ಹರಪನಹಳ್ಳಿ: ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಸುಗ್ಗಿ ಎಲ್ಲೆಡೆ ಆರಂಭವಾಗಿದ್ದು, ಹರಪನಹಳ್ಳಿ ಮಾರುಕಟ್ಟೆಗೆ ಇದೀಗ ಮಾವಿನ ಹಣ್ಣು ಮಾರಾಟಕ್ಕೆ ಆಗಮಿಸುತ್ತಿವೆ. ತಾಲೂಕಿನ ವಿವಿಧೆಡೆ ಬೆಳೆದಿರುವ ಬೇಲಿಸಾ, ಮಲಗಾವ್, ಮಲ್ಲಿಕಾ, ತೋತಾಪುರಿ, ರಸಪೂರಿ ಮಾವು ಜೊತೆಗೆ ಇತರೆ ವಿವಿಧ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಈಗ ಮಾರುಕಟ್ಟೆಯಲ್ಲಿರುವ ಮಲಗಾವ್-50, ಮಲ್ಲಿಕಾ-50, ತೋತಾಪುರಿ-40, ರಸಪೂರಿ 50 ರಿಂದ 60 ರೂ. ಬೆಲೆಗೆ ಮಾರಾಟ ಅಗುತ್ತಿವೆ. ಹಣ್ಣಿನ ಮಾರುಕಟ್ಟೆ, ಮಾರಾಟ ಸ್ಥಳವಾದ ಚಿತ್ರಮಂದಿರದ ಆಸುಪಾಸು, ಹೊಸ ಬಸ್ ನಿಲ್ದಾಣ ಬಳಿ ಹೋದರೆ ಮಾವಿನ ವಾಸನೆ ಒಮ್ಮೆ ಕತ್ತು ತಿರುಗಿಸುವಂತೆ ಮಾಡುತ್ತಿವೆ. ಬಿಸಿಲಿನ ಝಳವಿದ್ದರೂ ಆತಂಕದಲ್ಲಿಯೇ ಒಮ್ಮೆ ರುಚಿ ನೋಡುವ ಆಸೆಯಿಂದ ಖರೀದಿಯೂ ನಡೆಯುತ್ತಿದೆ.
ಮಾವು ಬೆಳೆದ ರೈತರು ಬಹುತೇಕ ಸ್ಥಳೀಯ ಹಣ್ಣಿನ ವ್ಯಾಪಾರಿಗಳನ್ನು ನಂಬಿಕೊಂಡಿರುವುದರಿಂದ ಕೆಲವು ಸಲ ಮಾರುಕಟ್ಟೆ ದರದಲ್ಲಿ ವ್ಯತ್ಯಾಸವಾಗಿ ಮಾವು ಬೆಳೆಗಾರರು ನಷ್ಟ ಅನುಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ಉತ್ತಮ ಬೆಲೆ ಪಡೆಯಲು ತಾವೇ ಹೊಲ ಮತ್ತು ರಸ್ತೆ ಬಳಿ ಮಾರಾಟಕ್ಕಿಳಿದಿರುವುದು ಕಂಡು ಬರುತ್ತಿದೆ. ಕಳೆದ ಬಾರಿ ಈ ಹೊತ್ತಿನಲ್ಲಿ ಮಾವಿನ ಬೆಲೆ ಇನ್ನೂ ಹೆಚ್ಚಿತ್ತು, ಈ ಬಾರಿ ಸ್ವಲ್ಪ ಕಡಿಮೆಯಿದೆ. ಇನ್ನೂ ಮಾವಿನ ವ್ಯಾಪಾರ ಕುದುರಿಲ್ಲ. ಜತೆಗೆ ಈ ಬಾರಿ ಹಣ್ಣು ಕೂಡ ಕಡಿಮೆಯಿದೆ. ಕಳೆದ ವರ್ಷ ಈ ಹೊತ್ತಿಗೆ ಸಾಕಷ್ಟು ವ್ಯಾಪಾರ ಮಾಡಿದ್ದೆವು ಎನ್ನುತ್ತಾರೆ ಮಾವು ವ್ಯಾಪಾರಿ ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿಗೇರಿ ದುರುಗಮ್ಮ ಮತ್ತು ಊರಮ್ಮ.
ತಾಲೂಕಿನ ಅನಂತನಹಳ್ಳಿ ಗ್ರಾಮದ ರೈತ ರವಿಚಂದ್ರ ಎಂಬುವವರ ಜಮೀನಿನಲ್ಲೇ ಬೆಳೆದಿರುವ ಬೇಲಿಸಾ ತಳಿ ಮಾವಿನ ಹಣ್ಣು ಕೆಜಿಗೆ 90 ರಿಂದ 100 ರೂ.ನಂತೆ ಮಾರಾಟವಾಗುತ್ತಿದೆ. ತೋಟದಲ್ಲಿ ಸಮಗ್ರ ಬೆಳೆ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದು, ಇಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ 140 ಗಿಡಗಳಿವೆ. ಮಾವು ಉಷ್ಣ ವಲಯದ ಬೆಳೆಯಾಗಿರುವುದರಿಂದ ಕೆಂಪು ಗೋಡು ಮಣ್ಣಿನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ನೀರಾವರಿ ಪ್ರದೇಶದಲ್ಲಿಯೂ ಹಣ್ಣು ಬೆಳೆಯಲಾಗಿದ್ದು, ಮಳೆ ಕಡಿಮೆಯಾಗಿರುವುದರಿಂದ ಹಣ್ಣುಗಳ ಇಳುವರಿ ಕಡಿಮೆಯಾಗಿದೆ. ನಾವೇ ಹೊಲದ ರಸ್ತೆ ಬದಿ ಮಾರಾಟ ಮಾಡುತ್ತಿದ್ದೇವೆ ಎಂದು ರೈತ ರವಿಚಂದ್ರ ಹೇಳುತ್ತಾರೆ.
ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 500 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಹಾಕಲಾಗಿದೆ. ಕಂಚಿಕೇರಿ, ಕ್ಯಾರಕಟ್ಟೆ, ಹಳ್ಳಿಕೆರೆ, ತೆಲಿಗಿ ಕೆ.ಕಲ್ಲಹಳ್ಳಿ ಸೇರಿದಂತೆ ವಿವಿಧೆಡೆ ಫಸಲು ಚೆನ್ನಾಗಿ ಬಂದಿದೆ. ಪ್ರತಿ ಒಂದು ಹೆಕ್ಟೇರ್ ಪ್ರದೇಶದಿಂದ 5ರಿಂದ 8 ಟನ್ ಹಣ್ಣು ನಿರೀಕ್ಷೆ ಮಾಡಲಾಗಿದೆ. ಇಡೀ ತಾಲೂಕಿನ ಒಟ್ಟು 2500 ರಿಂದ 3000 ಸಾವಿರ ಟನ್ ಹಣ್ಣು ಸಿಗುವ ನಿರೀಕ್ಷೆಯಿದೆ. ಈಚೆಗೆ ಬಂದ ಗಾಳೆಯಿಂದ ಸ್ವಲ್ಪ ಹಾನಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಸಲು ಬಂದಿದೆ.
ಟಿ.ಆರ್. ಶಶಿಕಲಾ,
ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ.
ಎಸ್.ಎನ್.ಕುಮಾರ್ ಪುಣಬಗಟ್ಟಿ