ಹುಣಸೂರು: ಡಿ.7 ಬುಧವಾರ ನಡೆಯುವ ಹನುಮಜಯಂತಿ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ನೇತೃತ್ವದಲ್ಲಿ ನಗರದಾದ್ಯಂತ ಪೊಲೀಸರು ಪಥ ಸಂಚಲನ ನಡೆಸಿದರು.
ನಗರದ ಡಿವೈಎಸ್ಪಿ ಕಚೇರಿ ಆವರಣದಿಂದ ಡಿವೈಎಸ್ಪಿ ರವಿಪ್ರಸಾದ್ರ ಮಾರ್ಗದರ್ಶನದಲ್ಲಿ ಹೊರಟ ಪೊಲೀಸರ ಪಥ ಸಂಚಲನವು ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಸಂವಿಧಾನ ಸರ್ಕಲ್, ಹಳೆ ಬಸ್ ನಿಲ್ದಾಣ ರಸ್ತೆ, ಗೋಕುಲ ರಸ್ತೆ, ಶಬ್ಬೀರ್ನಗರ, ಕಲ್ಪತರು ವೃತ್ತ, ಟಿಎಪಿಸಿಎಂಎಸ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಗಣೇಶಗುಡಿ ಬೀದಿ, ಕೋಟೆ ಸರ್ಕಲ್, ಜೆ.ಎಲ್.ಬಿ.ರಸ್ತೆ, ಬಜಾರ್ ರಸ್ತೆ, ಅಕ್ಷಯಭಂಡಾರ್ ವೃತ್ತದ ಮೂಲಕ ಸಾಗಿ ಬಂದು ಡಿವೈಎಸ್ಪಿ ಕಚೇರಿ ಬಳಿ ಅಂತ್ಯಗೊಳಿಸಿದರು.
ಪಥ ಸಂಚಲನದಲ್ಲಿ ಎಸ್ಪಿ, ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳಾದ ಶ್ರೀನಿವಾಸ್,ಸಿ.ವಿ.ರವಿ.ಚಿಕ್ಕಸ್ವಾಮಿ ಸೇರಿದಂತೆ ಹುಣಸೂರು ಉಪ ವಿಭಾಗದ ಐದು ಮಂದಿ ಇನ್ಸ್ಪೆಕ್ಟರ್,22 ಮಂದಿ ಎಸ್ ಐಗಳು ಹಾಗೂ ಎಎಸ್ಐ, ಮುಖ್ಯ ಪೇದೆಗಳು, 300 ಮಂದಿ ಸಿಬಂದಿ ಸೇರಿದಂತೆ ಒಟ್ಟು 400 ಕ್ಕೂ ಹೆಚ್ಚು ಪೊಲೀಸರು ಪಾಲ್ಗೊಂಡಿದ್ದರು.
20 ಸಿಸಿ ಕ್ಯಾಮರಾ ಅಳವಡಿಕೆ
ಹನುಮಜಯಂತಿ ಮುಂಜಾಗ್ರತಾ ಕ್ರಮವಾಗಿ ನಗರದ ಆಯಕಟ್ಟಿನ ಪ್ರದೇಶ, ಪ್ರಮುಖ ವೃತ್ತಗಳಲ್ಲಿ ಪೊಲೀಸರ ಮನವಿ ಮೇರೆಗೆ ನಗರಸಭೆವತಿಯಿಂದ 20 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ಪೌರಾಯುಕ್ತೆ ಎಂ.ಮಾನಸ ತಿಳಿಸಿದರು.