Advertisement

ಸವಿ ಮಾತಿನ ಸಿಹಿ ಬಾಳ್ವೆ ನಮ್ಮದಾಗಲಿ

12:29 AM Jun 14, 2022 | Team Udayavani |

ಮಾನವನ ಬದುಕಿನಲ್ಲಿ ವರ್ತನೆ, ಮಾತುಗಳೇ ಆತನ ಯೋಗ್ಯತೆಯನ್ನು ತಿಳಿಸುತ್ತವೆ. ಮೃದುತ್ವ, ವಿನಯಶೀಲತೆ, ಸಭ್ಯತೆ ಶ್ರೇಷ್ಠ ವ್ಯಕ್ತಿಗಳ ಲಕ್ಷಣವಾಗಿರುತ್ತದೆ. ಉನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ಆಡುವ ಮಾತು ಕಟುವಾಗಿದ್ದರೆ ಸಹವರ್ತಿಗಳ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಕಠೊರ ನುಡಿಯು ನಮ್ಮ ಮೇಲೆ ಇತರರು ಅಗೌರವ ತಾಳುವಂತೆ ಮಾಡುತ್ತದೆ.

Advertisement

ಒಮ್ಮೆ ಒಬ್ಬ ರಾಜ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಜಿಂಕೆಯೊಂದನ್ನು ಬೆನ್ನಟ್ಟಿ ಬಹಳ ದೂರ ಹೋದಾಗ ತನ್ನ ಪರಿವಾರ, ಸೈನಿಕರಿಂದ ಬೇರ್ಪಟ್ಟ. ಎಲ್ಲರೂ ರಾಜನನ್ನು ಹುಡುಕತೊಡಗಿದರು. ಆ ಕಾಡಿನ ನಡುವೆ ಗುಡಿಸಲಲ್ಲಿ ಒಬ್ಬ ಕುರುಡ ಸಾಧು ಕುಳಿತಿದ್ದ. ಓರ್ವ ಸೈನಿಕ ಆ ಸಾಧುವನ್ನು ನೋಡಿ, “ಲೇ ಜೋಗಿ, ನಮ್ಮ ರಾಜರನ್ನು ನೋಡಿದೆಯೇನೊ?’ ಎಂದು ಕೇಳಿದ. ಆಗ ಸಾಧು “ಅಣ್ಣಾ ನಾನು ಕುರುಡ. ಹೇಗೆ ನೋಡಲಿ?’ ಎಂದ. ಆಗ ಸೈನಿಕ ಗೊಣಗುತ್ತ ಅತ್ತ ಕಡೆ ಹೋದ. ಕೆಲವು ಕ್ಷಣಗಳ ಅನಂತರ ಸೇನಾನಾಯಕ ಬಂದ. “ತಪಸ್ವಿಗಳೇ ಇತ್ತ ಕಡೆ ನಮ್ಮ ಮಹಾರಾಜರು ಬಂದರೇ? ಎಂದು ಕೇಳಿದ. ಇಲ್ಲಯ್ಯ, ಮಹಾರಾಜರು ಬಂದಿಲ್ಲ ಎಂದು ಸಾಧು ಹೇಳಿದ.

ಅನಂತರ ಸೇನಾಧಿಪತಿ ಸಾಧುವಿನ ಬಳಿ ಬಂದು, “ಸಾಧು ಮಹಾರಾಜರೇ, ಮಹಾರಾಜರು ಏನಾದರೂ ಇತ್ತ ಕಡೆ ಬಂದಿರುವರೇ?’ ಕೇಳಿದ. ಸಾಧು ಆತನಿಗೆ ಸೂಕ್ತ ಉತ್ತರ ನೀಡಿದ. ಸ್ವಲ್ಪ ಹೊತ್ತಿನ ಅನಂತರ ಖುದ್ದಾಗಿ ಮಂತ್ರಿಯೇ ಅಲ್ಲಿಗೆ ಬಂದ. “ಮಹಾಸ್ವಾಮಿ, ನಾವು ಬೇಟೆಗೆಂದು ಬಂದೆವು. ಮಹಾರಾಜರು ತಪ್ಪಿಸಿಕೊಂಡರು. ತಾವೇನಾದರೂ ಸುಳಿವು ನೀಡುವಿರಾ?’ ಎಂದ. ಸಾಧು ಆತನಿಗೂ ಸರಿಯಾದ ಉತ್ತರ ನೀಡಿದ.ಸ್ವಲ್ಪ ಹೊತ್ತಿನ ಬಳಿಕ ಮಹಾರಾಜನೇ ಕಾಡೆಲ್ಲ ಅಲೆದು ಸಾಧುವಿನ ಬಳಿ ಬಂದ. ಸಾಧುವಿಗೆ ನಮಸ್ಕರಿಸಿದ. “ಭಗವಾನ್‌ ನನಗೆ ಆಶೀರ್ವದಿಸಿ. ಅಲ್ಲದೆ ನಾನು ತುಂಬಾ ಬಾಯಾರಿದ್ದೇನೆ. ಸ್ವಲ್ಪ ನೀರು ಕೊಡುವಿರಾ?’ ಎಂದು ಕೇಳಿದನು. ಆಗ ಸಾಧು, “ರಾಜನೇ ನಿನಗೆ ಸ್ವಾಗತ’ ಎಂದು ಹಣ್ಣು-ಹಂಪಲು, ನೀರನ್ನು ಕೊಟ್ಟು ಉಪಚರಿಸಿದನು. ಆಗ ರಾಜನು “ಗುರುಗಳೇ, ನಾನು ರಾಜನೆಂದು ನಿಮಗೆ ಹೇಗೆ ತಿಳಿಯಿತು? ನನ್ನನ್ನು ಹುಡುಕುತ್ತಾ ಯಾರಾದರೂ ಬಂದಿರುವರೆ?’ ಎಂದು ಪ್ರಶ್ನಿಸಿದನು. ಆಗ ಸಾಧು ಓರ್ವ ಸೈನಿಕ, ಅನಂತರ ಅವರ ನಾಯಕ, ಸೇನಾಧಿಪತಿ, ಕೊನೆಯಲ್ಲಿ ಮಂತ್ರಿ ಕೂಡ ಬಂದಿದ್ದ ಎಂದನು. ರಾಜನಿಗೆ ಅಚ್ಚರಿಯ ಜತೆಗೆ ಕುರುಡರಾದರೂ ಎಲ್ಲರ ಅಧಿಕಾರ, ಪದವಿ ಈ ಸಾಧುವಿಗೆ ಹೇಗೆ ತಿಳಿಯಿತು? ಎಂದು ಕುತೂಹಲ ಮೂಡಿತು. ತನ್ನ ಕುತೂಹಲವನ್ನು ರಾಜ ಸಾಧುವಿಗೆ ಪ್ರಶ್ನಿಸಿದ.

ರಾಜನ ಪ್ರಶ್ನೆಗೆ ಸಾಧು ಹಸನ್ಮುಖೀಯಾಗಿ ಉತ್ತರಿಸುತ್ತಾ ಹೇಳಿದ, ಅವರ ಮಾತಿನ ಶೈಲಿಯೇ ಅವರ ಅಧಿಕಾರ, ಸ್ಥಾನಮಾನ ತಿಳಿಸಿತು. ಅವರ ಮಾತಿನ ಆಂತರಿಕ ಧ್ವನಿಯೇ ಎಲ್ಲವನ್ನೂ ತಿಳಿಸಿತು. ನೀನು ಭಗವಾನ್‌ ಎಂದು ಗೌರವದಿಂದ ಕರೆದಾಗಲೇ ಇದು ಮಹಾರಾಜರದೇ ಧ್ವನಿ ಎಂದು ಗುರುತಿಸಿದೆ ಎಂದನು. ರಾಜನಿಗೆ ಸಾಧುವಿನ ಮಾತಿನ ತಾತ್ಪರ್ಯ ತಿಳಿಯಿತು.
“ತುಂಬಿದ ಕೊಡ ತುಳುಕುವುದಿಲ್ಲ’ ಎಂಬಂತೆ ನಾವು ಹೆಚ್ಚು ಹೆಚ್ಚು ವಿದ್ಯಾಭ್ಯಾಸ ಮಾಡಿದಂತೆಲ್ಲ, ಉನ್ನತ ಪದವಿಗೆ ಹೋದಂತೆಲ್ಲ ನಮ್ಮ ಸ್ವಭಾವವು ತುಂಬಿದ ಕೊಡದಂತೆ ಇರಬೇಕು. ಕ್ಷುಲ್ಲಕ ಮಾತು, ದುರ್ಗುಣಗಳು, ಅಹಂಕಾರ ಇವುಗಳಿಂದ ದೂರವಿದ್ದಷ್ಟು ನಮ್ಮ ಘನತೆ ಹೆಚ್ಚುತ್ತದೆ. ನಾವಾಡುವ ಮಾತಿನಿಂದಲೇ ನಗು ಮೂಡುತ್ತದೆ, ಮಾತಿನಿಂದಲೇ ಹಗೆತನ, ಹೊಡೆ ದಾಟಗಳು ಉಂಟಾಗುತ್ತವೆ. ಹಿತ ಮಿತವಾದ ಮಾತಿನಿಂದ ಸರ್ವ ಸಂಪತ್ತು ನಮ್ಮದಾಗುತ್ತದೆ. ಮೃದು ಮಾತು, ಶಿಸ್ತು, ಸಂಯಮ, ಪರಸ್ಪರ ಗೌರವಿಸುವ ಮನೋವೃತ್ತಿ ಇವೆಲ್ಲವೂ ನಮ್ಮ ಅಧಿಕಾರ, ಪದವಿಗೆ ಮೆರುಗನ್ನು ತಂದು ಕೊಡುತ್ತವೆ. ಈ ಪ್ರಪಂಚದಲ್ಲಿ ಮಾತೇ ಮಾಣಿಕ್ಯ ಎಂಬುದನ್ನರಿತು ನಾವು ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳಬೇಕು. ಸವಿ ಮಾತಿನ ಸಿಹಿ ಬಾಳ್ವೆ ನಮ್ಮದಾಗಲಿ.

- ಭಾರತಿ ಎ., ಕೊಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next