Advertisement

ಬಿಇಒ ಜೋಳಿಗೆ; ಸರಕಾರಿ ಶಾಲೆಗೆ ಹೋಳಿಗೆ!

11:34 AM Feb 01, 2020 | Naveen |

ಹರಪನಹಳ್ಳಿ: ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿರುವ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಯೊಬ್ಬರು ಶಾಲೆ ಉಳಿಸಲು ಜೋಳಿಗೆ ಹಿಡಿದು ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.

Advertisement

ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿ ಕಾರಿ ಎಸ್‌.ಎಂ. ವೀರಭದ್ರಯ್ಯ ಅವರು ವಾರದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಪೋಷಕರು ಮತ್ತು ಸಾರ್ವಜನಿಕರ ಎದುರು ತಮ್ಮ ಜೋಳಿಗೆ ಹಿಡಿಯುತ್ತಿದ್ದಾರೆ. ಹೀಗೆ ಊರಿನಲ್ಲಿ ಸಂಗ್ರವಾದ ಹಣವನ್ನು ಶಾಲೆಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ. ಈಗಾಗಲೇ ತಾಲೂಕಿನ ಅಳಗಂಚಿಗೇರಿ, ರಾಗಿಮಸಲವಾಡ, ಪಟ್ಟಣದ ಕುರುಬಗೇರಿ, ಕಡಬಗೆರೆ ಗ್ರಾಮಗಳ ಶಾಲೆ ಅಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸಲಾಗಿದೆ. ಬಿಇಒ ಅವರ ಸರಕಾರಿ ಶಾಲೆ ಉಳಿಸುವ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಎಲ್ಲರೊಂದಿಗೆ ಸೇರಿ ಮನೆ-ಮನೆ ಭೇಟಿ: ಪ್ರತಿಯೊಂದು ಗ್ರಾಮದಲ್ಲಿಯೂ ಕನಿಷ್ಠ ಎರಡು ಲಕ್ಷಕ್ಕೂ ಅಧಿ ಕ ಹಣ ಸಂಗ್ರಹವಾಗುತ್ತಿದೆ. ಹಣವಲ್ಲದೇ ಶಾಲೆಗಳಿಗೆ ಗಾಡ್ರೇಜ್‌, ಚೇರ್‌ ಗಳನ್ನು ಸಹ ಜನ ದಾನವಾಗಿ ನೀಡುತ್ತಿದ್ದಾರೆ. ಆಯ್ದ ಗ್ರಾಮಗಳಲ್ಲಿ ಶಾಲೆ ಸಮಯ ಮುಗಿದ
ನಂತರ ಸಂಜೆ ತಾಪಂ, ಗ್ರಾಪಂ ಹಾಗೂ ಶಾಲಾ ಅಭಿವೃದ್ಧಿ ಸದಸ್ಯರು, ಪೋಷಕರು, ಹಳೇ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳೊಂದಿಗೆ
ಬಿಇಒ ಜೋಳಿಗೆ ಹಿಡಿದು ಪ್ರತಿ ಮನೆ ಮನೆಗೂ ತೆರಳಿ ಜೋಳಿಗೆಗೆ ಹಣ ಹಾಕಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ 9-10 ಗಂಟೆವರೆಗೂ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ.
ಶಾಲಾಭಿವೃದ್ಧಿಗೆ ಬಳಕೆ: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಶಿಕ್ಷಕರು ಮನೆ ಮನೆಗೆ ಭೇಟಿ ನೀಡುತ್ತಿದ್ದರು.

ಇನ್ಮುಂದೆ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಪೋಷಕರು ಸರ್ಕಾರಿ ಶಾಲೆಗೆ ಬರುವಂತಾಗಬೇಕು ಎಂಬ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನದಲ್ಲಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಪ್ರತಿಯೊಂದು ಗ್ರಾಮದಲ್ಲಿಯೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಸಂಗ್ರಹವಾದ
ಹಣದಿಂದ ಶೈಕ್ಷಣಿಕ ಕಾರ್ಯ ಚಟುವಟಿಕೆಗಾಗಿ ಬೋಧನೋಪಕರಣ, ವಾಚನಾಲಯ,
ವಾರ್ಷಿಕೋತ್ಸವ ಕಾರ್ಯಕ್ರಮ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಬಿಇಒ ಎಸ್‌.ಎಂ.ವೀರಭದ್ರಯ್ಯ.

ಜೋಳಿಗೆಗೆ ಬಂದ ಹಣವನ್ನು ನಾವು ಎಣಿಸಲ್ಲ. ಸಂಪೂರ್ಣ ಶಾಲೆಗೆ ವಹಿಸುತ್ತಿದ್ದು, ಅವರೇ ಅದರ ಎಣಿಕೆ ಕಾರ್ಯ ಮಾಡಿ ತಿಳಿಸುತ್ತಾರೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರವೂ ಇದೆ. ಜೋಳಿಗೆ ಕಾರ್ಯಕ್ರಮದಿಂದ ಪ್ರೇರಿತರಾಗಿರುವ ಶಾಲೆಗಳ ಶಿಕ್ಷಕರು ನಮ್ಮ ಗ್ರಾಮಕ್ಕೂ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ ಎನ್ನುತ್ತಾರೆ ಬಿಇಒ. ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರು ಕೂಡ ಕೈಜೋಡಿಸುತ್ತಿರುವುದು ಶ್ಲಾಘನೀಯ.

Advertisement

ಬಿಇಒ ಅವರ ಜೋಳಿಗೆ ಕಾರ್ಯದಲ್ಲಿ ಒಂದೇ ದಿನದಲ್ಲಿ 2.30ಲಕ್ಷರೂ ಸಂಗ್ರಹವಾಗಿದೆ. 2 ಗಾಡ್ರೇಜ್‌ ಬಂದಿವೆ. ಹಳೇ ವಿದ್ಯಾರ್ಥಿಗಳ ಸಂಘದಿಂದ 1 ಕೊಠಡಿ ಸ್ಮಾರ್ಟ್‌ ಕ್ಲಾಸ್‌ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ನಾವೇ ಜನರ ಬಳಿ ಹೋಗಿದ್ದರೆ ಸ್ಪಂದನೆ ಸಿಗುತ್ತಿರಲಿಲ್ಲ. ಆದರೆ ಬಿಇಒ ಬಂದಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಯ್ತು. ಇದರಿಂದ ಸಮುದಾಯ ಪಾಲ್ಗೊಳ್ಳುವಿಕೆಯಿಂದ ಅವರಿಗೂ ಹೆಚ್ಚು ಜವಾಬ್ಟಾರಿ ಬಂದಿದೆ. ಸಂಗ್ರಹದ ಹಣದಿಂದ ಕಲಿಕೋಪಕರಣ ಹಾಗೂ ಕ್ರೀಡಾ ಸಾಮಗ್ರಿ ಖರೀದಿಸಲಾಗುವುದು. ಪಾಂಡಪ್ಪ ಆರ್‌.ಬಡಿಗೇರ್‌,
ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಬಗೆರೆ

ಗ್ರಾಮಾಂತರ ಪ್ರದೇಶದ ಜನರು ಕೆಲಸ ಮುಗಿಸಿಕೊಂಡು ಸಂಜೆ
ವೇಳೆ ಮನೆಯಲ್ಲಿರುವುದರಿಂದ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ.
ನಾನು ಹೊಸಪೇಟೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದಾಗ ಪುಸ್ತಕ ಜೋಳಿಗೆ, ಬಿಲ್ಡಿಂಗ್‌ ಅಭಿವೃದ್ಧಿಗಾಗಿ ಜೋಳಿಗೆ ಹಾಕಿದ್ದೇನೆ. ಸದ್ಯ ತಾಲೂಕಿನ 10 ಶಾಲೆಗಳ ಅಭಿವೃದ್ಧಿಗಾಗಿ ಜೋಳಿಗೆ ಹಾಕಲು ನಿರ್ಧರಿಸಿದ್ದು, ಜನರ ಪ್ರತಿಕ್ರಿಯೆ ಗಮನಿಸಿ ಈ ಕಾರ್ಯ ಮುಂದುವರಿಸಲಾಗುವುದು. ಈ ದೇಣಿಗೆಯಿಂದ ಸ್ಮಾರ್ಟ್‌ ಕ್ಲಾಸ್‌ ಮಾಡಲು ಸಹಾಯವಾಗಲಿದೆ. ಸಮುದಾಯ ಭಾಗವಹಿಸುವುದು ಜೋಳಿಗೆ ಕಾರ್ಯಕ್ರಮದ ಮುಖ್ಯ
ಉದ್ದೇಶವಾಗಿದೆ.
ಎಸ್‌.ಎಂ.ವೀರಭದ್ರಯ್ಯ, ಬಿಇಒ

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next