ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜನಸಾಗರವೇ ಹರಿದು ಬಂದಿತ್ತು. ತಮ್ಮ ನೆಚ್ಚಿನ ನಾಯಕರು ಸಚಿವರಾಗುವ ಕ್ಷಣಗಳನ್ನು ಕಣ್ಮುಂಬಿ ಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರಿಂದ ರಾಜಭವನ ರಸ್ತೆ ಜನರಿಂದ ತುಂಬಿ ತುಳುಕಿತ್ತು.
ಬುಧವಾರ ಮಧ್ಯಾಹ್ನ 2.12ಕ್ಕೆ ಸಚಿವರ ಪ್ರಮಾಣ ವಚನ ಸ್ವೀಕಾರ ನಿಗದಿಯಾಗಿದ್ದರೂ 1 ಗಂಟೆ ಹೊತ್ತಿಗೆ ಬೆಂಗಳೂರು, ಸುತ್ತಮುತ್ತಲ ಜಿಲ್ಲೆಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಬರಲಾರಂಭಿಸಿದರು.
ಮಧ್ಯಾಹ್ನ 1 ಗಂಟೆ ವೇಳೆಗೆ ರಾಜಭವನ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಯಿತು. ಪಾಸ್ ಹೊಂದಿದವರಿಗಷ್ಟೇ ರಾಜಭವನ ಪ್ರವೇಶಕ್ಕೆ ಅವಕಾಶವಿದ್ದ ಕಾರಣ ಬಹಳಷ್ಟು ಮಂದಿ ರಸ್ತೆಯಲ್ಲೇ ಬೀಡುಬಿಟ್ಟಿದ್ದರು. ರಾಜಭವನದ ಹೊರಗೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ತಮ್ಮ ನೆಚ್ಚಿನ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಜೈಕಾರ ಕೂಗಿ, ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.
ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರಾಜಭವನ, ಸುತ್ತಮುತ್ತಲ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಆಗಮಿಸಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಟ್ರಾಫೀಕ್ ದಟ್ಟಣೆ ಬಿಸಿ: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ರಾಜಭವನ ರಸ್ತೆ ಸೇರಿದಂತೆ ಸುತ್ತಮುತ್ತಲ ಮೂರು ಗಂಟೆ ಕಾಲ ವಾಹನ ದಟ್ಟಣೆ ಉಂಟಾಗಿತ್ತು.
ರಾಜಭವನ ರಸ್ತೆ, ಅಂಬೇಡರ್ ವೀದಿ, ಚಾಲುಕ್ಯ ವೃತ್ತ, ಇನ್‌ಫೆಂಟ್ರಿ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಅರಮನೆ ರಸ್ತೆಗಳಲ್ಲಿ
ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ರಾಜಭವನ ರಸ್ತೆಯಲ್ಲಿ ದಿಢೀರ್ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ಸಂಚಾರ ಮಾರ್ಗಗಳ ಬಗ್ಗೆ ಮಾಹಿತಿ
ಯಿಲ್ಲದೆ ವಾಹನ ಸವಾರರು, ಚಾಲಕರು ಪರದಾಡಿದರು. ಮಹಿಳೆಯೊಬ್ಬರು ವಾಗ್ವಾದವನ್ನೂ ನಡೆಸಿದರು.
ಅಂಬೇಡ್ಕರ್ ವೀದಿ, ಕಬ್ಬನ್ ರಸ್ತೆ, ಎಂ.ಜಿ.ರಸ್ತೆ ಕಡೆಯಿಂದ, ಚಾಲುಕ್ಯ ವೃತ್ತದ ಬಳಿ ಪೊಲೀಸರು ಮಾರ್ಗದರ್ಶನ ನೀಡಿದರು. ಸಂಚಾರ ದಟ್ಟಣೆಯ ಎಫೆಕ್ಟ್ ಕೆ.ಆರ್.ವೃತ್ತ, ಅರಮನೆ ರಸ್ತೆಗಳ ಮೇಲೆ ಬೀರಿತು.