ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಶಿಕ್ಷಕಿಯಾಗಿ ,ಗೆಳತಿಯಾಗಿ ,ಆಪ್ತಸಮಾಲೋಚಕಿಯಾಗಿ ಕಾರ್ಯನಿರ್ವಹಿಸುವ ಅಮ್ಮನಿಗೆ ಯಾವ ಉಡುಗೊರೆ ಕೊಟ್ಟರೆ ಅವಳಿಗೆ ಅವಿಸ್ಮರಣೀಯ ಆಗಬಹುದು ಹೇಳಿ? ಮನಸ್ಸಿಗೆ ಖುಷಿಯಾದಾಗ ಸಂಭ್ರಮಿಸಲು ಅಮ್ಮ ಬೇಕು ,ಬೇಜರಾದಾಗಲಂತೂ ಸಂತೈಸಲು ಅಮ್ಮ ಬೇಕೇ ಬೇಕು . ಬೈದಾಗ ಬೇಡವಾಗುವ ಅಮ್ಮ ಇಷ್ಟವಾದ ತಿಂಡಿಮಾಡಿಕೊಡುವಾಗ ಪ್ರೀತಿಪಾತ್ರಳಾಗುವಳು. ಹೀಗೆ ಸುಖ:,ದುಃಖ:,ಸಿಟ್ಟು ,ಆನಂದಗಳನ್ನು ಹಂಚಿಕೊಳ್ಳಲು ಇರುವ ಅಮ್ಮ ನಮಗೆ ದೇವರು ಕೊಟ್ಟ ವರವೇ ಸರಿ .
ನನ್ನ ಏಳಿಗಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟ ಅಮ್ಮನಿಗೆ, ಕೆಲಸಕ್ಕೆ ಸೇರಿದ ನಂತರ ಹಲವಾರು ರೀತಿಯ ಉಡುಗೊರೆಯನ್ನು ಕೊಟ್ಟೆ, ಅವಳಿಗೆ ಖುಷಿಯಾಯಿತು. ಆದರೆ ನಾನು ನಿರೀಕ್ಷಿಸಿದ ಸಂಭ್ರಮವಿರಲಿಲ್ಲ . ಅವಳ ಸಂಭ್ರಮ ನೋಡಿದ್ದು ನಾನು ಸ್ನಾತಕೋತ್ತರ ಪದವಿ ಗಳಿಸಿದಾಗ. ಕೆಲಸಕ್ಕೆ ಸೇರಿ ಒಳ್ಳೆಯ ಶಿಕ್ಷಕಿ ಎಂದು ಕರೆಸಿಕೊಂಡಾಗ ಮತ್ತೆ ಚಿಕ್ಕವಳಿರುವಾಗ ಸೈಕಲ್ ಬಿಡಲು ಪುಕ್ಕಲಿಯಾದ ನಾನು ದ್ವಿಚಕ್ರ ವಾಹನ ಕಲಿತು ಅವಳನ್ನು ಹಿಂದೆ ಕೂರಿಸಿಕೊಂಡು ತಿರುಗಿಸಿದಾಗ . ಆಗ ಗೊತ್ತಾಯಿತು ಅಮ್ಮನಿಗೆ ನಾನು ಕೊಡುವ ಭೌತಿಕ ಉಡುಗೊರೆಗಳಿಗಿಂತ ನಾನು ನನ್ನ ಜೀವನದಲ್ಲಿ ಮಾಡಿರುವ ಸಾಧನೆಗಳೇ ಅವಳಿಗೆ ನಾನು ಕೊಡುವ ವಿಶೇಷ ಉಡುಗೊರೆಯಾಗಿಯೆ೦ದು.
ಹೌದಲ್ಲವೇ, ನಾವು ಒಂದು ಬೀಜ ಬಿತ್ತಿದಾಗ ಅಥವಾ ಒಂದು ಗಿಡ ನೆಟ್ಟಾಗ ಅದರ ಬೆಳವಣಿಗೆಯನ್ನು ನೋಡಿ ಹೇಗೆ ಖುಷಿಪಡುತ್ತೀವೆಯೋ ಹಾಗೆ ನಮ್ಮನ್ನು ಬೆಳೆಸಲು ಜೀವ ತೇಯ್ದ ಅಮ್ಮ ನಮ್ಮ ಅಭಿವೃದ್ಧಿಯನ್ನು ಕಂಡು ಸಂತೋಷಪಡುತ್ತಾಳೆ .
ನನ್ನ ಅನುಭವದ ಪ್ರಕಾರ ಮಕ್ಕಳು ಒಬ್ಬ ಸತ್ಪ್ರಜೆಯಾಗುವುದು ತಾಯಿಯ ಸುಖ:ದುಃಖಗಳನ್ನು ಹಂಚಿಕೊಳ್ಳುವುದು ಅವಳಿಗೆ ನೀಡುವ ಒಂದು ಅತ್ಯಮೂಲ್ಯವಾದ ಉಡುಗೊರೆಯಾಗಿದೆ.
ರಾಧಿಕಾ ಮಲ್ಯ
ಉಡುಪಿ