ಹುಬ್ಬಳ್ಳಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಆರ್ಥಿಕ ಹಿಂದುಳಿದ ವರ್ಗ (ಇಡಬ್ಲೂಎಸ್) ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದು, ಈ ವರ್ಗಕ್ಕೆ ಅಲ್ಪಸಂಖ್ಯಾತರನ್ನು ಸೇರಿಸಿರುವುದು ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ಹಾಕಿದ್ದಾರೆ ಎಂದು ಮಾಜಿ ಮೇಯರ್ ಹಾಗೂ ಬ್ರಾಹ್ಮಣ ಸಮಾಜದ ಮುಖಂಡ ಹನುಮಂತ ಡಂಬಳ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇಡಬ್ಲೂಎಸ್ ನ್ನು ಕೆಲ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿದೆ. ಆದರೆ ರಾಜ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಈ ವರ್ಗಕ್ಕೆ ಮುಸ್ಲಿಂ ಸಮುದಾಯವನ್ನು ಸೇರ್ಪಡೆ ಮಾಡಿರುವುದು ಸರಿಯಲ್ಲ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಲಿದರು ಯಾವುದೇ ಪ್ರಯೋಜನವಾಗಿಲ್ಲ. ಇಡಬ್ಲೂಎಸ್ ಮುಸ್ಲಿಂ ಸಮುದಾಯವನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು. ಸಮಾಜಕ್ಕೆ ಆಗುವ ಅನ್ಯಾಯ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪಕ್ಷಕ್ಕಿಂತ ಸಮಾಜದ ಮೊದಲು ಎಂದರು.
ಸಮಾಜದ ಮುಖಂಡ ಎ.ಸಿ.ಗೋಪಾಲ ಮಾತನಾಡಿ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ 18-20 ಟಿಕೆಟ್ ನೀಡಬೇಕು. ಧಾರವಾಡ ಜಿಲ್ಲೆಯಲ್ಲಿ ಪಶ್ಚಿಮ ಹಾಗೂ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜದ ಮತಗಳು ನಿರ್ಣಾಯಕವಾಗಿದ್ದು, ಸಮಾಜದ ಪ್ರಮುಖರಿಗೆ ನೀಡಬೇಕು. ಯಾವ ಪಕ್ಷ ಸಮಾಜಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆಯೋ ಅಂತಹ ಪಕ್ಷಕ್ಕೆ ಬೆಂಬಲ ನೀಡಲು ಸಮಾಜ ನಿರ್ಧಿರಿಸಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಇಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಸಮಾಜದ ಗಣ್ಯರು ಸಭೆ ನಡೆಸಿ ರಾಜ್ಯ ಸರಕಾರ ಮೀಸಲಾತಿ ಕ್ರಮವನ್ನು ಖಂಡಿಸಿದ್ದಾರೆ. ಇದರ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದು. ಸಮಾಜಕ್ಕೆ ಒತ್ತು ನೀಡುವ ಪಕ್ಷಕ್ಕೆ ಬೆಂಬಲ. ಶೇ.100 ರಷ್ಟು ಮತದಾನ, ಸಮಾಜದ ಅಭ್ಯರ್ಥಿಯ ಪರವಾಗಿ ಚುನಾವಣೆ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.