಬಂಧಿಕರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಅವರ ಹೇಳಿಕೆ ದಾಖಲಿಸಿದ ಬಳಿಕ ಕೇಸು ದಾಖಲಿಸುವ ಬಗ್ಗೆ ಆಲೋಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ರವಿವಾರ ರಾತ್ರಿ 8.20ರ ವೇಳೆ ಬದಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬಯಲಾಗಿದೆ. ಸೀತಾಂಗೋಳಿಗೆ ಸಮೀಪದ ನಿವಾಸಿ 26ರ ಹರೆಯದ ಮಹಿಳೆ ರಾತ್ರಿ ವೇಳೆ ಮನೆಯಿಂದ ಏಕಾಂಗಿಯಾಗಿ ಹೊರಗಿಳಿದಿದ್ದು 8.15ಕ್ಕೆ ಬದಿಯಡ್ಕ ಪೇಟೆಗೆ ತಲುಪಿದ್ದಳು. ಆದರೆ ಅಷ್ಟರಲ್ಲಿ ಆಕೆಯ ತವರು ಮನೆಗೆ ತೆರಳುವ ಕೊನೆಯ ಬಸ್‌ ಕೂಡ ಹೋಗಿತ್ತು. ಅನಂತರ ಮಹಿಳೆ ಓರ್ವ ಆಟೋರಿಕ್ಷಾ ಚಾಲಕನನ್ನು ಭೇಟಿಯಾಗಿ ತನ್ನನ್ನು ಮನೆಗೆ ತಲುಪಿಸುವಂತೆ ವಿನಂತಿಸಿದ್ದಳು. ಕೂಡಲೇ ಚಾಲಕ ತನ್ನ ಸ್ನೇಹಿತನನ್ನು ಕರೆದು ಮಹಿಳೆಯನ್ನು ಆಟೋದಲ್ಲಿ ಹತ್ತಿಸಿ ಬದಿಯಡ್ಕದಿಂದ ಪ್ರಯಾಣ ಆರಂಭಿಸಿದನು. ಮೂಕಂಪಾರೆಗೆ ತಲುಪಿದಾಗ ಜನವಾಸವಿಲ್ಲದ ಮನೆಯೊಂದಕ್ಕೆ ತಲುಪಿಸಿ ಮಹಿಳೆಯನ್ನು ಅಲ್ಲಿ ಕೂಡಿ ಹಾಕಲಾಯಿತು. ಯುವತಿಯ ಕೈಯಲ್ಲಿದ್ದ ಮೊಬೈಲ್‌ ಫೋನ್‌ ಪಡೆದು ಸ್ವಿಚ್‌ಆಫ್‌ ಮಾಡಿದರು. ಅನಂತರ ಯುವಕರು ಆಟೋದೊಂದಿಗೆ ಬದಿಯಡ್ಕಕ್ಕೆ ಮರಳಿದರು. ಈ ಮಧ್ಯೆ ಮಹಿಳೆಯ ಪತಿಯ ಸಂಬಂಧಿಕರು ಆಕೆಯನ್ನು ಹುಡುಕಿ ಬದಿಯಡ್ಕಕ್ಕೆ ತಲುಪಿದ್ದು, ಮಹಿಳೆ ತವರು ಮನೆಗೆ ತಲುಪಿಲ್ಲವೆಂದು ತಿಳಿದೊಡನೆ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಧ್ಯೆ ಮಹಿಳೆಯ ಮೊಬೈಲ್‌ ಫೋನ್‌ ಆನ್‌ ಆಗಿದ್ದು  ಪೊಲೀಸರು ಸೈಬರ್‌ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಮಹಿಳೆ ಮೂಕಂಪಾರೆ ಪರಿಸರದಲ್ಲಿರುವುದಾಗಿ ತಿಳಿದು ಬಂತು. 

ಪೊಲೀಸರು ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಂತೆ ಘಟನೆ ಅರಿತ ಯುವಕರು ಮೂಕಂಪಾರೆಗೆ ತಲುಪಿ ಮಹಿಳೆಯನ್ನು ಪುನಃ ಆಟೋಕ್ಷಾದಲ್ಲಿ ಹತ್ತಿಸಿ ರಾತ್ರಿ 10.30ಕ್ಕೆ ಬೀಂಜತ್ತಡ್ಕಕ್ಕೆ ತಲುಪಿಸಿ ಉಪೇಕ್ಷಿಸಿ ಪರಾರಿಯಾದರು. ಇದೇ ವೇಳೆ ಸಂಬಂಧಿಕರು ಹಾಗೂ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿದರು. ನಡೆದ ಘಟನೆಯನ್ನು ಮಹಿಳೆ ತಿಳಿಸಿದ್ದರೂ ಲಿಖೀತವಾಗಿ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಲ್ಲ. ಬಳಿಕ ಮಹಿಳೆಯನ್ನು ಸಂಬಂಧಿಕರ ಜತೆ ಕಳುಹಿಸಲಾಯಿತು. 

ಅನಂತರ ಘಟನೆ ನಾಡಿನಾದ್ಯಂತ ಹರಡತೊಡಗಿತು. ಈ ಹಿಂದೆ ಅಬಕಾರಿ ಪ್ರಕರಣದಲ್ಲಿ ಆರೋಪಿಯಾದ ಓರ್ವ ಯುವಕ ಹಾಗೂ ಸ್ನೇಹಿತ ಸೇರಿ ಮಹಿಳೆಯನ್ನು ದಿಗ್ಬಂಧನದಲ್ಲಿರಿಸಿರುವುದಾಗಿಯೂ ಪೊಲೀಸರು ಹಾಗೂ ಸಂಬಂಧಿಕರು ಸಕಾಲದಲ್ಲಿ ಕಾರ್ಯಾಚರಿಸದಿದ್ದಲ್ಲಿ ಕಿರುಕುಳಕ್ಕೆ ಸಾಧ್ಯತೆಯಿತ್ತೆಂದು ನಾಗರಿಕರು ಅಭಿಪ್ರಾಯ ಪಡುತ್ತಿದ್ದಾರೆ. ಘಟನೆ ನಾಡಿನಾದ್ಯಂತ ಚರ್ಚೆಯಾಗುತ್ತಿದ್ದಂತೆ ಪೊಲೀಸರು ಸ್ವಯಂ ಕೇಸು ದಾಖಲಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next