ನಿಸ್ವಾರ್ಥ ಪ್ರೀತಿಯ ಗೋಪುರ ಅಮ್ಮ. ಆಕೆಯ ಬೆಚ್ಚನೆಯ ಮಡಿಲಲ್ಲಿ ತಲೆಯೂರಿ ಮಲಗಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ತೃಪ್ತಿ. ಅದೆಷ್ಟೇ ಒತ್ತಡವಿರಲಿ, ಅದೆಷ್ಟೇ ನೋವಿರಲಿ ಅಮ್ಮನ ಒಂದು ಧೈರ್ಯದ ಮಾತು ನೂರು ಆನೆಯ ಬಲ ಬಂದಷ್ಟು ಉತ್ಸಾಹಕ್ಕೆ ದಾರಿ. ಜಗತ್ತು ನಿಂತಿರುವುದೇ ಆಕೆಯ ನಿಷ್ಕಲ್ಮಶ ಪ್ರೀತಿ, ಕಾಳಜಿಯ ಮೇಲೆ ಎಂದರೆ ಅತಿಶಯೋಕ್ತಿಯಲ್ಲ.
ನವಮಾಸ ಹೊತ್ತು ಹೆರುವುದೆಂದರೆ ಒಂದು ಹೆಣ್ಣಿಗೆ ಮರುಜನ್ಮವಿದ್ದಂತೆ ಸರಿ ಆದರೂ ಅದೇ ನೋವನ್ನು ಖುಶಯಿಂದ ಅನುಭವಿಸುತ್ತಾಳೆ. ತನ್ನೆಲ್ಲಾ ನೋವನ್ನು ಕಣ್ಣಂಚಿನ ಕಂಬನಿಯಲ್ಲಿ ಹಿಡಿದಿಟ್ಟು, ತುಟಿಯಲ್ಲಿ ನಗುವೊಂದನ್ನು ಎಳೆದುಕೊಂಡು ತನ್ನವರಿಗಾಗಿ ಜೀವನ ಸಾಗಿಸುವಳಾಕೆ.
ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ತನ್ನ ಸರ್ವಸ್ವವನ್ನೆ ಮುಡಿಪಾಗಿಡುತ್ತಾಳೆ. ಪ್ರತಿದಿನ ಕೋಳಿ ಕೂಗುವುದಕ್ಕಿಂತ ಮೊದಲೆ ಎದ್ದು ದಿನದ ಕೆಲಸದಲ್ಲಿ ಮುಳುಗಿರುವವಳು ಎಂದರೆ ಅಮ್ಮ ಮಾತ್ರ. ಚಳಿಗಾಲವಿರಿ, ಮಳೆಗಾಲವಿರಲಿ ಎಂದಿಗೂ ತಾನು ಮಾಡುವ ಕೆಲಸಕ್ಕೆ ವಿರಾಮ ನೀಡದೆ, ಮಕ್ಕಳ ಮೊಗದ ನಗುವಿನಲ್ಲಿ ಖುಶಿಪಡುತ್ತಾಳೆ.
ಅದೆಷ್ಟೋ ಬಾರಿ ಕೋಪದಿಂದ ಗದರಿದಾಗಲೂ ಮರುಮಾತನಾಡದೇ ಮತ್ತೇ ಮತ್ತನೆಯ ದನಿಯಲ್ಲಿ ಅಮ್ಮಾ ಎಂದರೆ ಸಾಕು ಮತ್ತದೇ ಮುಗುಳ್ನಗೆ ಬೀರಿ ಸುಮ್ಮನಾಗುತ್ತಾಳೆ. ಪ್ರತಿ ಮಗಳ ಮೊದಲ ಗೆಳತಿಯಾಗಿ ತಾಳ್ಮೆಯಿಂದ ತನ್ನ ಜೀವನದ ಅನುಭವಗಳ ಮೂಲಕ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಮನೆಯ ಆಧಾರಸ್ಥಂಭ ಆಕೆ. ಅಮ್ಮನಿಲ್ಲದ ಮನೆ ಮರುಭೂಮಿಯಂತೆ ಭಾಸವಾಗುವುದಂತು ಸುಳ್ಳಲ್ಲ.
ಮನೆಯಿಂದ ಹೊರ ಹೋಗಿ ಬಂದಾಗ ಅಮ್ಮಾ ಎಂದು ಕೂಗಿ ಕರೆಯುವುದರಲ್ಲಿ ಏನೋ ಒಂದು ಆಹ್ಲಾದತೆ. ಮಾತು ಕಲಿಯುವ ಮಗು ತೊದಲು ನುಡಿಯಲ್ಲಿ ಮೊದಲು ಕಲಿಯುವ ಪದ ಅಮ್ಮ. ಆಕೆಯ ಮಮತೆ , ಪ್ರೀತಿ, ಕಾಳಜಿಯ ಹೋಲಿಕೆಗೆ ಬಹುಷಃ ಜಗತ್ತಿನಲ್ಲಿ ಏನೂ ಇಲ್ಲ. ಅಮ್ಮನಿಗೆ ಅಮ್ಮನೇ ಸಮ. ಎಲ್ಲ ಅಮ್ಮಂದಿರಿಗು ಅಮ್ಮಂದಿರ ದಿನಾಚರಣೆಯ ಶುಭಾಶಯಗಳು.
ಪವಿತ್ರಾ ಭಟ್
ವಿವೇಕಾನಂದ ಕಾಲೇಜು, ಪುತ್ತೂರು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ