Advertisement

ಅನುಕ್ಷಣವೂ ಆನಂದಿಸುವ  ಗುಣಧರ್ಮ ನಮ್ಮದಾಗಲಿ

11:11 PM Jun 16, 2022 | Team Udayavani |

ನಾವಾರೂ ಭೂಮಿಗೆ ಬಯಸಿ ಬಂದವರಲ್ಲ. ಬಯಸಿ ಬರುವ ಅವಕಾಶವೂ  ಇಲ್ಲ. ಈ ಥರ ಬರಲು  ಸಾಧ್ಯವಾಗುವುದೂ ಇಲ್ಲ. ಹೀಗೆಂದ ಮೇಲೆ ನಮಗೆ ಹುಟ್ಟು ಆಕಸ್ಮಿಕ ಪ್ರಾಪ್ತಿ. ನಮ್ಮ ಹುಟ್ಟು ಮತ್ತು ಸಾವಿನ ನಡುವಿನ ಜೀವನ ಸವೆಸುವ ಅನಿವಾರ್ಯತೆಯಲ್ಲಿ ನಾವೆಲ್ಲರೂ ಬಂಧಿಗಳಾಗುತ್ತೇವೆ. ಈ ಸಂದರ್ಭ ಸುಖ, ದುಃಖ, ಸಂತೋಷ, ಬವಣೆ, ಬೇಗೆ,  ಸಂಘರ್ಷ, ಸಂದಿಗ್ಧತೆ, ಹೋರಾಟಗಳ ಎದುರಿಸುವಿಕೆಗೆ ಕಾರಣವಾಗುತ್ತೇವೆ. ಜನ್ಮ ತಾಳಿದ ಮೇಲಂತೂ ಪ್ರತಿಯೋರ್ವರೂ ಜೀವನಗೀತೆಯನ್ನು ಹಾಡಲೇಬೇಕು. ಜೀವನಗೀತೆಯು ಲಯಬದ್ಧವಾಗಿದ್ದರೆ ಜೀವನ ಗೆಲ್ಲುತ್ತದೆ, ಲಯ ತಪ್ಪಿದರೆ ವ್ಯಕ್ತಿ ವಿಫ‌ಲತೆ ಕಾಣುತ್ತಾನೆ.

Advertisement

ಜೀವನ ಎಂಬುದು ಕೂತೂಹಲಗಳ ಶರಧಿ. ಜೀವನ ನಾವು ಅಂದುಕೊಂಡಂತೆ ಸಾಗುವುದಿಲ್ಲ, ಸಾಗಿದರೂ ಕೆಲವು ಸನ್ನಿವೇಶಗಳಿಗೆ ಮಾತ್ರ ಸೀವಿತ. ವಿಧಿ ನಿಯಮ-ನಿರ್ಧಾರಿತ ಬದುಕನ್ನು ವಿವೇಕ- ವಿವೇಚನೆಯಿಂದ ಮುನ್ನಡೆ ಸಿದರೆ ಬಾಳು ಹಸನು, ಇಲ್ಲವಾದಲ್ಲಿ ಹತಾಶೆ- ನಿರಾಶೆಗಳ ಸುರಿಮಳೆ.

ನಮ್ಮ ಜೀವನ ನಮ್ಮ ಕೈಯಲ್ಲೇ ಇರುವುದರಿಂದ ಇದರ ನಿರ್ಮಾತೃರೂ ನಾವೇ ಆಗಿರುವುದರಿಂದ ಬಾಳಿನ ಸಫ‌ಲತೆ-ವಿಫ‌ಲತೆಗಳೂ ನಮ್ಮ ಮನೋ ಭೂಮಿಕೆಯನ್ನು ಆಧರಿಸಿವೆ. ಪ್ರಸ್ತುತ ದಿನಮಾನಗಳಲ್ಲಿ ಕಷ್ಟ, ಹತಾಶೆ, ಖನ್ನತೆ, ಗೊಂದಲಗಳ ಚರ್ಚೆ ಚರ್ವಿ ತಚರ್ವ ಣವಾಗಿವೆ. ಯುವ ಸಮೂಹದ ಹಲವರಂತೂ ಚಿಕ್ಕ-ಪುಟ್ಟ ಕಷ್ಟ-ನಷ್ಟದ ಪ್ರಸಂಗಗಳಿಗೆ ದಿಕ್ಕೇ ತೋಚದಂತೆ ಬಾಳು ಮುಗಿದು ಹೋದಂತೆ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಜೀವನವನ್ನು ಪ್ರೀತಿಸುವಲ್ಲಿ, ಬದುಕಿನ ಪ್ರತೀ ಘಳಿಗೆ ಯನ್ನು ಸಂತೋಷಿಸುವತ್ತ ಮುಗ್ಗರಿ ಸುವಿಕೆ. ಇದರಿಂದ ಪ್ರಫ‌ುಲ್ಲ ಮನಸ್ಸಿನಿಂದ ವಂಚಿತನಾಗುತ್ತಾನೆ.

ಬಾಳು ಎಂದ ಮೇಲೆ ವೇದನೆ, ಬವಣೆ, ಆನಂದ, ಕ್ಲೀಷೆ ಸಾಮಾನ್ಯ. ಬಾಳು ಇವೆಲ್ಲವುಗಳ ಸಂಗಮವೂ ಹೌದು. ಹೀಗಿದ್ದ ಮೇಲೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಅಸಂತೋಷವೇತಕೆ? ಜೀವನ ಅನುಕೂಲ-ಪ್ರತಿಕೂಲತೆಯ ಸರಪಳಿಯಿಂದ ಬಂಧಿತವಾಗಿರುವಾಗ ಹತಾಶೆಗೆ ದಾರಿ ಯಾತಕೆ?

ಜೀವನದ ಅನುಕ್ಷಣವೂ ಆನಂದಿಸುವ ಗುಣ ಧರ್ಮ ನಮ್ಮದಾಗಬೇಕು. ಪ್ರತೀ ವಿಚಾರದಲ್ಲಿ,  ತಾಪತ್ರಯಗಳಲ್ಲೂ  ಸೂಕ್ಷ್ಮ ಸಂಗತಿ, ಒಳ ದಾರಿ, ಹೊಳವು, ಖುಷಿಗಳು ಗೋಚರಿಸುತ್ತವೆ. ಇವನ್ನು ಗುರುತಿಸಿ ಪ್ರಭಾವಿತವಾಗಿಸುವ ಚಾಕಚಾಕ್ಯತೆ ಹೊಂದಿದಲ್ಲಿ ಬಾಳು ಸುಗಮವಾಗುವುದು ನಿಶ್ಚಯ.

Advertisement

“ನಿನ್ನೆಯ ಜೀವನ ಕತೆ, ನಾಳೆಯದು ಕಲ್ಪನೆ, ಇಂದಿನ ಜೀವನವೇ ಸತ್ಯ’ ಎಂಬುದನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳುವುದು ಸಮುಚಿತ.

ನಿನ್ನೆಗಳನ್ನು ಮರೆತು ನಾಳಿನತ್ತ ಸುಳಿಯದೆ ಇಂದಿನತ್ತ/ಈ ಕ್ಷಣದತ್ತ ಮಾತ್ರ ಬಾಳನ್ನು ಕೇಂದ್ರೀಕೃತಗೊಳಿಸಿದಲ್ಲಿ ಅಂತಃಕರಣ ಪ್ರವೇಶಿಸಿ ಇಲ್ಲಿನ ಸೌಂದರ್ಯವನ್ನು ನಿತ್ಯ ಅನುಭವಿಸುತ್ತಾ ಸಾಗಿದರೆ ಬಾಹ್ಯ ಸೌಂದಯವೂ ಸುಂದರವಾಗಿ ಗೋಚರಿಸುವುದು. ಹೀಗಾದಲ್ಲಿ  ಖನ್ನತೆಗಳ ಮಾತೆಲ್ಲಿ? ಹೋಲಿಕೆಯ ಬಾಳಿಗೆ ಚರಮಾಂಜಲಿ ಇಟ್ಟು ಸ್ವಂತಿಕೆಯ ವ್ಯಸನದತ್ತ ತೊಡಗಿದರೆ ಚಿಂತೆ-ವ್ಯಾಕುಲತೆಗಳ ಹಂಗು ಇರುವುದೇ?

ಇನ್ನು ಮನುಷ್ಯರ ಬದುಕು ಪ್ರಕೃತಿಯಂತೆ ರಮಣೀಯವಾಗಲು ಪ್ರಕೃತಿ ಏನು ತಾನೇ ಕೊಟ್ಟಿಲ್ಲ. ಕ್ಷಣಿಕ ಭೌತಿಕ ಸುಖದತ್ತ ಬೆಂಬೆತ್ತಿ ಹೊರಟ ಮಾನವನಿಗೆ ಪ್ರತ್ಯಕ್ಷವಾಗಿರುವ  ಶಾಶ್ವತರೂಪ ತಾಳಿ ನಿತ್ಯನೂತನವಾಗಿರುವ ಪ್ರಕೃತಿಯ ಅಂತರಂಗ ಹೊಕ್ಕಿ ಆ ಸೌಂದರ್ಯವನ್ನು ಆಸ್ವಾದಿಸುವತ್ತ ಎಡವಿದ ಮಾನವನಿಗೆ ಇನ್ನು ಹೇಗೆ ಶಾಂತಿ ದೊರಕೀತು. ಈ ಜ್ಞಾನ ಈತನಿಗೆ ಮೂಡುವುದೆಂತು?

ಹೀಗೆ ದೈನಂದಿನ ಆಗು-ಹೋಗುಗಳ ಪುಟ್ಟ ಪುಟ್ಟ ಸಂಗತಿಗಳ ಸಹಿತ ಎಲ್ಲವುಗಳಲ್ಲಿ ಮೇಲೆ ವಿಶ್ಲೇಶಿಸಿದಂತೆ ಸಂತಸದ ಕ್ಷಣಗಳ, ಭರವಸೆಯ ದೊಂದಿಯ ಬೆಳಕಿನ ಮಾರ್ಗದಲ್ಲಿ ಸಾಗಿದರೆ ಬಾಳಿನ ಅನುಕ್ಷಣವನ್ನು ಆನಂದಿಸಲು ಸಾಧ್ಯವಾಗುತ್ತದೆ. ಆದರೆ ನಮ್ಮ ಪಯಣ ಮಾತ್ರ ಸದಾ ಈ ದಿಕ್ಕಿನತ್ತಿರಬೇಕು.

-ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next