ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಗಂಡನ ಸಂಪಾದನೆಯ ಕಂತೆಯನ್ನು ತನ್ನ ಪರ್ಸಿನಲ್ಲಿಟ್ಟುಕೊಂಡು, ತಾನು ಬಹಳ ಅನುಕೂಲಸ್ಥೆ ಎಂಬಂತೆ ಬಿಂಬಿಸುವ ಮಹಿಳೆಯರ ಮೊಗದಲ್ಲಿ “ವೈಯಕ್ತಿಕವಾಗಿ ತಾನೇನೂ ಸಾಧಿಸಿಲ್ಲ’ ಎಂಬ ಬೇಗುದಿ ಕಾಣಿಸಿದರೆ, ಕೂಲಿ ಮಾಡುವ ಮಹಿಳೆಯು ತನ್ನ ಸಂಬಳದಲ್ಲೇ ಮಗುವಿಗೆ ಬಿಸ್ಕತ್ತು ಕೊಳ್ಳುವಾಗ ಆಕೆಯ ಮುಖದಲ್ಲಿ ಸಂತೃಪ್ತಿ ಉಕ್ಕುತ್ತಿರುತ್ತದೆ…
ಮೂರು ದಶಕಗಳ ಹಿಂದೆ, ಆಗ ತಾನೇ ಪದವಿ ಪಡೆದಿದ್ದ ನನಗೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಲಭಿಸಿತ್ತು. ಉದ್ಯೋಗದ ಅವಶ್ಯಕತೆ ಇದ್ದುದರಿಂದ ಕೆಲಸಕ್ಕೆ ಸೇರಿ ಹಾಗೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೊಂದು ದಿನ ಸಂಜೆ ಆಗ ತಾನೇ ಆಫೀಸಿನಿಂದ ಮನೆಗೆ ಬಂದಾಗ, ಸ್ನೇಹಿತನ ಕುಟುಂಬದವರು ಮನೆಗೆ ಆಗಮಿಸಿದ್ದರು. ನನಗೂ ಸುಸ್ತಾಗಿದ್ದ ಕಾರಣ, ಮನೆಯಲ್ಲಿಯೇ ತಿಂಡಿ ಮಾಡುವ ಗೋಜಿಗೆ ಹೋಗದೆ, ಎಲ್ಲರಿಗೂ ಕಾಫಿಯ ಜೊತೆಗೆ ಬೇಕರಿಯಿಂದ ತಂದಿದ್ದ ಚಿಪ್ಸ್ ಹಾಗೂ ಸಮೋಸಾಗಳನ್ನು ತಟ್ಟೆಯಲ್ಲಿರಿಸಿದ್ದಾರೆ.
ಸಹಜವಾಗಿಯೇ, ಅತಿಥಿಗಳ ಚಿಕ್ಕ ಮಕ್ಕಳು ಖುಷಿಯಿಂದ ಕಣ್ಣರಳಿಸಿ ಸಮೋಸಾ ತಿನ್ನಲಾರಂಭಿಸಿದರು. ಆದರೆ, ಅವರಮ್ಮ ಮಾತ್ರ “ಬೇಕರಿ ತಿಂಡಿಗಳನ್ನು ನಮ್ಮ ಮಕಿಗೆ ಕೊಡಲ್ಲ. ಮನೇಲಿ ಮಾಡಿದ ತಿಂಡಿಗಳನ್ನ ಮಾತ್ರ ಕೊಡೋದು. ಇದನ್ನೆಲ್ಲ ತಿಂದರೆ ಹೊಟ್ಟೆ ಕೆಡ್ತದೆ. ನಮ್ಮೆಜಮಾನ್ರಿಗಂತೂ ಆಫೀಸಿನಿಂದ ಬರೋವಾಗ ನಾನು ಮನೇಲಿ ಇಲೇìಬೇಕು. ಮನೇಲಿ ಮಾಡಿದ ತಿಂಡೀನೇ ಕೊಡ್ಬೇಕು. ಅವರಾಗಿಯೇ ಎಂದೂ ಬಡಿಸ್ಕೊಂಡು ತಿನ್ನಲ್ಲ. ನಾನು ಕೆಲಸಕ್ಕೆ ಹೋಗಲ್ಲ. ಕೆಲ್ಸಕ್ಕೆ ಹೋಗೋ ಅವಶ್ಯಕತೆ ಇದೆ ಅಂತಲೂ ಅನ್ಸಿಲ್ಲ. ಇಬ್ರೂ ದುಡಿಯೋಕೆ ಹೊರಟರೆ ಮನೆ, ಮಕ್ಳನ್ನ ಗಮನಿಸೋರ್ಯಾರು?’ ಇತ್ಯಾದಿ ಅಂದರು.
ಅವರ ಮಾತುಗಳಲ್ಲಿ ಸ್ವಲ್ಪ ಮಟ್ಟಿಗೆ ನಿಜ ಇತ್ತಾದರೂ, ಅದನ್ನು ಪ್ರಸ್ತುತಪಡಿಸಿದ ರೀತಿಯಿಂದಾಗಿ ನನಗೆ ಅವಮಾನವಾದಂತಾಯ್ತು. ಉದ್ಯೋಗಕ್ಕೆ ಹೋಗುವ ಮಹಿಳೆಯರು ದುಡ್ಡಿಗೋಸ್ಕರ ಗೃಹಕೃತ್ಯಗಳನ್ನು ಗಮನಿಸದೆ, ಮನೆಮಂದಿಗೆ ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸದೆ ಇರುವವರು ಎಂಬಂತೆ ಬಿಂಬಿಸಿದ ಅವರ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚಿದವು. ನಿಜವಾಗಿ ನೋಡಿದರೆ, ಉದ್ಯೋಗಸ್ಥ ಮಹಿಳೆಗೆ ಬೆಳಗ್ಗೆ ಬೇಗನೆ ಎದ್ದು, ಅಡುಗೆ ಕಡೆ ಗಮನಿಸಿ, ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಿ, ಬುತ್ತಿಚೀಲ ತುಂಬಿಸಿ, ತಾನೂ ಸಿದ್ಧಳಾಗಿ, ಒಂದಿಷ್ಟು ತಿಂದು ಆಫೀಸಿಗೆ ಹೊರಡುವ ಕೆಲಸದ ಒತ್ತಡವಿರುತ್ತದೆ. ಕೆಲಸದ ಜಾಗದಲ್ಲಿ ನಿಗದಿತ ಜವಾಬ್ದಾರಿಗಳನ್ನು ನಿರ್ವಹಿಸಿ, ಮನೆಗೆ ಬಂದೊಡನೆ ಪುನಃ ರಾತ್ರಿಯ ಅಡುಗೆ ಕೆಲಸ. ಒಟ್ಟಿನಲ್ಲಿ, ಉದ್ಯೋಗಸ್ಥ ಮಹಿಳೆಗೆ ವಿಶ್ರಾಂತಿಯೆಂಬುದು ಸ್ವಲ್ಪವಾದರೂ ಸಿಗುವುದಾದರೆ ಅದು ವಾರದ ರಜಾದಿನದಂದು ಮಾತ್ರ.
ಬಹುತೇಕ ಉದ್ಯೋಗಸ್ಥ ಮಹಿಳೆಯರು ದುಡ್ಡಿಗಾಗಿ ಮಾತ್ರ ಕೆಲಸಕ್ಕೆ ಹೋಗುವುದಿಲ್ಲ ಹಾಗೂ ತನ್ನ ಸಂಪಾದನೆಯನ್ನು ತಾನೊಬ್ಬಳೇ ಖರ್ಚು ಮಾಡುವುದಿಲ್ಲ. ಮನೆಯ ಎಲ್ಲಾ ಸದಸ್ಯರ ಖರ್ಚಿಗೆ ಹೆಗಲು ಕೊಡುವುದರ ಜೊತೆಗೆ, ಉದ್ಯೋಗದಿಂದಾಗಿ ಲಭಿಸುವ ಜ್ಞಾನ, ಸ್ಥಾನಮಾನ, ಆರ್ಥಿಕ ಸ್ವಾತಂತ್ರ ಹಾಗೂ ಆತ್ಮವಿಶ್ವಾಸವನ್ನು ಸಂತೋಷದಿಂದ ಅನುಭವಿಸುತ್ತಾಳೆ. ಉದ್ಯೋಗವು ಮಹಿಳೆಯ ವ್ಯಕ್ತಿತ್ವವಿಕಸನಕ್ಕೆ ಪೂರಕ. ಸಂಬಳದ ಮೊತ್ತ ಸಣ್ಣದಿರಲಿ, ದೊಡ್ಡದಿರಲಿ, ಆಫೀಸಿನಲ್ಲಾಗಲಿ ಅಥವಾ ಸ್ವಯಂ ಉದ್ಯೋಗವಾಗಲಿ, ಅಲ್ಪ ಮೊತ್ತವಾದರೂ, ಸ್ವಂತ ಸಂಪಾದನೆಯು ಕೊಡುವ ಆತ್ಮವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಬದಲಾದ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗದ ಸ್ಥಿರತೆ ಕಡಿಮೆಯಿರುವುದರಿಂದ ಪತಿ-ಪತ್ನಿ ಇಬ್ಬರೂ ದುಡಿದು, ಮನೆಕೆಲಸ ಹಾಗೂ ಮಕ್ಕಳ ಪಾಲನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡರೆ, ಈಗಿನ ಕಾಲದಲ್ಲಿ ಆರ್ಥಿಕ ನೆಮ್ಮದಿಯಿರುತ್ತದೆ.
ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಗಂಡನ ಸಂಪಾದನೆಯ ಕಂತೆಯನ್ನು ತನ್ನ ಪರ್ಸಿನಲ್ಲಿಟ್ಟುಕೊಂಡು ತಾನು ಬಹಳ ಅನುಕೂಲಸ್ಥೆ ಎಂಬಂತೆ ಬಿಂಬಿಸುವ ಮಹಿಳೆಯರ ಮೊಗದಲ್ಲಿ “ವೈಯಕ್ತಿಕವಾಗಿ ತಾನೇನೂ ಸಾಧಿಸಿಲ್ಲ’ ಎಂಬ ಒಳಮನಸ್ಸಿನ ಬೇಗುದಿ ಕಾಣಿಸಿದರೆ, ಕೂಲಿ ಮಾಡುವ ಮಹಿಳೆಯು ತನ್ನ ಸಂಬಳದಲ್ಲಿ ಮಗುವಿಗೆ ಬಿಸ್ಕತ್ತು ಕೊಳ್ಳುವಾಗ ಆಕೆಯ ಮುಖದಲ್ಲಿ ಸಂತೃಪ್ತಿ ಉಕ್ಕುತ್ತಿರುತ್ತದೆ. ಉದ್ಯೋಗದ ರುಚಿಯನ್ನು ಅರಿಯದಿದ್ದರೆ, ಸ್ವಂತ ಸಂಪಾದನೆಯ ಅಭಿರುಚಿ ಮೂಡಲು ಸಾಧ್ಯವೇ?
ಹೇಮಮಾಲಾ ಬಿ.