Advertisement

ಹ್ಯಾಪಿ ಬರ್ತ್‌ ಡೇ ಟು ರೈಲು: ಹಳಿಯಿಂದ ದಿಲ್‌ಗೆ!

03:22 PM Aug 11, 2018 | |

 ರೈಲನ್ನು  ತಳಿರು, ತೋರಣ, ಬಲೂನುಗಳಿಂದ ಒಂದಷ್ಟು ಮಂದಿ ಸಿಂಗಾರಗೊಳಿಸುತ್ತಿದ್ದಾರೆ. ರೈಲುನಿಲ್ದಾಣದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಈ ಸಂಭ್ರಮಾಚರಣೆಯಲ್ಲಿ ಭಾಗಿಯಾದವರು ರೈಲು ಪ್ರಯಾಣಿಕರೇ. ಅದು ಆಯುಧ ಪೂಜೆಯ ದಿನವಂತೂ ಖಂಡಿತ ಅಲ್ಲ. ಅದು ಆಗಸ್ಟ್‌ 3. ಮನುಷ್ಯರು ಹುಟ್ಟಿದಹಬ್ಬ ಆಚರಿಸಿಕೊಳ್ಳುವುದನ್ನು ಕೇಳಿರುತ್ತೀರಿ, ಪ್ರಾಣಿಗಳ ಹುಟ್ಟುಹಬ್ಬ ಆಚರಿಸುವುದನ್ನು ಕೂಡಾ ಕೇಳಿರಬಹುದು. ಆದರೆ ರೈಲಿನ ಹುಟ್ಟಿದ ಹಬ್ಬ?!

Advertisement

ರೈಲು, ಬಹುಪಾಲು ಜನರಿಗೆ ಬರೀ ಸಾರಿಗೆ ವ್ಯವಸ್ಥೆ ಮಾತ್ರ ಆಗಿಲ್ಲ, ಬದುಕಿನ ಅವಿಭಾಜ್ಯ ಅಂಗ, ಲೈಫ್ ಲೈನ್‌! ಆಫೀಸ್‌ಗೆ ಹೊರಡುವ ಗಡಿಬಿಡಿಯಲ್ಲಿದ್ದಾಗ ರೈಲು ಬರೋದು ಒಂಚೂರು ತಡವಾದರೂ ಪ್ರಯಾಣಿಕರಲ್ಲಿ ಅಸಹನೀಯ ಚಡಪಡಿಕೆ, ಟೆನÒನ್‌… “ಇನ್ನು ಇದರ ಸಹವಾಸವೇ ಸಾಕು, ಬಸ್ಸಿನಲ್ಲಿ ಹಾಯಾಗಿ ಹೋಗಿಬಿಡೋಣ’ ಅಂದುಕೊಂಡರೂ ಮತ್ತೆ ಮರುದಿನ ಹೆಗಲಿಗೆ ಊಟದ ಡಬ್ಬಿ ನೇತು ಹಾಕಿಕೊಂಡು ಸ್ಟೇಷನ್ನಿನ ಪ್ಲಾಟ್‌ಫಾರಂನಲ್ಲಿ ಹಾಜರ್‌. ಅಂಥದ್ದೊಂದು ಪ್ರಯಾಣಿಕ ಮತ್ತು ರೈಲಿನ ನಡುವಿನ ಅವಿನಾಭಾವ ಕೊಂಡಿಯ ವಿಶೇಷ ಕಥೆಯೊಂದು ಇಲ್ಲಿದೆ. ಇದು ವಿಶೇಷ ಏಕೆಂದರೆ, ಪ್ರಯಾಣಿಕರು ಈ ರೈಲನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ ಪ್ರತಿವರ್ಷ ರೈಲಿನ ಹುಟ್ಟುಹಬ್ಬವನ್ನು ಆಚರಿಸ್ತಾರೆ! 

ರೈಲಿಗೂ ಹುಟ್ಟಿದ ಹಬ್ಬ
ರೈಲಿನ ಹುಟ್ಟಿದ ಹಬ್ಬವನ್ನು ನೋಡಬೇಕೆಂದರೆ ತುಮಕೂರಿಗೆ ಹೋಗಬೇಕು. ತುಮಕೂರು- ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ಎಂಬ ಹೆಸರಿನ ಈ ರೈಲು, ಬೆಳಿಗ್ಗೆ 8 ಗಂಟೆಗೆ ತುಮಕೂರು ಸ್ಟೇಷನ್‌ ತಲುಪುತ್ತೆ. ಬರ್ತ್‌ಡೇ ದಿನ, ರೈಲುನಿಲ್ದಾಣದಲ್ಲಿ ಕಂಡು ಬರೋ ಉತ್ಸಾಹ ನೋಡಬೇಕು. ರೈಲಿಗೆ ತೋರಣ, ಬಾಳೆ ಕಂದು ಕಟ್ಟೋದೇನು… ಹೂವಿನ ಹಾರ ಹಾಕಿ ಸಿಂಗರಿಸೋದೇನು.. ಬಣ್ಣ ಬಣ್ಣದ ಬಂಟಿಂಗ್ಸ್‌ ಕಟ್ಟಿ ಖುಷಿ ಪಡೋದೇನು… ಬಲೂನ್‌ ಊದಿ ಗೊಂಚಲು ಮಾಡಿ ನೇತು ಹಾಕೋದೇನು… ಎಲ್ಲರಲ್ಲೂ ಸಡಗರ! ಅಂದು ಬೃಹತ್ತಾದ ಕೇಕನ್ನು ಕತ್ತರಿಸುವವರು ರೈಲಿನ ಚಾಲಕ ಮತ್ತು ಸಿಬ್ಬಂದಿ ವರ್ಗ. ಪ್ರಯಾಣಿಕರು, ತಾವು ಕಷ್ಟಪಟ್ಟು ಹಿಡಿದಿದ್ದ ಸೀಟನ್ನು ಮರೆತು ಒಂದು ಕ್ಷಣ ರೈಲಿನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದರ ಹಿಂದಿರೋದು “ತುಮಕೂರು- ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆ’. ರೈಲು ಪ್ರಯಾಣಿಕರ ವೇದಿಕೆಯೇ? ಎಸ್‌, ಈ ವೇದಿಕೆ ಹುಟ್ಟಿಕೊಂಡಿದ್ದರ ಹಿಂದೆ, ಒಂದು ರೋಚಕ ಕತೆಯಿದೆ.

Advertisement

ಕವಿದ ಕಾರ್ಮೋಡ
ತುಮಕೂರು ನಿಲ್ದಾಣದಿಂದ ರೈಲು ಹಿಡಿಯುತ್ತಿದ್ದವರಲ್ಲಿ ಮುಕ್ಕಾಲು ಪಾಲು ಮಂದಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದವರು. ಪ್ರತಿದಿನ 8ಕ್ಕೆ ತುಮಕೂರು ಬಿಟ್ಟು ಆಫೀಸು ಸಮಯಕ್ಕೆ ಬೆಂಗಳೂರು ತಲುಪಿಬಿಡುತ್ತಿದ್ದರು. ಪ್ರಯಾಣದಲ್ಲಿ ಜೊತೆಯಾಗುತ್ತಿದ್ದವರು ಪ್ರತಿದಿನ ಭೇಟಿಯಾಗುತ್ತಿದ್ದುದರಿಂದ ಅವರ ನಡುವೆ ಸ್ನೇಹ ಬೆಳೆಯಿತು. ಬಾಂಧವ್ಯ ಹುಟ್ಟಿಕೊಂಡಿತು. ಆಗಿನ್ನೂ ರೈಲುಪ್ರಯಾಣಿಕರ ವೇದಿಕೆ ಹುಟ್ಟಿಕೊಂಡಿರಲಿಲ್ಲ. ಎಲ್ಲವೂ ಬುಡಮೇಲಾಗಿದ್ದು ಆ ರೈಲಿನ ವೇಳಾಪಟ್ಟಿ ಬದಲಾವಣೆಯಾದಾಗ. ದಶಕಗಳ ಕಾಲ ರೈಲಿನ ಹಳೆಯ ವೇಳಾಪಟ್ಟಿಗೆ ಜನರು ಒಗ್ಗಿಹೋಗಿದ್ದರು. ಅವರೆಲ್ಲರ ಬದುಕೇ ಬೆಳಿಗ್ಗೆ ರೈಲು ಬರುವ 8 ಗಂಟೆಯ ಸಮಯವನ್ನು ಆವಲಂಬಿಸಿತ್ತು. ಆ ವೇಳಾಪಟ್ಟಿಯನ್ನು ಬದಲಿಸಿ ಬೆಳಗ್ಗೆ 6.30ಕ್ಕೆ ಸೊಲ್ಲಾಪುರ- ಬೆಂಗಳೂರು ರೈಲು ತುಮಕೂರಿನಿಂದ ಹೊರಡುವಂತಾಯಿತು. ಇದು ತುಮಕೂರಿನ ಸಾವಿರಾರು ರೈಲು ಪ್ರಯಾಣಿಕರನ್ನು ಆತಂಕಕ್ಕೆ ದೂಡಿತು. 

ನಾಮಕರಣಗೊಂಡ ದಿನ
ಪ್ರಯಾಣಿಕರು ಕಂಗೆಡಲಿಲ್ಲ, ಕೈಕಟ್ಟಿ ಕೂರಲಿಲ್ಲ. ತಮಗಾಗಿರೋ ತೊಂದರೆಯನ್ನು ಪತ್ರರೂಪದಲ್ಲಿ, ಮನವಿ ರೂಪದಲ್ಲಿ ಇಲಾಖೆಯ ಅಧಿಕಾರಿಗಳಿಗೆ ತಲುಪಿಸಿದರು. ರೈಲ್ವೇ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಂಕಷ್ಟವನ್ನು ವಿವರಿಸಿದರು. ಅಧಿಕಾರಿಗಳಲ್ಲಿ ಹಲವರಿಗೆ ಪ್ರಯಾಣಿಕರ ತೊಂದರೆ ಅರ್ಥವಾದರೂ ಏನೂ ಮಾಡುವಂತಿರಲಿಲ್ಲ. ಈ ಸಮಯದಲ್ಲೇ ಪ್ರಯಾಣಿಕರ ನೆರವಿಗೆ ಬಂದಿದ್ದು ಆಗಿನ ಕೇಂದ್ರ ರೈಲ್ವೇ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ತುಮಕೂರಿನ ಪ್ರಯಾಣಿಕರು ತಂಡಗಳಲ್ಲಿ ಅವರನ್ನು ಭೇಟಿ ಮಾಡಿ ಪರ್ಯಾಯ ವ್ಯವಸ್ಥೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರು. ಇವೆಲ್ಲದರ ಪರಿಣಾಮ ಏನಾಯ್ತು ಅಂದರೆ, 2013, ಆಗಸ್ಟ್‌ 3ರಿಂದ ಹಳೆಯ ವೇಳಾಪಟ್ಟಿಯ ಪ್ರಕಾರ ತುಮಕೂರಿನಿಂದ ಬೆಂಗಳೂರಿಗೆ ಹೊಸ ರೈಲು ಸಂಚಾರ ಆರಂಭಿಸುವ ಘೋಷಣೆ ಹೊರಬಿತ್ತು. ರೈಲಿನ ಪುನರಾಗಮನದ ಖುಷಿಯನ್ನು ಆಚರಿಸಲು ಆಗಸ್ಟ್‌ 3ರಂದು ಬರ್ತ್‌ಡೇ ಮಾಡಬೇಕೆಂದು ಪ್ರಯಾಣಿಕರೇ ನಿರ್ಧರಿಸಿದರು. ಖರ್ಗೆಯವರ ಕೃಪೆಯಿಂದ ಸಂಚಾರ ಆರಂಭಿಸಿದ ಕಾರಣಕ್ಕೆ ಇದು “ಖರ್ಗೆ ರೈಲು’ ಎಂದೇ ಹೆಸರಾಗಿದೆ. ಪ್ರತಿ ವರ್ಷ ರೈಲಿನ ಹುಟ್ಟಿದ ಹಬ್ಬದ ಆಚರಣೆಯೂ ನಡೆದುಕೊಂಡು ಬಂದಿದೆ. 

ಕೇಕ್‌ ಕತ್ತರಿಸುವುದಕ್ಕೇ ಸೀಮಿತವಾಗಿಲ್ಲ
ರೈಲು ಪ್ರಯಾಣಿಕರ ವೇದಿಕೆಯ ಸಂಭ್ರಮ ಕೇಕ್‌ ಕತ್ತರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಯಾಣಿಕರ ಮಕ್ಕಳಲ್ಲಿ ಯಾರಾದರೂ ಉತ್ತಮ ದರ್ಜೆಯಲ್ಲಿ ಪರೀಕ್ಷೆ ಪಾಸಾಗಿದ್ದರೆ ಅವರನ್ನು ಗುರುತಿಸಿ ಸನ್ಮಾನಿಸುತ್ತಾರೆ. ದಶಕಗಳ ಕಾಲ ರೈಲಿನಲ್ಲಿ ಸಂಚರಿಸಿ, ವೃತ್ತಿಯಿಂದ ನಿವೃತ್ತರಾದವರನ್ನು ಅಭಿನಂದಿಸುತ್ತಾರೆ. ಅಲ್ಲದೆ, ಪ್ರಯಾಣಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸ್ಥಳೀಯ ಆಸ್ಪತ್ರೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಶಿಬಿರ ಏರ್ಪಡಿಸುತ್ತಾರೆ. ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನೂ ಆಯೋಜಿಸಿ ರಕ್ತ ಸಂಗ್ರಹಿಸಿ ಬ್ಲಿಡ್‌ಬ್ಯಾಂಕ್‌ಗೆ ನೀಡುತ್ತಾರೆ. ಬಹುಶಃ ಇಷ್ಟೆಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ರೈಲ್ವೇ ಪ್ರಯಾಣಿಕರ ವೇದಿಕೆ ಭಾರತದಲ್ಲೇ ಮೊದಲೇನೋ… 

ರೈಲಿಗೆ ಸ್ನಾನ
ಸಾರ್ವಜನಿಕ ಸ್ವತ್ತನ್ನು ಸ್ವಂತದ್ದು ಎಂಬಂತೆ ನೋಡುವ ವಿಶಾಲ ಮನೋಭಾವ ತೀರಾ ಅಪರೂಪ. ಆ ನಿಟ್ಟಿನಲ್ಲಿ ಈ ರೈಲಿನ ಪ್ರಯಾಣಿಕರು ವಿಶಾಲ ಮನೋಭಾವದವರು ಎನ್ನಬೇಕಾಗುತ್ತದೆ. ಏಕೆಂದರೆ ಇವರು ರೈಲನ್ನು ಮನೆಯಂತೆ ಕಾಣುತ್ತಾರೆ. ಬೋಗಿಗಳಲ್ಲಿ ಸ್ವತ್ಛತೆ ಕಾಪಾಡುತ್ತಾರೆ. ಯಾರಾದರೂ ಕಸ ಬಿಸಾಡುವುದು ಕಂಡುಬಂದರೆ ತಿಳಿ ಹೇಳುತ್ತಾರೆ. ಇಲ್ಲಿ ಕಡಲೆಕಾಯಿ ಮಾರುವವರು ಗಿರಾಕಿಗಳಿಗೆ ಎಕ್ಸ್‌ಟ್ರಾ ಪೇಪರ್‌ ಕೊಡುತ್ತಾರೆ. ಸಿಪ್ಪೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಇರಲಿ ಅಂತ. ಅಕ್ಟೋಬರ್‌ ತಿಂಗಳಲ್ಲಿ ಒಂದು ದಿನ ವೇದಿಕೆಯ ಸದಸ್ಯರೆಲ್ಲರೂ ಸೇರಿ ರೈಲಿಗೆ ಸ್ನಾನ ಮಾಡಿಸುತ್ತಾರೆ. ಇಂಥ ಕೆಲಸಗಳು ಎಲ್ಲೆಡೆ ನಡೆದಾಗ ಮಾತ್ರ ನಿಜಕ್ಕೂ “ಸ್ವಚ್ಚ ಭಾರತ’ ನಮ್ಮದಾಗುತ್ತದೆ. 

-ಕರಣಂ ರಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next