Advertisement

ಹನೂರಲ್ಲಿ ತ್ರಿಕೋನ ಸ್ಪರ್ಧೆ?

03:07 PM Jan 11, 2023 | Team Udayavani |

ಹನೂರು: ಎರಡು ಕುಟುಂಬಗಳ ನಡುವಿನ ರಾಜಕೀಯ ಜಿದ್ದಾಜಿದ್ದಿನ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದ ಹನೂರು ಕ್ಷೇತ್ರದಲ್ಲಿ ಈ ಬಾರಿ ರಾಜಕೀಯ ಚದುರಂಗದಾಟವೇ ಏರ್ಪಟ್ಟಿದ್ದು, ಮೂರು ಪಕ್ಷಗಳಿಂದ ಹೊಸ ಮುಖಗಳು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ.

Advertisement

ಕ್ಷೇತ್ರ ಈ ಹಿಂದಿನಿಂದಲೂ ಮಾಜಿ ಸಚಿವದ್ವಯರಾದ ದಿವಂಗತ ರಾಜೂಗೌಡ, ನಾಗಪ್ಪ ನಡುವಿನ ಕಾಳಗಕ್ಕೆ ಹೆಸರಾಗಿತ್ತು. ಈ ಇಬ್ಬರು ನಾಯಕರು ಕಾಲವಾದ ಬಳಿಕ ನಡೆದ ನಾಲ್ಕು ಚುನಾವಣೆಯಲ್ಲಿ ಒಂದು ಬಾರಿ ಮಾತ್ರ ಪರಿಮಳಾ ನಾಗಪ್ಪ ಆಯ್ಕೆ ಆಗಿದ್ದು, 3 ಬಾರಿ ರಾಜೂಗೌಡರ ಪುತ್ರ ನರೇಂದ್ರ ಚುನಾಯಿತರಾಗಿದ್ದಾರೆ. ಈಗಾಗಲೇ ಹ್ಯಾಟ್ರಿಕ್‌ ಸಾಧನೆಗೈದು, 4ನೇ ಬಾರಿ ವಿಜಯಪತಾಕೆ ಹಾರಿಸಲು ಸನ್ನದ್ಧರಾಗಿದ್ದಾರೆ.

ಯಾರ್ಯಾರು ಕಣದಲ್ಲಿ: ಈ ಬಾರಿಯ ಚುನಾವಣೆಗೆ ಈಗಾಗಲೇ ಕೆಲ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಬಿಜೆಪಿ ಮಾತ್ರ ಇನ್ನೂ ತಮ್ಮ ಹುರಿಯಾಳನ್ನು ಘೋಷಣೆ ಮಾಡಿಲ್ಲ, ಕಾಂಗ್ರೆಸ್‌ನಿಂದ 3ಬಾರಿ ಜಯಭೇರಿ ಬಾರಿಸಿರುವ ಶಾಸಕ ನರೇಂದ್ರ ಅವರಿಗೆ ಟಿಕೆಟ್‌ ಖಚಿತವಾಗಿದೆ. ಇನ್ನು ಜೆಡಿಎಸ್‌ನಿಂದ ನಿರೀಕ್ಷೆಯಂತೆಯೇ ಎಂ.ಆರ್‌.ಮಂಜುನಾಥ್‌ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಉಳಿದಂತೆ ಆಮ್‌ಆದ್ಮಿ ಪಕ್ಷದಿಂದ ಮತ್ತೀಪುರ ನಾಗೇಂದ್ರ, ಬಿಎಸ್‌ ಪಿಯಿಂದ ಪಂಚಾಕ್ಷರಿ ಅಥವಾ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿ ಬರುವ ಓರ್ವ ಅಭ್ಯರ್ಥಿ, ಇನ್ನುಳಿದಂತೆ ಪಕ್ಷೇತರರಾಗಿ ಪತ್ರಕರ್ತ ಪಟಾಸ್‌ ಪ್ರದೀಪ್‌, ಪೊನ್ನಾಚಿ ಸ್ನೇಹಜೀವಿ ರಾಜು, ಗುಂಡಾಪುರದ ಮುಜಾಮಿಲ್‌ ಪಾಷ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ?: ಹನೂರು ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯಿಂದ ಮಾಜಿ ಸಚಿವ ನಾಗಪ್ಪರ ಪುತ್ರ ಡಾ.ಪ್ರೀತನ್‌ ನಾಗಪ್ಪ ಸ್ಫರ್ಧಿಸಿ ಕೇವಲ 2500 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಪ್ರೀತನ್‌ ಸೋಲಿನ ಬಳಿಕ ಬೆಂಗಳೂರಿನಿಂದ ಸಾಲು ಸಾಲು ನಾಯಕರು ಹನೂರಿನತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆ ಟಿಕೆಟ್‌ ರೇಸ್‌ನಲ್ಲಿ ಪ್ರೀತನ್‌ ನಾಗಪ್ಪ ಜೊತೆ ಡಾ.ದತ್ತೇಶ್‌ಕುಮಾರ್‌. ನಿಶಾಂತ್‌ ಶಿವಮೂರ್ತಿ ಹಾಗೂ ಜನಧ್ವನಿ ವೆಂಕಟೇಶ್‌ ಅವರು ಟಿಕೆಟ್‌ ರೇಸನಲ್ಲಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಜನಧ್ವನಿ ವೆಂಕಟೇಶ್‌ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ವೇಳೆ ನಿಮಗೆ ಕ್ಷೇತ್ರದಲ್ಲಿ ರಾಜಕೀಯ ಹಿನ್ನೆಲೆಯಾಗಲಿ ಅಥವಾ ಸಮುದಾಯದ ಮತಗಳಾಗಲಿ ಇಲ್ಲದೆ ಇರುವ ಹಿನ್ನೆಲೆ ಸ್ಪರ್ಧೆಗೆ ಬಯಸುವುದು ಬೇಡ, ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿ ಪರ ಕೆಲಸ ಮಾಡಿ, ಒಂದೊಮ್ಮೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಎಸ್‌ಪಿಯತ್ತ ಮುಖ ಮಾಡಿದ್ರಾ ವೆಂಕಟೇಶ್‌?: ಬಿಜೆಪಿಯಿಂದ ಟಿಕೆಟ್‌ ದೊರೆಯುವ ಲಕ್ಷಣಗಳು ಕಡಿಮೆ ಆಗುತ್ತಿರುವುದನ್ನು ಅರಿತಿರುವ ಜನಧ್ವನಿ ವೆಂಕಟೇಶ್‌ ಅವರು ದೈಹಿಕವಾಗಿ ಮಾತ್ರ ಬಿಜೆಪಿಯಲ್ಲಿ ಉಳಿದಿದ್ದು, ಮಾನಸಿಕವಾಗಿ ಬೇರೆ ಪಕ್ಷದತ್ತ ಮುಖ ಮಾಡಿರುವ ಬಗ್ಗೆ ಕ್ಷೇತ್ರದಲ್ಲಿ ಚರ್ಚೆಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹಾಕಿರುವ ವೆಂಕಟೇಶ್‌ ಅವರು ಕೊಳ್ಳೇಗಾಲ, ಹನೂರು ಕ್ಷೇತ್ರಗಳ ಬಿಎಸ್‌ಪಿ ಮುಖಂಡರ ಮೂಲಕ ನಾಯಕರನ್ನು ಸಂಪರ್ಕಿಸಿದ್ದು, ಪಕ್ಷದ ಬಿ-ಫಾರಂಗಾಗಿ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ.

Advertisement

ಈ ನಿಟ್ಟಿನಲ್ಲಿ ಬಿಎಸ್‌ಪಿ ರಾಜ್ಯ ಮುಖಂಡರ ಸೂಚನೆ ಮೇರೆಗೆ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೊಳ್ಳೇಗಾಲ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಮುಳ್ಳೂರು ಕಮಲ್‌ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಾರೆ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರ ಮತ್ತೂಮ್ಮೆ ರಾಜ್ಯದ ಗಮನಸೆಳೆಯಲಿದ್ದು ಶಾಸಕ ನರೇಂದ್ರ 4ನೇ ಬಾರಿ ಅಧಿಕಾರ ಹಿಡಿಯಲಿದ್ದಾರೆಯೇ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡಲಿದ್ದಾರೆಯೇ ಕಾದು ನೋಡಬೇಕಿದೆ.

ಚುನಾವಣೆಯಲ್ಲಿ 3 ಪಕ್ಷಗಳ ನಡುವೆ ತ್ರಿಕೋನ ಸ್ಫರ್ಧೆ ಏರ್ಪಟ್ಟು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಗೆಲುವಿಗಾಗಿ ಸೆಣಸಾಡಿದರೆ, ಇನ್ನುಳಿದ ಪಕ್ಷ ಮತ್ತು ಪಕ್ಷೇತರರು ಪಡೆಯುವ ಮತಗಳ ಮೇಲೆ ಪ್ರಮುಖ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧಾರವಾಗಲಿದೆ.

ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next