Advertisement

ಕಡ್ಡಾಯ ಮನೆ ನಿರ್ಮಿಸಿ ಕೊಡಿ

12:07 PM Aug 23, 2019 | Team Udayavani |

ಹರಪನಹಳ್ಳಿ: ಬಸವ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಕಡ್ಡಾಯವಾಗಿ ಗ್ರಾಮ ಸಭೆ ಮೂಲಕವೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಸಂಸದ ವೈ. ದೇವೇಂದ್ರಪ್ಪ ತಾಪಂ ಇಒ ಅವರಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ಪ್ರವಾಸಿ ಮುಂದಿರದಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಅವರು, ಸರ್ಕಾರದಿಂದ ಅನೇಕ ಸೌಲಭ್ಯಗಳು ಪಂಚಾಯ್ತಿ ವ್ಯಾಪ್ತಿಗೆ ನೇರವಾಗಿ ಬರುತ್ತಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶವಿದೆ. ಪಂಚಾಯ್ತಿ ವ್ಯಾಪ್ತಿಯ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಖಾತ್ರಿ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಿಬೇಕು ಮತ್ತು ಗ್ರಾಮ ಸಭೆಗೆ ಹಾಜರಿರಬೇಕು. ಗೈರು ಹಾಜರಾಗುವ ಅಕಾರಿಗಳಿಗೆ ನೋಟಿಸ್‌ ನೀಡುವಂತೆ ಸೂಚನೆ ನೀಡಿದರು.

ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ಬೇರ್ಪಟ್ಟ ನಂತರ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ಆರೋಪದಡಿಯಲ್ಲಿ 9 ಗ್ರಾಪಂ ಕಾಮಗಾರಿಗಳ ತನಿಖೆ ನಡೆದಿದೆ. ವೈಯಕ್ತಿಕ ಕಾಮಗಾರಿ ಹೊರತುಪಡಿಸಿ ಯಾವುದೇ ಕಾಮಗಾರಿಗಳ ಹಣ ಪಾವತಿಯಾಗುತ್ತಿಲ್ಲ. ಮುಂದೇನು ಎಂದು ಇಒ ಅವರನ್ನು ಪಶ್ನಿಸಿದಾಗ ದಾವಣಗೆರೆ ಜಿಲ್ಲೆಯಲ್ಲಿದ್ದಾಗ ಮಾಡಿರುವ ಯಾವುದೇ ಕಾಮಗಾರಿಗೆ ಹಣ ಪಾವತಿಸಬೇಡಿ ಎಂದು ಸಿಇಒ ನಿರ್ದೇಶನ ನೀಡಿದ್ದಾರೆ. ಮಾರ್ಚ್‌ ತಿಂಗಳ ಒಳಗೆ ಆಗಿರುವ ಕಾಮಗಾರಿಗಳಿಗೆ ಪೇಮೆಂಟ್ ಆಗಿದೆ ಇಒ ಉತ್ತರಿಸಿದರು. ಕೂಲಿಕಾರರು ನಮ್ಮ ಅಕೌಂಟ್‌ಗೆ ಹಣ ಬಂದಿಲ್ಲವೆಂದು ಒತ್ತಾಯಿಸುತ್ತಿದ್ದು ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಸಂಸದರು ಸಲಹೆ ನೀಡಿದರು.

ತಾಲೂಕಿನಲ್ಲಿ ನೆರೆ ಹಾವಳಿಯಿಂದ ಒಟ್ಟು 388 ಮನೆಗಳು ಜಕಂ ಆಗಿವೆ. ಅದರಲ್ಲಿ 1 ಮನೆ ಸಂಪೂರ್ಣ ಹಾಳಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದು ತಹಶೀಲ್ದಾರ್‌ ರವಿ ತಿಳಿಸಿದಾಗ ಕೇವಲ 1 ಮನೆ ಅಲ್ಲ ಹಲವಾರು ಮನೆಗಳು ಸಂಪೂರ್ಣವಾಗಿ ಬಿದ್ದಿರುವ ಮಾಹಿತಿಯಿದೆ. ಸರಿಯಾಗಿ ಸಮೀಕ್ಷೆ ಮಾಡಬೇಕು. ನೆರೆಸಂತ್ರಸ್ತರು ಪರಿಹಾರದಿಂದ ವಂಚಿತರಾಗಬಾರದು. ಸರಿಯಾಗಿ ಕರ್ತವ್ಯ ನಿರ್ವಹಿಸಿ, ನೊಂದವರಿಗೆ ಮನೆ ನಿರ್ಮಾಣ ಮಾಡಲು ಪಟ್ಟಿ ತಯಾರಿಸಿ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

ಒಟ್ಟು 21 ಟನ್‌ ಒಣ ಮೇವು ಖರೀದಿಗೆ ಅನುಮೋದನೆ ಸಿಕ್ಕಿದೆ. ಈಗಾಗಲೇ 4-5 ಟನ್‌ ಮೇವು ಖರೀದಿಸಲಾಗಿದೆ. ನಜೀರ್‌ ನಗರದಲ್ಲಿ ಗೋ-ಶಾಲೆ ತೆರೆಯಲು ಉದ್ದೇಶಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದಾಗ ಸದ್ಯದ ಪರಿಸ್ಥಿತಿಯಲ್ಲಿ ಮೇವಿನ ಸಮಸ್ಯೆಯಿಲ್ಲ. ಮಳೆಯಿಂದ ಹುಲ್ಲು ಹಸಿರಾಗಿದೆ. ತ್ವರಿತವಾಗಿ ಮನೆ ಕಟ್ಟಿಕೊಳ್ಳಲು ನೆರವು ನೀಡಿ ಎಂದರು.

Advertisement

ಸಿಂಗ್ರಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ 8 ಬೋರ್‌ವೆಲ್ ಬಂದ್‌ ಆಗಿವೆ. ಸದ್ಯ ಎರಡು ಬೋರ್‌ವೆಲ್ ಕೊರೆಸಿ ಕೊಡಿ ಎಂದು ಗ್ರಾಮಸ್ಥರು ಸಂಸದರಲ್ಲಿ ಮನವಿ ಮಾಡಿದಾಗ ಆದಷ್ಟು ಗ್ರಾಮದಲ್ಲಿಯೇ ಪಾಯಿಂಟ್ ಮಾಡಿ ಕೊಳವೆಬಾವಿ ಕೊರೆಸಬೇಕು. ಗ್ರಾಮದಿಂದ ದೂರದಲ್ಲಿ ಕೊರೆದರೆ ಅನಾವಶ್ಯಕವಾಗಿ ಪೈಪ್‌ ಅಳವಡಿಕೆ ಮಾಡಬೇಕು. ಗ್ರಾಮದಲ್ಲಿ ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿ ಗ್ರಾಮದಲ್ಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಜರುಗಿಸಿ ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಜಯ್ಯಪ್ಪ ಅವರಿಗೆ ಸೂಚಿಸಿದರು.

ನಾನು ಬಿಸಿಎಂ ಹಾಸ್ಟೆಲ್ಗೆ ದಿಢೀರ್‌ ಭೇಟಿ ನೀಡಿ ಊಟ ಮಾಡುತ್ತೀನಿ. ಗುಣಮಟ್ಟದ ಊಟ ಮಕ್ಕಳಿಗೆ ಕೊಡಬೇಕು ಎಂದು ಬಿಸಿಎಂ ಅಧಿಕಾರಿ ಭೀಮನಾಯ್ಕ ಅವರಿಗೆ ಸೂಚಿಸಿದ ಸಂಸದರು ಬಿಸಿಎಂ ಹಾಸ್ಟೆಲ್ಗೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು ಎಂದರು. ಹೊಸಪೇಟೆ ಆರ್‌ಟಿಒ ಅವರಿಗೆ ಹರಪನಹಳ್ಳಿ ಪಟ್ಟಣದಲ್ಲಿ ವಾಹನಗಳ ನೋಂದಣಿಗೆ ಕ್ಯಾಂಪ್‌ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಸಿಂಗ್ರಿಹಳ್ಳಿ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಗೆ ಗ್ರಾಮಸ್ಥರು ಮತ್ತು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್‌ ಉಸ್ತುವಾರಿಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ(ತೃತೀಯ ಲಿಂಗಿಗಳು) ನೀಡಬೇಕೆಂದು ಸಂಸದರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್‌ ರವಿ, ತಾಪಂ ಇಒ ಮಮತಾ ಹೊಸಗೌಡರ್‌, ಲೋಕೋಪಯೋಗಿ ಇಲಾಖೆ ಎಇಇ ಲಿಂಗಪ್ಪ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಜಯ್ಯಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.