ಇಷ್ಟರಲ್ಲೇ ನಿನಗೊಂದು ಸಿಹಿ ಸುದ್ದಿ ನೀಡುತ್ತೇನೆ. ದಶಕದ ಕಾಯುವಿಕೆಗೆ ಧನ್ಯವಾದ ಹೇಳುತ್ತೇನೆ. ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತುವ ಕಾಲ ಹತ್ತಿರ ಬಂದಿದೆ. ಏನು ಅಂತ ನಿಮ್ಮ ಮನೆಗೆ ಬಂದಾಗ ಹೇಳ್ತೀನಿ.
ಸಹನೆ, ತಾಳ್ಮೆಗೆ ಇನ್ನೊಂದು ಹೆಸರೇ ಹೆಣ್ಣು ಅಂತಾರೆ. ನನ್ನ ಬಾಳಿನಲ್ಲಿ ಆ ಮಾತನ್ನು ನಿಜಗೊಳಿಸಿದವಳು ನೀನು. ಅದಕ್ಕೇ ಅಲ್ವಾ ನಾನು ನಿನಗೆ “ಭೂಮಿ’ ಅಂತ ಕರೆಯೋದು? ಅದೆಂಥಾ ಗುಣ ನಿನ್ನದು. ಕಾಲೇಜಿನಲ್ಲಿ ನಾ ನಿನ್ನ ಹಿಂದೆ ಬಿದ್ದಾಗ, “ಮೊದಲು ನಮ್ಮ ಓದು ಮುಗೀಲಿ. ಅಲ್ಲಿ ತನಕ ಈ ಪ್ರೀತಿ ಗೀತಿ ಅಂತ ಸುತ್ತಾಡೋದೆಲ್ಲ ಬೇಡ. ಕಾಲ್ ಕೂಡ ಮಾಡಬೇಡ’ ಎಂದಿದ್ದೆ. ಆದರೂ ನಾನು ಆಗಾಗ ಕಾಲ್ ಮಾಡುತ್ತಿದ್ದೆ. ನಮ್ಮ ಮಾತು, ಓದು- ಬರಹದ ಬಗ್ಗೆ ಬಿಟ್ಟು ಚೂರೂ ಆಚೀಚೆ ಹರಿಯದಂತೆ ನೋಡಿಕೊಳ್ಳುತ್ತಿದ್ದೆ ನೀನು. ಒಮ್ಮೆ ನಾನು ಪರೀಕ್ಷೆಯಲ್ಲಿ ಫೇಲ್ ಆದಾಗ, ನನಗಿಂತ ಹೆಚ್ಚು ಚಿಂತೆ ಮಾಡಿದವಳು. ಬೈದು ಬುದ್ಧಿ ಹೇಳಿ, ಭವಿಷ್ಯದ ಬಗ್ಗೆ ಕನಸುಗಳನ್ನು ಬಿತ್ತಿದವಳೇ ನೀನು. ಆ ವಿಷಯದಲ್ಲಿ ನೀನು ಅಮ್ಮನೇ.
ಇವತ್ತು ನಿನ್ನ ಹುಟ್ಟಿದಹಬ್ಬ. ಹತ್ತು ವರ್ಷಗಳ ಸಾಂಗತ್ಯದಲ್ಲಿ ಇದೇ ಮೊದಲ ಬಾರಿಗೆ ನಾ ನಿನಗೆ ಶುಭಾಶಯ ಕೋರುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನೀನು ನಿನ್ನ ಬರ್ತ್‌ಡೇ ಯಾವತ್ತು ಅಂತ ಹೇಳಲಿಲ್ಲ, ಗಿಫ್ಟ್ ಕೊಡಿಸು ಅಂತ ಪೀಡಿಸಲಿಲ್ಲ. ನಾನೇ ಕೇಳಿದರೂ, “ನಿಂಗ್ಯಾಕೆ ನನ್ನ ಬರ್ತ್‌ಡೇ ವಿಷಯ?’ ಅಂತ ಬಾಯಿ ಮುಚ್ಚಿಸುತ್ತಿದ್ದೆ.
ನಮ್ಮ ಓದು ಮುಗಿದು ಮೂರು ವರ್ಷ ಕಳೆಯಿತು. ಅವತ್ತೂಂದಿನ ನೀನಾಗೇ, “ನಾವಿಬ್ಬರೂ ಆದಷ್ಟು ಬೇಗ ಮದುವೆಯಾಗೋಣ’ ಅಂದೆ. ಆದರೆ, ನಾನು ತುಂಬಾ ಒರಟಾಗಿ ಏನೇನೋ ಹೇಳಿದೆ. ನಿನಗೂ ಮನೆಯಲ್ಲಿ ಮದುವೆಯಾಗು ಅಂತ ಒತ್ತಡ ಹೇರುತ್ತಿರಬಹುದು. ನನಗದು ಅರ್ಥವಾಗುತ್ತದೆ. ನಾನಾದರೂ ಅವತ್ತು ಏನು ಹೇಳಬೇಕಿತ್ತು? ಸರಿಯಾಗಿ ಒಂದು ಕೆಲಸವಿಲ್ಲ ನನಗೆ. ಅದ್ಹೇಗೆ ಬಂದು ನಿಮ್ಮಪ್ಪನ ಎದುರು ಮಾತನಾಡಲಿ?
ಆದರೆ, ಇಷ್ಟರಲ್ಲೇ ನಿನಗೊಂದು ಸಿಹಿ ಸುದ್ದಿ ನೀಡುತ್ತೇನೆ. ದಶಕದ ಕಾಯುವಿಕೆಗೆ ಧನ್ಯವಾದ ಹೇಳುತ್ತೇನೆ. ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತುವ ಕಾಲ ಹತ್ತಿರ ಬಂದಿದೆ. ಏನು ಅಂತ ನಿಮ್ಮ ಮನೆಗೆ ಬಂದಾಗ ಹೇಳ್ತೀನಿ. ನಾನು ಬಂದಾಗ, ನೀನು ಅದೇ ಮೊದಲ ಬಾರಿಗೆ ನನ್ನನ್ನು ನೋಡಿದವಳಂತೆ ನಾಚುತ್ತಾ ಉಪ್ಪಿಟ್ಟು, ಕಾಫಿ ಕೊಡ್ತೀಯಾ ತಾನೆ? ಮದುವೆಯಲ್ಲಿ ನಿನ್ನಿಷ್ಟದ ಹಸಿರು ಸೀರೆಯನ್ನುಟ್ಟು, ಹೊಸ ಜೀವನಕ್ಕೆ ಜೊತೆಯಾಗು.
ಹಾಂ, ಮರೆತೇ ಹೋದೆ, “ಹುಟ್ಟು ಹಬ್ಬದ ಶುಭಾಶಯಗಳು ಮೈ ಡಿಯರ್ ಭೂಮಿ’…
ನಾಗರಾಜ್ ಬಿ.ಚಿಂಚರಕಿ